ಮಡಿಕೇರಿ ಅ.31 : ಹುಲಿ ಉಗುರು ಸೇರಿದಂತೆ ವನ್ಯಜೀವಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಅರಣ್ಯ ಅಧಿಕಾರಿಗಳು ಯಾವುದೇ ಕಾರಣಕ್ಕು ಕಾನೂನು ಮೀರಬಾರದು. ಈ ವಿಚಾರದಲ್ಲಿ ಕೊಡಗಿನ ಜನ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿರುವ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು, ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರೊಂದಿಗೆ ಚರ್ಚಿಸಿ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವನ್ಯಜೀವಿ ಉತ್ಪನ್ನಗಳ ವಿಚಾರದಲ್ಲಿ ಅರಣ್ಯ ಅಧಿಕಾರಿಗಳಿಗೆ ಸಚಿವರು ಯಾವುದೇ ನಿರ್ದೇಶನ ನೀಡಿಲ್ಲ. ಅಧಿಕಾರಿಗಳು ತಮಗಿಷ್ಟ ಬಂದಂತೆ ವರ್ತಿಸುತ್ತಿದ್ದು, ಕಾನೂನು ಮೀರುತ್ತಿರುವುದು ಕಂಡು ಬಂದಿದೆ. ನಟ ಜಗ್ಗೇಶ್ ಅವರ ಪ್ರಕರಣ ಹೈಕೋರ್ಟ್ನಲ್ಲಿರುವುದರಿಂದ ಇದು ಇತ್ಯರ್ಥವಾಗುವವರೆಗೆ ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಬಾರದು ಎಂದು ಒತ್ತಾಯಿಸಿದರು.
ಈ ವಿಚಾರವಾಗಿ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ ವಾಸ್ತವ ಸ್ಥಿತಿಗತಿಯನ್ನು ಮನವರಿಕೆ ಮಾಡಿಕೊಡಲಾಗುವುದು ಮತ್ತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿಕೊಳ್ಳಲಾಗುವುದು. ಪೂರ್ವಜರ ಕಾಲದಿಂದಲೂ ಇರುವ ವನ್ಯಜೀವಿ ಉತ್ಪನ್ನಗಳಿಗೆ ಕಾನೂನಿನಲ್ಲಿ ರಿಯಾಯಿತಿ ಇದೆ. ದಾರಿಯಲ್ಲಿ ಹೋಗುವಾಗ ಹುಲಿ ಉಗುರು ಬಿದ್ದು ಸಿಕ್ಕಿತೆಂದರೆ ಅದು ಅಪರಾಧವಾಗಲು ಸಾಧ್ಯವಿಲ್ಲ. ಮೊದಲು ಅಧಿಕಾರಿಗಳು ಕಾನೂನನ್ನು ಅರಿತುಕೊಳ್ಳಬೇಕು. ಕಾನೂನು ಇರುವುದು ಜನರನ್ನು ರಕ್ಷಣೆ ಮಾಡಲು, ಆದ್ದರಿಂದ ಕೊಡಗಿನ ಜನ ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ ಎಂದರು.
::: ಅಭಿವೃದ್ಧಿ ಆರಂಭ :::
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಪೂರೈಸಲು ಸುಮಾರು 4 ತಿಂಗಳ ಕಾಲ ಆರ್ಥಿಕ ಹೊರೆಯಾಗಿತ್ತು. ಆದರೆ ಈಗ ಎಲ್ಲವೂ ಸರಿಯಾಗಿದ್ದು, ಅಭಿವೃದ್ಧಿ ಕಾರ್ಯಗಳು ಆರಂಭಗೊಳ್ಳಲಿವೆ. ವಿವಿಧ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಾಗುತ್ತಿದ್ದು, ಅನುದಾನ ಬಿಡುಗಡೆಯಾಗಲಿದೆ. ಕೊಡಗಿನಲ್ಲೂ ಅಭಿವೃದ್ಧಿ ಕಾರ್ಯಗಳು ವೇಗವನ್ನು ಪಡೆದುಕೊಳ್ಳಲಿದೆ ಎಂದು ಪೊನ್ನಣ್ಣ ಸ್ಪಷ್ಟಪಡಿಸಿದರು.
::: ಲಂಚ ಕೇಳಿದರೆ ವಿಡಿಯೋ ಮಾಡಿ :::
ಜಿಲ್ಲೆಯಲ್ಲಿ ಭ್ರಷ್ಟಾಚಾರ ಪ್ರಕರಣಗಳು ನಿಯಂತ್ರಣಕ್ಕೆ ಬಂದಿದೆ, ವಿರಾಜಪೇಟೆ ಕ್ಷೇತ್ರದಲ್ಲಿ ಲಂಚದ ಕುರಿತು ಯಾವುದೇ ದೂರುಗಳು ಕೇಳಿ ಬಂದಿಲ್ಲ. ಭ್ರಷ್ಟಾಚಾರ ನಿರ್ಮೂಲನೆ ಕೇವಲ ನನ್ನಿಂದ ಮಾತ್ರ ಸಾಧ್ಯವಿಲ್ಲ, ಜನರು ಕೂಡ ಜಾಗೃತರಾಗಬೇಕು. ಲಂಚ ಕೇಳಿದಾಕ್ಷಣ ನೀಡದೆ ಅದನ್ನು ಪ್ರತಿಭಟಿಸಬೇಕು, ಧ್ವನಿ ಮುದ್ರಣ ಅಥವಾ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಬೇಕು. ಸೂಕ್ತ ಸಾಕ್ಷ್ಯ ಸಹಿತ ದೂರು ನೀಡಿದರೆ ನಾನು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಅವರು ತಿಳಿಸಿದರು.
