ವಿರಾಜಪೇಟೆ ನ.4 : ರಾಜ್ಯ ಸರಕಾರ ಕನ್ನಡ ಭಾಷೆ ಏಳಿಗೆಗಾಗಿ ದುಡಿಯುವ ಕೆಲಸ ನಿರಂತರವಾಗಿ ಮಾಡುತ್ತಿದೆ. ಕನ್ನಡ ಭಾಷೆಯ ರಕ್ಷಣೆಯಾದರೆ ಮಾತ್ರ ಕರ್ನಾಟಕ ರಾಜ್ಯವನ್ನು ಉಳಿಸಲು ಸಾಧ್ಯ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ವಿರಾಜಪೇಟೆ ಕರ್ನಾಟಕ ಸಂಘದ ವತಿಯಿಂದ ವಿರಾಜಪೇಟೆ ಪುರಭವನದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ ಸ್ವರ್ಧಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಬೆಳವಣಿಗೆಯಲ್ಲಿ ಕೊಡಗಿನ ಜನರ ಮಹತ್ವದ ಕೊಡುಗೆ ಇದೆ. ಸಾಹಿತ್ಯ, ಸಂಸ್ಕೃತಿ, ಭಾಷೆಯಲ್ಲಿ ಕನ್ನಡಕ್ಕೆ ಅವರು ಆದ್ಯತೆ ನೀಡಿದ್ದಾರೆ. ಕನ್ನಡ ನಾಡಿನ ಐತಿಹ್ಯವನ್ನು ಉನ್ನತವಾಗಿ ಬೆಳೆಸಬೇಕು ಹಾಗೂ ಈ ಐತಿಹ್ಯವನ್ನು ಎಲ್ಲಾರಿಗೆ ಸಾರುವ ಕೆಲಸ ಆಗಬೇಕು. ಕನ್ನಡ ವಿಜಯನಗರ ರಾಜರ ಕಾಲದಿಂದಲೂ ವಿಜೃಂಭಿಸುತ್ತ ಬಂದಿದೆ. ಇದನ್ನು ಇಂದಿನ ಯುವ ಜನಾಂಗದಿಂದ ಮುಂದಿನ ಪೀಳಿಗೆಯವರಗೆ ಉಳಿಸಿ ಬೆಳೆಸುವ ಕೆಲಸ ಆಗಬೇಕು. ಸಿದ್ದರಾಮಯ್ಯ ಸರಕಾರ ಕನ್ನಡಕ್ಕೆ ಹೆಚ್ಚಿನ ಒತ್ತು ನೀಡಿದ್ದು ಇದಕ್ಕೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಆಚರಣೆ ಸಾಕ್ಷಿ. ಹಿಂದೆ ಸಿದ್ದರಾಮಯ್ಯ ಸರಕಾರ ಒಂದರಿಂದ ಹತ್ತನೆ ತರಗತಿಯವರಗೆ ಕನ್ನಡ ಕಡ್ಡಾಯ ಮಾಡಿತ್ತು. ಆದರೆ ಉಚ್ಚ ನ್ಯಾಯಾಲಯ ಇದು ಸಂವಿಧಾನದ ಉಲ್ಲಂಘನೆ ಎಂದು ತಡೆ ಹಿಡಿಯಿತಾದರು ಕನ್ನಡ ಕಲಿಕೆಗೆ ಸರಕಾರ ಒತ್ತು ನೀಡಿದೆ ಎಂದು ಶಾಸಕ ಪೊನ್ನಣ್ಣ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುರಸಭ ಮುಖ್ಯಧಿಕಾರಿ ಚಂದ್ರಕುಮಾರ್, ಕನ್ನಡ ನಾಡಿನಲ್ಲಿ ಅಂದಿನಿಂದ ಇಂದಿನವರಗೆ ಅನೇಕ ಸಾಹಿತಿಗಳನ್ನು ಕವಿಗಳನ್ನು ದಾರ್ಶನಿಕರನ್ನು ನಾಡಿಗೆ ನೀಡಿದೆ. ಅದೇ ರೀತಿ ಅನೇಕ ಸಾಹಿತಿಗಳು ಕನ್ನಡ ಅಭಿಮಾನಿಗಳು ಕನ್ನಡದ ಉಳಿವಿಗಾಗಿ ಹೋರಾಟ ನಡೆಸಿದ್ದಾರೆ. ಆದರೆ ಇಂದು ಪರ ಭಾಷಿಕರು ಬದಕನ್ನು ಅರಸಿ ಬಂದು ನೆಲೆಗೊಂಡ ಕಾರಣ ಕನ್ನಡ ಭಾಷೆ ಕುಂಠಿತವಾಗಿ ತೊಂದರೆ ಆಗುತ್ತಿದೆ. ಆದರಿಂದ ಕನ್ನಡ ಉಳಿವಿಗಾಗಿ ಸಂಘ ಸಂಸ್ಥೆಗಳು ಕನ್ನಡಭಿಮಾನಿಗಳು ಕನ್ನಡ ಪರ ಕೆಲಸ ಮಾಡಬೇಕಿದೆ. ಕರ್ನಾಟಕ ರಾಜ್ಯ ಶ್ರೀಮಂತ ರಾಜ್ಯವಾಗಿದ್ದು ಉತ್ತಮ ಪರಿಸರ ನದಿಗಳ ನೈರ್ಸಗಿಕ ಸಂಪತ್ತಿನ ಸಮೃದ್ದಿ ರಾಜ್ಯವಾಗಿದೆ. ಅನೇಕ ಅನ್ಯ ರಾಜ್ಯದವರು ಇಂದು ಇಲ್ಲಿ ಬದಕನ್ನು ಕಟ್ಟಿಕೊಂಡು ಉತ್ತಮ ಬದಕು ರೂಪಿಸಿಕೊಂಡಿದ್ದಾರೆ. ಈ ರೀತಿ ಬೇರೆ ಯಾವ ರಾಜ್ಯದಲ್ಲಿ ಬದಕು ಸವೆಸಲು ಕಷ್ಟವಾಗಿದ್ದು ಇದು ಕನ್ನಡ ನಾಡಿನ ಜನರ ಹೃದಯವೈಶಾಲ್ಯತೆಗೆ ಸಾಕ್ಷಿ ಎಂದರು.
ಇದೇ ಸಂದರ್ಭ ಮಾಜಿ ಅಂತರಾಷ್ಟ್ರಿಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಮಾಳೇಟಿರ ಬೆಲ್ಲು ಬೋಪಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾರಂಭದಲ್ಲಿ ಸಂಘದ ಪದಾಧಿಕಾರಿಗಳು ಹಾಜರಿದ್ದರು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ವರ್ಧಾ ಕಾರ್ಯಕ್ರಮಗಳು ನಡೆದವು.









