ಮಡಿಕೇರಿ ಅ.30 : ಬೇಳೂರು ಮಠದ ಆಸ್ತಿಯಲ್ಲಿ ಅಕ್ರಮವಾಗಿ ಸಾಗುವಳಿ ಮಾಡುತ್ತಿರುವವರು ಭೂಮಿಯನ್ನು ಮಠಕ್ಕೆ ಹಿಂದಿರುಗಿಸಬೇಕು, ತಪ್ಪಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಚಿತ್ರದುರ್ಗ ಬೃಹನ್ಮಠದ ಆಡಳಿತಾಧಿಕಾರಿ ರೇಖಾ ಅವರು ಎಚ್ಚರಿಕೆ ನೀಡಿದ್ದಾರೆ.
ಸೋಮವಾರಪೇಟೆ ಸಮೀಪದ ಬೇಳೂರು ಗ್ರಾಮದಲ್ಲಿ ಚಿತ್ರದುರ್ಗ ಬೃಹನ್ಮಠಕ್ಕೆ ಸೇರಿದ ಮಠದ ಆವರಣದಲ್ಲಿ ಮಠ ಹಾಗೂ ಮಠದ ಆಸ್ತಿಯ ಕುಂದುಕೊರತೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿಂತೆ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ ಅವರು ಮಾತನಾಡಿದರು.
ಬೃಹನ್ಮಠದ ಆಸ್ತಿಯನ್ನು ಸಂರಕ್ಷಿಸಲು ಮತ್ತು ಕಾನೂನು ಹೋರಾಟ ನಡೆಸಲು ಹಿರಿಯ ಹಾಗೂ ಅನುಭವಿ ವಕೀಲರನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ. ಮಠದ ಆಸ್ತಿಯನ್ನು ಪ್ರಸ್ತುತ ಕೆಂಪು, ಹಳದಿ ಹಾಗೂ ಹಸಿರು ವಲಯಗಳನ್ನಾಗಿ ವಿಭಜಿಸಿ ಕಾನುನು ಘಟಕ ಕ್ರಮ ಕೈಗೊಳ್ಳಲು ಸಿದ್ಧವಾಗಿದೆ. ಆದ್ದರಿಂದ ಅಕ್ರಮವಾಗಿ ಮಠದ ಆಸ್ತಿಯನ್ನು ಬಳಸಿಕೊಳ್ಳುತಿರುವವರು ನೀವಾಗಿಯೇ ಹಿಂತಿರುಗಿಸಿದರೆ ಒಳ್ಳೆಯದು ಎಂದು ತಿಳಿಸಿದರು.
ಮಠದ ಆಸ್ತಿ, ಮರಗಳ ಹನನ ಸೇರಿದಂತೆ ಇನ್ನಿತರ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು ಮಠಗಳು ದಾಸೋಹಕ್ಕೆ ಮೊದಲ ಆದ್ಯತೆ ನೀಡುತ್ತವೆ. ಆದರೆ ಇಲ್ಲಿ ಅದ್ಯಾವುದೂ ನಡೆಯುತ್ತಿಲ್ಲ, ಆದ್ದರಿಂದ ನಾಳೆಯಿಂದಲೇ ಬೇಳೂರು ಮಠದಲ್ಲಿ ದಾಸೋಹ ಆರಂಭಿಸಬೇಕು ಎಂದು ವ್ಯವಸ್ಥಾಪಕ ಶಶಿಧರ್ ಅವರಿಗೆ ಆದೇಶಿಸಿದರು.
