ಮಡಿಕೇರಿ, ಅ. 15 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕದ ವತಿಯಿಂದ ಕಡಗದಾಳು ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಅ. 15ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ. ಮಾತನಾಡಿ, ಸಮಾಜಕ್ಕೆ ನಾವು ನೀಡುವ ಕೊಡುಗೆಯೇ ನಮಗೆ ಮರಳಿ ದೊರೆಯುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಶಿಬಿರದಲ್ಲಿ ಕಲಿತ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಸೇವೆಯ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. “ಕನಸು ಕಾಣಿರಿ, ಗುರಿಯನ್ನು ಸಾಧಿಸಿರಿ” ಎಂಬ ಸಂದೇಶದೊಂದಿಗೆ ವಿದ್ಯಾರ್ಥಿಗಳಿಗೆ ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಪ್ರೇರಣೆ ನೀಡಿದರು. ಕಾರ್ಯಕ್ರಮವನ್ನು ಕಡಗದಾಳು ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿಕಿರಣ್ ಕೆ.ಎ. ಉದ್ಘಾಟಿಸಿ ಮಾತನಾಡಿ, ಏಳು ದಿನಗಳ ಶಿಬಿರದಲ್ಲಿ ಎನ್ಎಸ್ಎಸ್ ಸ್ವಯಂಸೇವಕರು ತೋರಿದ ಶಿಸ್ತು, ಸಹಕಾರ, ಶ್ರಮದಾನ ಹಾಗೂ ಸಮಾಜಸೇವೆಯ ಮನೋಭಾವವನ್ನು ಶ್ಲಾಘಿಸಿದರು. ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಸಾಮಾಜಿಕ ಜವಾಬ್ದಾರಿ ಮತ್ತು ಸೇವಾ ಮನೋಭಾವವನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದರು. ಲಯನ್ಸ್ ಕ್ಲಬ್ ಮಡಿಕೇರಿಯ ಕಾರ್ಯದರ್ಶಿ ಕೆ. ಮಧುಕರ್, ಖಜಾಂಚಿ ನವೀನ್ ಅಂಬೇಕಲ್ ಹಾಗೂ ಸಮಾಜಸೇವಕ ವಿ.ಜೆ. ಮೋಹನ್ ಅವರು ವಿದ್ಯಾರ್ಥಿಗಳ ಸೇವಾ ಕಾರ್ಯಗಳನ್ನು ಪ್ರಶಂಸಿಸಿ, ಸಮಾಜದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಕತ್ತಲೆಕಾಡು ಗ್ರಾಮದ ನಿವಾಸಿ ನದೀಮ್ ಕರಚಿವಾಲ ಅವರು ಸ್ವಯಂಸೇವಕರಿಗೆ ಶುಭ ಹಾರೈಸಿದರು. ಕಡಗದಾಳು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿಕಲಾ ಎಚ್.ವಿ. ಉಪಸ್ಥಿತರಿದ್ದರು. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ರೇಣುಶ್ರೀ ಎಚ್.ಕೆ., ಉಪನ್ಯಾಸಕರಾದ ಶರತ್ ಪಿ.ಜಿ. ಮತ್ತು ಅಶ್ವಿತಾ ಪಿ.ಎನ್. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಏಳು ದಿನಗಳ ಶಿಬಿರದಲ್ಲಿ ಎನ್ಎಸ್ಎಸ್ ಸ್ವಯಂಸೇವಕರು ಶ್ರಮದಾನ, ಸ್ವಚ್ಛತಾ ಕಾರ್ಯ, ಪರಿಸರ ಸಂರಕ್ಷಣೆ, ಸಾಮಾಜಿಕ ಜಾಗೃತಿ ಹಾಗೂ ಗ್ರಾಮಸ್ಥರೊಂದಿಗೆ ಬೆರೆಯುವಂತಹ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಈ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಹಕಾರ, ನಾಯಕತ್ವ, ಸೇವಾ ಮನೋಭಾವ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಪ್ರಯತ್ನ ನಡೆಯಿತು. ಎನ್ಎಸ್ಎಸ್ ಅಧಿಕಾರಿ ಡಾ. ಶೈಲಶ್ರೀ ಕೆ. ಸ್ವಾಗತಿಸಿದರು. ಕುಮಾರಿ ಮೇಘಾ ಕಾರ್ಯಕ್ರಮ ನಿರೂಪಿಸಿದರು. ಎನ್ಎಸ್ಎಸ್ ಅಧಿಕಾರಿ ಅಲೋಕ್ ಕೆ. ಬೇಜೈ ವಂದಿಸಿದರು. ಗಣ್ಯರು, ಗ್ರಾಮಸ್ಥರು, ಶಾಲೆಯ ಶಿಕ್ಷಕರು, ದಾನಿಗಳು ಹಾಗೂ ಸ್ವಯಂಸೇವಕರ ಸಹಕಾರದೊಂದಿಗೆ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರ ಯಶಸ್ವಿಯಾಗಿ ಮುಕ್ತಾಯಗೊಂಡಿತು.

















