ಸೋಮವಾರಪೇಟೆ ನ.7 : ಶಿಥಿಲಾವಸ್ಥೆಯಲ್ಲಿರುವ ಕಕ್ಕೆಹೊಳೆಯ ಹಳೆ ಸೇತುವೆ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣ ವೇದಿಕೆ ಪ್ರತಿಭಟನೆ ನಡೆಸಿತು.
ಸೇತುವೆ ಬಳಿ ಜಮಾಯಿಸಿದ ವೇದಿಕೆಯ ಪ್ರಮುಖರು ಹಾಗೂ ಪದಾಧಿಕಾರಿಗಳು ತಿಂಗಳ ಒಳಗೆ ಸೇತುವೆ ಕಾಮಗಾರಿ ಪ್ರಾರಂಭಿಸದಿದ್ದರೆ ಸೋಮವಾರಪೇಟೆ, ಮಡಿಕೇರಿ ರಸ್ತೆ ತಡೆದು ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಘಟಕದ ತಾಲ್ಲೂಕು ಅಧ್ಯಕ್ಷ ಕೆ.ಎನ್.ದೀಪಕ್ ಮಾತನಾಡಿ, ಕುಸಿಯುವ ಹಂತ ತಲುಪಿದ್ದ ಸಂದರ್ಭ ಸಂಚಾರ ಬಂದ್ ಮಾಡಿ 5 ತಿಂಗಳು ಕಳೆದರೂ ಇದುವರೆಗೂ ಸೇತುವೆ ಕಾಮಗಾರಿ ಪ್ರಾರಂಭಿಸಿಲ್ಲ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸುಳ್ಳು ಹೇಳಿಕೊಂಡೇ ತಿರುಗುತ್ತಿದ್ದಾರೆ ಎಂದು ಆರೋಪಿಸಿದರು.
5 ದಶಕಗಳ ಹಳೆಯದಾದ ಸೇತುವೆ ಇದಾಗಿದ್ದು, ಅತೀ ಹೆಚ್ಚು ವಿದ್ಯಾರ್ಥಿಗಳು ಬೆಳಿಗ್ಗೆ ಸಂಜೆ ಇದೇ ಸೇತುವೆ ಮೇಲೆ ನಡೆದುಕೊಂಡು ಹೋಗುತ್ತಾರೆ. ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ ಇದುವರೆಗೆ ಈ ಸೇತುವೆ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಗೆ ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ 5 ತಿಂಗಳಿನಿಂದ ಬದಲಿ ಮಾರ್ಗ ಕಲ್ಪಿಸಲಾಗಿದೆ. ಈ ಮಾರ್ಗ ಸೂಕ್ತವಾಗಿಲ್ಲ. ಹೈವೆಯಲ್ಲಿ ಅತೀ ವೇಗದಲ್ಲಿ ವಾಹನಗಳು ಸಂಚರಿಸುತ್ತಿದ್ದು, ಬೆಳಿಗ್ಗೆ ಸಂಜೆ ನೂರಾರು ವಿದ್ಯಾರ್ಥಿಗಳು ರಸ್ತೆ ದಾಟಬೇಕಿದೆ. ಈಗಾಗಲೇ ಎರಡು ವಿದ್ಯಾರ್ಥಿಗಳಿಗೆ ವಾಹನ ಡಿಕ್ಕಿಪಡಿಸಿದ ಘಟನೆ ನಡೆದಿದ್ದು, ಶಾಸಕರು ತಕ್ಷಣವೇ ಸರ್ಕಾರದಿಂದ ಅನುದಾನ ತರಬೇಕು ಎಂದು ಒತ್ತಾಯಿಸಿದರು.
ಮುಂದಿನ ಒಂದು ತಿಂಗಳ ಒಳಗೆ ಸೇತುವೆ ಕಾಮಗಾರಿ ಪ್ರಾರಂಭಿಸದಿದ್ದರೆ ಸೋಮವಾರಪೇಟೆ, ಮಡಿಕೇರಿ ರಸ್ತೆ ತಡೆದು ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ನಗರ ಅಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ಚಂದ್ರು, ರವಿ, ಬೇಡು, ರೂಪ, ಸುನಂದ, ಸುಮತಿ ಪಾಲ್ಗೊಂಡಿದ್ದರು.
ಇನ್ಸ್ಪೆಕ್ಟರ್ ರಾಮಚಂದ್ರನಾಯಕ್ ಬಂದೋಬಸ್ತ್ ಕಲ್ಪಿಸಿದ್ದರು. ಮನವಿ ಪತ್ರವನ್ನು ಎಇಇ ವೆಂಕಟೇಶ್ ನಾಯಕ್, ತಹಶೀಲ್ದಾರ್ ನರಗುಂದ ಅವರಿಗೆ ಸಲ್ಲಿಸಲಾಯಿತು.