ವಿರಾಜಪೇಟೆ ನ.4 : ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ವಿರಾಜಪೇಟೆ ಕಾವೇರಿ ಪದವಿ ಕಾಲೇಜು ಕನ್ನಡ ಉಪನ್ಯಾಸಕ ಬಿ.ಬಿ.ಸುನೀಲ್ ಮಾತನಾಡಿ, ಕನ್ನಡ ಭಾಷೆಯು ಇತರ ಭಾಷೆಗಳಿಗಿಂತ ವಿಭಿನ್ನವಾಗಿದ್ದು, ವೈಶಿಷ್ಟ್ಯಪೂರ್ಣವಾಗಿದೆ. ಅನೇಕ ಶ್ರೇಷ್ಠ ಗ್ರಂಥಗಳು ಪ್ರಕಟಗೊಂಡಿದ್ದು, ಭಾರತೀಯ ಭಾಷೆಗಳಲ್ಲಿ ಎಂಟು ಜ್ಞಾನಪೀಠ ತನ್ನದಾಗಿಸಿಕೊಂಡಿದೆ. ವಿವಿಧ ಕಾಲಘಟ್ಟದಲ್ಲಿ ಕವಿಪುಂಗವರು ನೀಡಿದ ಕೊಡುಗೆಯಿಂದಾಗಿ ಕನ್ನಡದ ಸ್ಥಾನಮಾನ ಜಾಗತಿಕ ಮಟ್ಟದಲ್ಲಿ ಖ್ಯಾತಿಗಳಿಸಿದೆ. ಕನ್ನಡದ ಸಾಹಿತ್ಯ ಪ್ರಕಾರಗಳು, ನಮಗೆ ಈವರೆಗೆ ಲಭ್ಯವಾಗಿರುವ ಶಾಸನಗಳು, ಸಂಶೋಧನಾ ಕಾರ್ಯದಿಂದ ದೊರೆತ ಮಾಹಿತಿಗಳು ಭಾಷೆಯ ಹಿರಿಮೆಯನ್ನು ಸಾರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಐ.ಎಂ.ದಿಲನ್, ‘ಕರ್ನಾಟಕ’ ಎಂಬ ಹೆಸರಿನ ಮರುನಾಮಕರಣಗೊಂಡ ಸುವರ್ಣ ವರ್ಷದ ಈ ಸಂದರ್ಭಕ್ಕೆ ಸಾಕ್ಷಿಯಾದ ನಾವೇ ಧನ್ಯರು ಎಂದರು. ಭಾಷಾ ವಿಷಯದಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಕನ್ನಡ ಉಪನ್ಯಾಸಕ ಬಿ.ಇ.ಪ್ರದೀಪ್, ಗಣಕ ವಿಜ್ಞಾನ ಉಪನ್ಯಾಸಕಿ ಮಹೇಶ್ವರಿ ಇದ್ದರು.
ಕಾರ್ಯಕ್ರಮದಲ್ಲಿ ನಾಡಗೀತೆ ಸೇರಿದಂತೆ ಕನ್ನಡ ಸಂಸ್ಕೃತಿ ಪರಂಪರೆ ಸಾರುವ ಗೀತೆಗಳ ಸಮೂಹಗಾಯನದ ಜೊತೆಗೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಜರುಗಿತು.








