ಮಡಿಕೇರಿ ಅ.30 : ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಪೂರ್ವಭಾವಿ ಸಭೆಯು ನ.4 ರಂದು ನಡೆಯಲಿದೆ ಎಂದು ಮೂರು ನಾಡಿನ ತಕ್ಕಮುಖ್ಯಸ್ಥ ಅಡ್ಡಂಡ ಪ್ರಕಾಶ್ ಕುಶಾಲಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಂದು ಬೆಳಿಗ್ಗೆ 10.30ಕ್ಕೆ ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್’ನಲ್ಲಿ ನಡೆಯಲಿದ್ದು, ಮೂರು ನಾಡಿನ ತಕ್ಕ ಮುಖ್ಯಸ್ಥರು ಹಾಗೂ ನಾಡಿನವರು ಆಗಮಿಸಿ ಸಲಹೆ ಸಹಕಾರ ನೀಡುವಂತೆ ಮನವಿ ಮಾಡಿದರು.
ವರ್ಷಂಪ್ರತಿ ಪುತ್ತರಿ ಕಳೆದು ಮೂರು ದಿನಗಳಲ್ಲಿ ಇತಿಹಾಸ ಪ್ರಸಿದ್ಧದ ಕೈಮುಡಿಕೆ ಪುತ್ತರಿ ಕೋಲ್ ಮಂದ್ ನಡೆಯಲಿದ್ದು, ಈ ಸಂದರ್ಭದಲ್ಲಿ ಬೊಟ್ಟಿಯತ್ ನಾಡ್, ಕುತ್ತ್ ನಾಡ್ ಹಾಗೂ ಬೇರಳಿ ನಾಡ್ ಸೇರಿದಂತೆ ಈ ಮೂರು ನಾಡಿಗೆ ಸೇರಿದ ವಿವಿಧ ಊರುಗಳ ತಕ್ಕ ಮುಖ್ಯಸ್ಥರು ಸೇರಿದಂತೆ ಗ್ರಾಮಸ್ಥರು ಒಂದೆಡೆ ಸೇರಿ ಸಾಂಪ್ರದಾಯಿಕ ಕೋಲ್ ಮಂದ್ ಅನ್ನು ಸಂಭ್ರಮದಿಂದ ನಡೆಸಲಾಗುತ್ತದೆ ಎಂದರು.
ಈ ಸಂದರ್ಭ ಮೂರು ನಾಡಿನವರಿಗೆ ವಿವಿಧ ಪೈಪೋಟಿ ಸೇರಿದಂತೆ ಸಾರ್ವಜನಿಕರಿಗೂ ಮುಕ್ತವಾಗಿ ಪೈಪೋಟಿಯನ್ನು ಏರ್ಪಡಿಸಲಾಗುತ್ತದೆ. ಇದರ ರೂಪುರೇಷೆಗಳನ್ನು ಹಾಕಿಕೊಳ್ಳಲು ಹಾಗೂ ಹಬ್ಬವನ್ನು ಯಾವ ರೀತಿ ಆಚರಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಸಭೆಯಲ್ಲಿ ಕುತ್ತ್ ನಾಡ್ ತಕ್ಕರಾದ ಪಂದಿಮಾಡ ಅಚ್ಚಪ್ಪ, ಬೇರಳಿನಾಡ್ ತಕ್ಕರಾದ ಮಳವಂಡ ಭುವೇಶ್ ಸೇರಿದಂತೆ ವಿವಿಧ ಊರುತಕ್ಕರು ಪಾಲ್ಗೊಳ್ಳಲಿದ್ದಾರೆ.
ಈಗಾಗಲೇ ಸಭೆಯ ಬಗ್ಗೆ ಹಲವರಿಗೆ ಮಾಹಿತಿ ನೀಡಲಾಗಿದ್ದು, ಮಾಹಿತಿ ಇಲ್ಲದ ತಕ್ಕ ಮುಖ್ಯಸ್ಥರು ಸೇರಿದಂತೆ ಮೂರು ನಾಡಿನ ಗ್ರಾಮಸ್ಥರು ಸಭೆಗೆ ಆಗಮಿಸಿ ಸಲಹೆ ಸಹಕಾರ ನೀಡಬೇಕಿದೆ ಎಂದು ಬೊಟ್ಟಿಯತ್ ನಾಡ್ ತಕ್ಕ ಹಾಗೂ ಮೂರು ನಾಡಿನ ತಕ್ಕ ಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಮನವಿ ಮಾಡಿದರು.