ಮಡಿಕೇರಿ ನ.5 : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ಸಂವಿಧಾನದತ್ತವಾದ 9 ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ ಪಾದಯಾತ್ರೆಯ 5ನೇ ಹಂತ ನ.7 ರಿಂದ ಆರಂಭಗೊಳ್ಳಲಿದೆ.
ಜಿಲ್ಲೆಯ ವಿವಿಧೆಡೆ ಪಾದಯಾತ್ರೆ ನಡೆಸಿ ಮಂದ್ ಗಳಲ್ಲಿ ಕೊಡವ ಜನಜಾಗೃತಿ ಸಭೆಗಳನ್ನು ನಡೆಸಲಾಗುವುದು. ನ.10 ರಂದು ಬೆಳಗ್ಗೆ ಪಾಡಿನಾಡ್- ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಧ್ಯಾಹ್ನ ಕುಂಜಿಲ ಕಕ್ಕಬ್ಬೆ “ಕೆಂಜರಾಣೆ ಪಾಡಿನಾಡ್ಮಂದ್”ನಲ್ಲಿ ಜಾಗೃತಿ ಸಭೆಯ ಮೂಲಕ ಯಾತ್ರೆಯನ್ನು ಮುಕ್ತಾಯಗೊಳಿಸಲಾಗುವುದು ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಐದನೇ ಹಂತದಲ್ಲಿ ನ.7 ರಂದು ಬೆಳಗ್ಗೆ 10 ಗಂಟೆಗೆ ವಿರಾಜಪೇಟೆ ತಾಲ್ಲೂಕಿನ ಬೆಪ್ಪುನಾಡ್’ ನ ಅರಮೇರಿ ಮಂದ್, ಮಧ್ಯಾಹ್ನ 2.30 ಗಂಟೆಗೆ ಕಡಂಗ ಮುರೂರು ಮಂದ್, ನ.8ರಂದು ಬೆಳಗ್ಗೆ 10 ಗಂಟೆಗೆ ಕಡಿಯತ್ನಾಡ್ ನ ಕರಡದ “ಬೇಲಿಯಾಣೆ ಮಂದ್”, ಮಧ್ಯಾಹ್ನ 2.30 ಗಂಟೆಗೆ ಬಲಂಬೇರಿ ಮಂದ್, ನ.9 ರಂದು ಬೆಳಗ್ಗೆ 10 ಗಂಟೆಗೆ ಮಡಿಕೇರಿ ತಾಲ್ಲೂಕಿನ ನೂರಂಬಡನಾಡ್ ಮಂದ್, ಸಂಜೆ 4.30 ಗಂಟೆಗೆ ನೆಲಜಿನಾಡ್ ಮಂದ್ ನಲ್ಲಿ ಪಾದಯಾತ್ರೆ ಮತ್ತು ಜಾಗೃತಿ ಸಭೆ ನಡೆಯಲಿದ್ದು, ನ.10 ರಂದು ಬೆಳಗ್ಗೆ 9 ಗಂಟೆಗೆ ಪಾಡಿನಾಡ್- ಪಾಡಿ ಇಗ್ಗುತ್ತಪ್ಪ ದೇವ ಸನ್ನಿಧಿ ತಲುಪಿ, ಯಾತ್ರೆಯು ಮಧ್ಯಾಹ್ನ 12 ಗಂಟೆಗೆ “ಕೆಂಜರಾಣೆ ಪಾಡಿನಾಡ್ಮಂದ್’ನಲ್ಲಿ (ಕುಂಜಿಲ- ಕಕ್ಕಬ್ಬೆ) (ಮಡಿಕೇರಿ ತಾಲೂಕು) ಸಮಾರೋಪಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
::: ಬೇಡಿಕೆಗಳು :::
ಕೊಡವರ ಸ್ವಯಂ ಶಾಸನದ ಜನ್ಮ ಭೂಮಿಯನ್ನು ಕಾಯ್ದೆಬದ್ಧವಾಗಿ ಸ್ಥಿರೀಕರಣಗೊಳಿಸಲು ಭೌಗೋಳಿಕ ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕ ರಾಜಕೀಯ ಸ್ವ-ನಿರ್ಣಯ ಹಕ್ಕು ಸಂವಿಧಾನದ ವಿಧಿ 244 R/w 6 ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಕರ್ನಾಟಕದ ಸ್ವಾಧೀನದೊಳಗೆ ಆಂತರಿಕ-ರಾಜಕೀಯ ಸ್ವ- ನಿರ್ಣಯದ ಹಕ್ಕನ್ನು ಕೊಡವರಿಗೆ ಸಂಯೋಜಿಸಬೇಕು. ಆ ಮೂಲಕ ಭಾರತದ ಸಂವಿಧಾನ ಪರಿಶೀಲನಾ ಆಯೋಗವು ಶಿಫಾರಸ್ಸು ಮಾಡಿರುವ ವರದಿಯನ್ವಯ ಕೊಡವ ಲ್ಯಾಂಡ್ ಸ್ವಯಂ ಶಾಸನದ ಜನ್ಮ ಭೂಮಿಯನ್ನು ರಚಿಸಬೇಕು.
