ವಿರಾಜಪೇಟೆ, NEWS DESK ಅ.17: ಸಮೀಪದ ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಹಾಗೂ ವನದುರ್ಗಾ ದೇವಿಗೆ ವಿಶೇಷ ಪೂಜಾ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್ ಹಾಗೂ ವಾಮನ ಮೂರ್ತಿ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಉತ್ಸವದ ಅಂಗವಾಗಿ ಬೆಳಗ್ಗಿನಿಂದಲೇ ಪೂಜಾ ಕೈಂಕರ್ಯಗಳು ಆರಂಭಗೊಂಡವು. ದೇವಸ್ಥಾನದ ಆವರಣದಲ್ಲಿರುವ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಶ್ರೀ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ವನದುರ್ಗಾ ದೇವಿಗೆ ಸಂಕಲ್ಪ ಪೂರ್ವಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಉತ್ಸವದ ಪ್ರಯುಕ್ತ ದೇವಿಗೆ ಅಲಂಕಾರ ಪೂಜೆ, ಹಾಲಿನ ಅಭಿಷೇಕ, ಸಿಯಾಳದ ಅಭಿಷೇಕ ಹಾಗೂ ಪಂಚಾಮೃತ ಅಭಿಷೇಕಗಳನ್ನು ನೆರವೇರಿಸಲಾಯಿತು. ಬಳಿಕ ಶ್ರೀದೇವಿ ಅಷ್ಟೋತ್ತರ ಪಠಣ, ಪಾರಾಯಣ, ಕುಂಕುಮಾರ್ಚನೆ ಹಾಗೂ ಪುಷ್ಪಾರ್ಚನೆ ಸೇವೆಗಳು ನಡೆದವು. ಭಕ್ತಾದಿಗಳು ದೇವಿಗೆ ವಿಶೇಷ ಪೂಜೆ ಹಾಗೂ ಹಣ್ಣುಕಾಯಿ ಸೇವೆಗಳನ್ನು ಸಲ್ಲಿಸಿ ಪ್ರಾರ್ಥಿಸಿದರು.
ನಂತರ ಅರ್ಚಕರು ಮಹಾಪೂಜೆಯನ್ನು ನೆರವೇರಿಸಿ, ಭಕ್ತಾದಿಗಳು, ಗ್ರಾಮ ಹಾಗೂ ನಾಡಿನ ಸುಭಿಕ್ಷೆ ಮತ್ತು ಒಳಿತಿಗಾಗಿ ಪ್ರಾರ್ಥಿಸಿದರು. ಉತ್ಸವಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಬೇಟೋಳಿ, ಹೆಗ್ಗಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಬಿ.ಪಿ. ಸಂತೋಷ್, ಉಪಾಧ್ಯಕ್ಷ ನಂದ ಬಿ.ಜಿ., ಕಾರ್ಯದರ್ಶಿ ಬಿ.ಎನ್. ಶಾಂತಿಭೂಷಣ್, ಖಜಾಂಚಿ ಜ್ಯೋತಿ ಹಾಗೂ ಸದಸ್ಯರಾದ ಸುಮನ, ಸಂಗೀತ, ವೀಣಾ ಶಶಿಧರ್, ರಾಮಶರ್ಮ ಮತ್ತು ಸೀತಮ್ಮ ಉಪಸ್ಥಿತರಿದ್ದರು.




