ಈಗಾಗಲೇ ಲೋಕಾಯುಕ್ತ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಭ್ರಷ್ಟಾಚಾರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ಹೇಳಿದರು.
::: ಆಪರೇಷನ್ ನಡೆಯಲ್ಲ :::
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಸಂಪೂರ್ಣ ಬಹುಮತವಿದೆ, ಆಪರೇಷನ್ ಕಮಲ ಮಾಡಲು ಸಾಧ್ಯವಿಲ್ಲ. 25 ಸಂಸದರನ್ನು ಹೊಂದಿರುವ ಬಿಜೆಪಿ 19 ಶಾಸಕರನ್ನು ಹೊಂದಿರುವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇದು ಸಂಸದರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಇರುವುದಕ್ಕೆ ಸಾಕ್ಷಿಯಾಗಿದೆ. ಅಭಿವೃದ್ಧಿ ಮಾಡಿದ್ದರೆ ಮೈತ್ರಿ ಇಲ್ಲದೆ ಗೆಲ್ಲಬಹುದಾಗಿತ್ತು, ಆದರೆ ಸೋಲಿನ ಹತಾಶೆಯಿಂದ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ವ್ಯಂಗ್ಯವಾಡಿದರು.
ತಮ್ಮ ಪಕ್ಷವನ್ನು ಉಳಿಸಿಕೊಳ್ಳುವುದಕ್ಕಾಗಿ ಮೈತ್ರಿ ಮಾಡಿಕೊಂಡಿರುವುದಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿಕೊಂಡಿದ್ದಾರೆ. ಇಲ್ಲಿ ಜನಹಿತದ ಬದಲು ಸ್ವಾರ್ಥ ರಾಜಕಾರಣ ಎದ್ದು ಕಾಣುತ್ತಿದೆ ಎಂದು ಟೀಕಿಸಿದ ಪೊನ್ನಣ್ಣ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸುಭದ್ರವಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಕೆಪಿಸಿಸಿ ಪ್ರಮುಖ ಟಿ.ಪಿ.ರಮೇಶ್ ಹಾಗೂ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ಉಪಸ್ಥಿತರಿದ್ದರು.
Breaking News
- *ಗಾಂಧಿ ವಿಚಾರಧಾರೆಗಳು, ಮೌಲ್ಯಗಳು ಜಗತ್ತಿನಲ್ಲಿ ಇಂದಿಗೂ ಪ್ರಸ್ತುತ : ಮುಖ್ಯಮಂತ್ರಿ ಸಿದ್ದರಾಮಯ್ಯ*
- *ಮಡಿಕೇರಿ : ಡಾ.ದೇವದಾಸ್ಗೆ ಶಾಸಕರಿಂದ ಸನ್ಮಾನ*
- *ಮಡಿಕೇರಿ ಕೊಡವ ಸಮಾಜದಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜನ್ಮದಿನಾಚರಣೆ*
- *ಕೊಡಗು ಎಸ್ಪಿ ಕಚೇರಿಯಲ್ಲಿ ಸರ್ವೋದಯ ದಿನಾಚರಣೆ*
- *ಬಿ.ಎ.ಆದಿಲ್ಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಟ್ರೋಫಿ*
- *ಅರ್ಚಕ ವಿಘ್ನೇಶ್ ಭಟ್ ಆರೋಗ್ಯ ವಿಚಾರಿಸಿದ ಶಾಸಕ ಎ.ಎಸ್.ಪೊನ್ನಣ್ಣ*
- *ಮಡಿಕೇರಿಯಲ್ಲಿ ‘ಹುತಾತ್ಮರ ದಿನಾಚರಣೆ’ : ಮಹಾತ್ಮ ಗಾಂಧಿ ಸ್ಮರಣೆ*
- *ಮಡಿಕೇರಿಯಲ್ಲಿ ಹುತಾತ್ಮರ ದಿನಾಚರಣೆ : ಮಹಾತ್ಮ ಗಾಂಧಿ ಸ್ಮರಣೆ*
- *ಚೆಯ್ಯಡಾಂಣೆಯಲ್ಲಿ ಪಿಂಚಣಿ ಆದಲತ್ : ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ಪ್ರತಿ ಹಸ್ತಾಂತರ*
- *ಸ್ಪ್ರಿಂಕ್ಲರ್ ಗೆ ಶೇ.90 ರಷ್ಟು ಸಹಾಯಧನ*