ಕೊಡಗಿನ ಆದಿಮಸಂಜಾತ ಕೊಡವ ಜನಾಂಗವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು. ಸಂವಿಧಾನದಲ್ಲಿ ರೇಸ್/ಮೂಲ ವಂಶಸ್ಥ ಜನಾಂಗಕ್ಕೆ ಯಾವುದೇ ವಿಶೇಷ ಪರಿಚ್ಛೇದಗಳ ಷರತ್ತು ಇಲ್ಲದಿರುವುದರಿಂದ ಕೊಡವರನ್ನು ಎಸ್.ಟಿ ಪಟ್ಟಿಗೆ ಸೇರಿಸುವುದು ವರ್ತಮಾನದ ಅನಿವಾರ್ಯ ಅವಶ್ಯಕತೆಯಾಗಿದೆ. ಆದ್ದರಿಂದ ಉಚ್ಚ ನ್ಯಾಯಾಲಯದ ಆದೇಶದಂತೆ, ಕೊಡವ ಜನಾಂಗದ ನ್ಯಾಯಯುತ, ಸೂಕ್ಷ್ಮ, ಸಮಗ್ರ ಕುಲಶಾಸ್ತ್ರ ಅಧ್ಯಯನ ಆರಂಭಿಸಬೇಕು.
ಕೊಡವ ಕಸ್ಟಮರಿ ಜನಾಂಗೀಯ “ಸಂಸ್ಕಾರ ಗನ್” ಹಕ್ಕುಗಳನ್ನು ಸಿಖ್ಖರ “ಕಿರ್ಪಾನ್” ಗೆ ಸಮಾನವಾಗಿ ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಕೊಡವರ “ಧಾರ್ಮಿಕ ಸಂಸ್ಕಾರ”ವೆಂದು ರಕ್ಷಿಸಬೇಕು.
ಮಾತೃ ಭಾಷೆ ಕೊಡವ ತಕ್ಕ್ ಅನ್ನು 8ನೇ ಶೆಡ್ಯೂಲ್ಗೆ ಸೇರಿಸಬೇಕು. ಸಂವಿಧಾನದ 347, 350, 350ಎ ಮತ್ತು 350ಬಿ ವಿಧಿಗಳ ಅಡಿಯಲ್ಲಿ ಪಠ್ಯಕ್ರಮ ಮತ್ತು ಆಡಳಿತದಲ್ಲಿ ಕೊಡವ ತಕ್ಕ್ ಅನ್ನು ಪರಿಚಯಿಸಬೇಕು. ಕೊಡವ ತಕ್ಕ್ ಅನ್ನು ರಾಜ್ಯದ 3ನೇ ಆಡಳಿತ ಭಾಷೆಯನ್ನಾಗಿ ಪರಿಗಣಿಸಬೇಕು.
ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಜಾನಪದ ಪರಂಪರೆಯನ್ನು ಜೀವಂತಗೊಳಿಸಲು, ವಿಶ್ವ ಕೊಡವಾಲಜಿ (ಕೊಡವ ಶಾಸ್ತ್ರದ ಜಾಗತಿಕ ಸಂಶೋಧನಾ ಅಧ್ಯಯನ ಕೇಂದ್ರ) ಸಂಶೋಧನಾ ಕೇಂದ್ರ ಮತ್ತು ಕೊಡವ ಸುಧಾರಿತ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ಸರ್ಕಾರವು ನಮಗೆ ಭೂಮಿಯನ್ನು ನೀಡಬೇಕು.
