ಸುಂಟಿಕೊಪ್ಪ ಅ.29 : ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣಪ್ರಾಂತ್ಯದ ಸುಂಟಿಕೊಪ್ಪದಲ್ಲಿರುವ ಇಮ್ಯಾನ್‌ವೆಲ್ ಚರ್ಚ್ ನಲ್ಲಿ ವಾರ್ಷಿಕ “ಬೆಳೆ ಹಬ್ಬ” ಶೃದ್ಧಾಭಕ್ತಿಯಿಂದ ಭಾನುವಾರ ನಡೆಯಿತು.
ಕಬ್ಬು, ಭತ್ತದ ಪೈರು, ಬಾಳೆಗೊನೆ, ಇನ್ನಿತರ ಫಲ ಪುಷ್ಪಗಳಿಂದ ಚರ್ಚ್ ನ್ನು ಅಲಂಕರಿಸಲಾಗಿತ್ತು.
ಮೈಸೂರು ವಲಯದ ಸಭಾಪಾಲಕ ರೆ.ಫಾ.ಡೆನ್ನಿಯಲ್ ಕೌಡಿನ್ಯ ಅವರು ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರಾರ್ಥನೆ ಸಲ್ಲಿಸಿದರು.
ಕೊಡಗು ವಲಯಾಧ್ಯಕ್ಷ ಮತ್ತು ಸಭಾಪಾಲಕ ರೆ.ಫಾ.ಜೈಸನ್‌ಗೌಡರ್ ಅವರು ಮಾತನಾಡಿ ನಮ್ಮ ದೇವಾಲಯಗಳ ವಾರ್ಷಿಕ ವಿಧಿವಿಧಾನಗಳಲ್ಲಿ ಬೆಳೆ ಹಬ್ಬವು ಪ್ರಮುಖವಾಗಿದೆ. ಸತ್ಯವೇದ ಅಥವಾ ಬೈಬಲಿನ ಪ್ರಕಾರ ಭಕ್ತರು ತಾವು ಬೆಳೆದ ಕೃಷಿ ಫಸಲನ್ನು ಮೊದಲ ಕಾಣಿಕೆಯಾಗಿ ದೇವರಿಗೆ ಸರ್ಮಪಿಸುವುದು ಪದ್ಧತಿಯಾಗಿದೆ. ಇದರ ಮೂಲಕ ನಮ್ಮನ್ನು ನಾವು ದೇವರಿಗೆ ಪುನಾರವರ್ತಿ ಕಾಣಿಕೆಯಾಗಿ ಸಮರ್ಪಿಸಿಕೊಳ್ಳುವುದಾಗಿದೆ ಎಂದು ಹೇಳಿದರು.
ಭಾನುವಾರದ ಬೆಳೆಹಬ್ಬವು ಪ್ರಾರ್ಥನೆ ಮತ್ತು ಪೂಜಾ ವಿಧಿ ವಿಧಾನಗಳಿಂದ ಪ್ರಾರಂಭವಾಗಿ ಆನಂತರ ವಿವಿಧ ಫಲ ವಸ್ತುಗಳ ಹರಾಜು ಪ್ರಕ್ರಿಯೆ ನಡೆಯಿತು. ಸಾಮೂಹಿಕ ಭೋಜನದ ಬಳಿಕ ಸಂಜೆಯವರೆಗೆ ಆಟೋಟ ಸ್ಪರ್ಧೆಗಳು ನಡೆದವು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸುಂಟಿಕೊಪ್ಪದ ಸಭಾಪಾಲಕ ಜೋನಿಯಲ್ ಸುಹಾಸ್ ಅವರ ಉಸ್ತುವಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಕ್ರೈಸ್ತ ಬಾಂಧವರು ಪಾಲ್ಗೊಂಡಿದ್ದರು.