ಬೇಳೂರು ಮಠ, ಅಭಿಮಠ, ಗುತ್ತಿ ಮಠ, ಸೋಮವಾರಪೇಟೆ ವಿರಕ್ತ ಮಠ, ಗುತ್ತಿ ಮಠ ಹಾಗೂ ಚಂಗದ ಹಳ್ಳಿ ಮಠಗಳ ಅಭಿವೃದ್ಧಿಯೊಂದಿಗೆ ಎಲ್ಲಾ ಮಠಗಳಿಗೂ ಸ್ವಾಮೀಜಿಗಳನ್ನು ನೇಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ಸಾಂಬಾಶಿವಾಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಸತೀಶ್, ತಾಲೂಕು ಅಧ್ಯಕ್ಷ ಹಾಲಪ್ಪ, ಮಾಜಿ ಜಿಲ್ಲಾಧ್ಯಕ್ಷ ಡಿ.ಬಿ.ಧರ್ಮಪ್ಪ, ಗ್ರಾಮಸ್ಥ ಪ್ರಜ್ವಲ್, ವೀರಶೈವ ಮುಖಂಡರುಗಳಾದ ಸಂತ್ವೇರಿ ವಸಂತ್, ಚಂಗಡಹಳ್ಳಿಯ ಹಾಲಪ್ಪ, ಸಂತೋಷ್ ಕೊಡ್ಲಿಪೇಟೆ ಹಾಗೂ ನಿರ್ಮಲ ನಾಗರಾಜ್ ಅವರುಗಳು ಮಾತನಾಡಿದರು.
ಕೊಡಗಿನ ಅರಸರು ಸುಮಾರು 3 ಸಾವಿರ ಏಕರೆಗಳಿಗಿಂತ ಹೆಚ್ಚಿನ ಭೂಮಿಯನ್ನು ಮುರುಘಾ ಮಠಕ್ಕೆ ನೀಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಪ್ರಸ್ತುತ 550 ಏಕರೆ ಮಾತ್ರ ಇದೆ, ಹಾಗಾದರೆ ಉಳಿದ ಭೂಮಿ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದರು.
ಇಂದು ಬಹುತೇಕ ಭೂಮಿ ಅಕ್ರಮವಾಗಿ ಬಳಕೆಯಾಗುತ್ತಿದೆ, ಅವುಗಳನ್ನು ಮರಳಿ ಪಡೆಯಬೇಕು. ಅದು ಸಮಾಜದ ಆಸ್ತಿಯಾಗಿ ಉಳಿಯಬೇಕೆಂದು ಹೇಳಿದರು. ತೋಟದ ಒಳಗೆ ಇದ್ದ ಮರಗಳನ್ನು ಕಡಿದು ಮಾರಲಾಗಿದೆ, ಇದರ ಹಣ ಮಠಕ್ಕೆ ಸೇರಿದೆಯೇ ಎಂದು ಪ್ರಶ್ನಿಸಿದರು. 200 ಏಕರೆ ತೋಟವನ್ನು ಹೊರರಾಜ್ಯದ ವ್ಯಕ್ತಿಗಳಿಗೆ ಅತ್ಯಂತ ಕಡಿಮೆ ಹಣಕ್ಕೆ ಗುತ್ತಿಗೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದರು.
ಇದು ಹೆಸರಿಗಷ್ಟೇ ಮಠ, ಇಲ್ಲಿ ಹಸಿದು ಬರುವವರಿಗೆ ಅನ್ನ ಹಾಕಲಾರದಷ್ಟು ಹಾಳು ಬಿದ್ದಿದೆ. ಇಲ್ಲಿನ ಮಠಗಳಿಗೆ ಸ್ವಾಮೀಜಿಗಳು ಇಲ್ಲದೆ, ಧಾರ್ಮಿಕ ಚಟುವಟಿಕೆಗಳು ನಡೆಯದೆ ಪಾಳು ಬಿದ್ದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲಾ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ ಆಡಳಿತಾಧಿಕಾರಿಗಳು ನಿಮ್ಮೆಲ್ಲಾ ದೂರುಗಳ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಬೃಹನ್ಮಠದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಕುಮಾರ್, ಮಾನವ ಸಂಪನ್ಮೂಲ ಅಧಿಕಾರಿ ವಿಜಯ, ಕಾನೂನು ಸಲಹೆಗಾರ ಹಿರಿಯ ವಕೀಲ ವಿಶ್ವನಾಥ, ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಉಪಸ್ಥಿತರಿದ್ದರು.
ಬೇಳೂರು, ಶನಿವಾರಸಂತೆ, ಕೊಡ್ಲಿಪೇಟೆ, ಚಂಗಡ ಹಳ್ಳಿ ಸುತ್ತಮುತ್ತಲ ಗ್ರಾಮಗಳಿಂದಲೂ ಗ್ರಾಮಸ್ಥರು ಹಾಗೂ ವೀರಶೈವ ಮುಖಂಡರು ಆಗಮಿಸಿದ್ದರು. ಮಠದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
Breaking News
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*