ಜೀವನದಿ ಕಾವೇರಿಗೆ “ಕಾನೂನು ವ್ಯಕ್ತಿ ಸ್ಥಿತಿಯೊಂದಿಗೆ ಜೀವಂತ ಘಟಕವನ್ನು ನೀಡಬೇಕು. ಕಾವೇರಿಯು ವೇದ ಕಾಲದ 7 ಪವಿತ್ರ ನದಿಗಳಲ್ಲಿ ಒಂದಾಗಿದೆ. ಜಲದೇವತೆ ಕಾವೇರಿಯ ಜನ್ಮಸ್ಥಳವನ್ನು ಸರ್ಕಾರವು ಪೂಜ್ಯ ಭಾವನೆಯಿಂದ ಗೌರವಿಸಬೇಕು. ಯಹೂದಿ ಜನರ ಮೌಂಟ್ ಮೊರೈಯಾ ದೇವನೆಲೆ ಮಾದರಿಯಲ್ಲಿ ಕೊಡವ ಜನಾಂಗದ ಪವಿತ್ರ ತೀರ್ಥಯಾತ್ರ ಕೇಂದ್ರವಾಗಿ ತಲಕಾವೇರಿಯನ್ನು ಪರಿಗಣಿಸಬೇಕು.
ಕಾವೇರಿ ನೀರಿನ 740 ಟಿಎಂಸಿ ವಾರ್ಷಿಕ ಇಳುವರಿಯಲ್ಲಿ, ಕೊಡವ ನೆಲದ ಪಾಲು 200 ಟಿಎಂಸಿ ಗಿಂತ ಹೆಚ್ಚು ಆಗಿದೆ. 1966 ರ ಹೆಲ್ಸಿಂಕಿ ನಿಯಮದ ಪ್ರಕಾರ ಕಾವೇರಿಯ ಪುಮುಖ ನೀರಿನ ಪಾಲನ್ನು ಕೊಡಗಿನಲ್ಲಿ ಬಳಸಿಕೊಳ್ಳುವಂತಾಗಬೇಕು.
ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿನ ಅರಮನೆಯ ಸಂಚಿನಲ್ಲಿನ ಘಟಿಸಿದ ಅಮಾಯಕ ಕೊಡವರ ರಾಜಕೀಯ ಹತ್ಯೆಗಳ ನೆನಪಿನ ಸ್ಮಾರಕಗಳನ್ನು ಸ್ಥಾಪಿಸಬೇಕು. ಕೊಡವ ಶೌರ್ಯವನ್ನು ಪ್ರತಿಬಿಂಬಿಸುವ ಉಲುಗುಲಿ-ಸುಂಟಿಕೊಪ್ಪ ಮತ್ತು ಮುಳ್ಳುಸೋಗೆಯಲ್ಲಿ ಕೊಡವರ ಯುದ್ಧ ಸ್ಮಾರಕಗಳನ್ನು ಸ್ಥಾಪಿಸಬೇಕು. ದೇವಾಟ್ ಪರಂಟ್ ನಲ್ಲಿ ಅಂತರರಾಷ್ಟ್ರೀಯ ಕೊಡವ ನರಮೇಧದ ಸ್ಮಾರಕಗಳನ್ನು ನಮ್ಮ ಸಂವಿಧಾನದ 49 ವಿಧಿ ಅಡಿಯಲ್ಲಿ ಮತ್ತು 1964 ರ ವೆನಿಸ್ ಘೋಷಣೆ ಯಂತೆ ನಿರ್ಮಿಸಬೇಕು. ಈ ಎರಡೂ ದುರಂತಗಳನ್ನು ವಿಶ್ವ ರಾಷ್ಟç ಸಂಸ್ಥೆಯ (ಯು.ಎನ್.ಓ) ಹತ್ಯಾಕಾಂಡದ ಸ್ಮರಣಾರ್ಥ ಪಟ್ಟಿಯಲ್ಲಿ ಸೇರಿಸಬೇಕು.
ದೇವಾಟ್ ಪರಂಟ್ ಪ್ರಾಚೀನ ಯುದ್ಧಭೂಮಿಯಾಗಿದೆ ಮತ್ತು ಇದು ಕೊಡವ ಜನಾಂಗದ ದೇಶ ಮಂದ್ ಆಗಿದೆ. ಪ್ರಾಚೀನ ಯುದ್ಧಭೂಮಿಗಳಾದ ಕುರುಕ್ಷೇತ್ರ, ಕಳಿಂಗ ಮತ್ತು ವಾಟರ್ಲ್ಲೂ ಗಳನ್ನು ಪಾರಂಪರಿಕ ತಾಣಗಳಾಗಿ ರಕ್ಷಿಸಿದ ಪರಿಯಲ್ಲೇ ಅವುಗಳಿಗೆ ಸಮಾನ ಪ್ರಾಮುಖ್ಯತೆಯಾಗಿ ಸಂರಕ್ಷಿಸಬೇಕು.
ಜನಸಂಖ್ಯಾ ಬದಲಾವಣೆಯನ್ನು/ಪಲ್ಲಟವನ್ನು ತಡೆಗಟ್ಟಲು, ನಮ್ಮ ಆನುವಂಶಿಕ ಸಮುದಾಯ ಆಸ್ತಿಗಳನ್ನು ಮತ್ತು ನಮ್ಮ ಆಧ್ಯಾತ್ಮಿಕ ಪಾರಮಾರ್ಥಿಕ ನೆಲೆಗಳಾದ ಮಂದ್, ದೇವಕಾಡ್, ತೂಟ್ಂಗಲ, ಕ್ಯಾಕೊಳ ಗಳನ್ನು ರಕ್ಷಿಸಬೇಕು. ಕೊಡವರ ಜನ್ಮ ಭೂಮಿಯಲ್ಲಿ ನಮ್ಮ ಐತಿಹಾಸಿಕ ನಿರಂತರತೆಗೆ ಶಾಸನಬದ್ಧ ಅನುಮೋದನೆಗಾಗಿ, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನ ಮಾದರಿಯಲ್ಲಿ ಇನ್ನರ್ ಲೈನ್ ರ್ಮಿಟ್ ಅನ್ನು ನೀಡಬೇಕು.
ಹೊಸ ಸಂಸತ್ತಿನಲ್ಲಿ ಕೊಡವ ಪ್ರಾತಿನಿಧ್ಯವನ್ನು ನೀಡಬೇಕು. ಕೇಂದ್ರ ವಿಸ್ತಾ 9 ಡಿಸೆಂಬರ್ 1946 ರಿಂದ 24 ಜನವರಿ 1950 ರವರೆಗೆ, ಕೊಡವ ಜನಾಂಗದ ಸದಸ್ಯರು ಭಾರತದ ಸಂವಿಧಾನ ಸಭೆಯಲ್ಲಿ ಕೂರ್ಗ್/ ಕೊಡವ ಪ್ರಾಂತ್ಯವನ್ನು ಪ್ರತಿನಿಧಿಸಿದ್ದರು. ಈಗ ಮತ್ತೆ ಕೊಡವರಿಗೆ ಅವಕಾಶ ನೀಡಬೇಕು ಎಂದು ಪಾದಯಾತ್ರೆಯ ಮೂಲಕ ಸರ್ಕಾರದ ಗಮನ ಸೆಳೆಯುವುದಾಗಿ ನಾಚಪ್ಪ ತಿಳಿಸಿದ್ದಾರೆ.
Breaking News
- *ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ಅರ್ಚಕರ ಮೇಲೆ ಹಲ್ಲೆ : ಕಾಂಗ್ರೆಸ್ ಕಾರ್ಯಕರ್ತ ಅಮಾನತು*
- *ಕಟ್ಟೆಮಾಡು ಗ್ರಾಮದ ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದ ಪ್ರಧಾನ ಅರ್ಚಕ ವಿಘ್ನೇಶ್ ಭಟ್ ಮೇಲೆ ಹಲ್ಲೆ*
- *ಸಿಎನ್ಸಿಯಿಂದ ಅಂತರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ದಿನ ಆಚರಣೆ*
- *ಪದ್ಮಶ್ರೀ ಪುರಸ್ಕೃತ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಅಭಿನಂದನೆ*
- *‘ಕೃತಕ ಅಂಗಾಂಗಗಳ ಜೋಡಣೆ ಮತ್ತು ಆರೋಗ್ಯ ತಪಾಸಣೆ’ ಶಿಬಿರ : ಬಡವರಿಗೆ ಅಗತ್ಯ ಆರೋಗ್ಯ ಸೌಲಭ್ಯ : ಸಚಿವ ಭೋಸರಾಜು*
- *ರಾಜ್ಯದಲ್ಲೇ ವಿನೂತನ ಪ್ರಯತ್ನ : ‘ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ’ ಉದ್ಘಾಟನೆ*
- *ಕೆ.ಎಸ್.ದರ್ಶನ್ ಗೆ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ*
- *ಕಾಲ್ಚೆಂಡು ಪಂದ್ಯಾವಳಿ : ತ್ರಿವೇಣಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಚಾಂಪಿಯನ್*
- *ವಿರಾಜಪೇಟೆ : ವಿವಿಧತೆಯಲ್ಲಿ ಏಕತೆಕಂಡಿರುವ ಸಂವಿಧಾನವನ್ನು ಗೌರವಿಸುವಂತಾಗಬೇಕು : ವಕೀಲ ಪುಷ್ಪರಾಜ್*
- *ಸೋಮವಾರಪೇಟೆ : ಅಗ್ನಿಶಾಮಕ ಠಾಣೆಯ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*