ಮಡಿಕೇರಿ ನ.7 : ಶ್ರೀ ಧನ್ವಂತರಿ ಜಯಂತಿಯ ದಿನವಾದ ನ.10 ರಂದು ‘ಪ್ರತಿದಿನ ಪ್ರತಿಯೊಬ್ಬರಿಗೂ ಆಯುರ್ವೇದ’ ಘೋಷವಾಕ್ಯದೊಂದಿಗೆ ನಗರದಲ್ಲಿ ‘ರಾಷ್ಟ್ರೀಯ ಆಯುರ್ವೇದ ದಿನ’ವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆಯೆಂದು ನೀಮಾ(ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್) ಕೊಡಗು ಸಂಘಟನೆಯ ಅಧ್ಯಕ್ಷ ಡಾ. ಎ.ಆರ್.ರಾಜರಾಮ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಗರದ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದ ಶತಮಾನೋತ್ಸವ ಭವನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 7.30 ಕ್ಕೆ ಶ್ರೀ ಧನ್ವಂತರಿ ಪೂಜೆ, ಬೆಳಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸುಳ್ಯದ ಕೆ.ವಿ.ಜಿ. ಆಯುರ್ವೇದ ಮಹಾ ವಿದ್ಯಾಲಯದ ಸಹಯೋಗದಲ್ಲಿ ಸಾರ್ವಜನನಿಕರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಸಂದರ್ಭ ಆಟೋ ಚಾಲಕರು, ಆರಕ್ಷಕರು ಮತ್ತು ಪತ್ರಿಕಾ ಸಿಬ್ಬಂದಿಗಳು ಮತ್ತು ಅವರ ಕುಟುಂಬಸ್ಥರಿಗೂ ವಿಶೇಷ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದೆಯೆಂದು ಮಾಹಿತಿಯನ್ನಿತ್ತರು.
ಮಕ್ಕಳಿಗೆ ಸ್ಪರ್ಧೆ : ಆಯುರ್ವೇದ ದಿನಾಚರಣೆ ಪ್ರಯುಕ್ತ ಆಯ್ದ ಶಾಲೆಗಳ 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ‘ಆಯುರ್ವೇದ ಪ್ರಕೃತಿಯ ಕೊಡುಗೆ ’ ವಿಷಯಕ್ಕೆ ಸಂಬಂಧಿಸಿದಂತೆ ಚಿತ್ರಕಲಾ ಸ್ಪರ್ಧೆ ಹಾಗೂ ‘ಆಯುರ್ವೇದ ಆರೋಗ್ಯ ರಕ್ಷಣೆಗೆ ಪೂರಕ’ ವಿಷಯದಡಿ ಪೋಸ್ಟರ್ ಬಿಡಿಸುವ ಸ್ಪರ್ಧೆಯನ್ನು ನಡೆಸಲಾಗುತ್ತದೆಯೆಂದು ತಿಳಿಸಿದರು.
ಇದೇ ಸಂದರ್ಭ ಸಾರ್ವಜನಿಕರಿಗೆ ‘ಆಯುರ್ವೇದ’ಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಗುತ್ತದೆಂದು ವಿವರಗಳನ್ನಿತ್ತರು.
ಕಾರ್ಯಕ್ರಮ : ಆಯುರ್ವೇದ ದಿನಾಚರಣೆಯ ಕಾರ್ಯಕ್ರಮ ನ.10 ರಂದು ಬೆಳಗ್ಗೆ 9.30 ಕ್ಕೆ ನಡೆಯಲಿದ್ದು, ಇದರಲ್ಲಿ ಮುಖ್ಯ ಅತಿಥಿಗಳಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಗೌರವ ಅತಿಥಿಗಳಾಗಿ ಮಡಿಕೇರಿ ನಗರಸಭಾ ಅಧ್ಯಕ್ಷೆ ಎನ್.ಪಿ.ಅನಿತಾ, ಎಸ್ಪಿ ಕೆ. ರಾಮರಾಜನ್, ಡಿಹೆಚ್ಒ ಡಾ. ಸತೀಶ್ ಕುಮಾರ್ ಕೆ.ಎಂ., ಡಿಎಒ ಡಾ. ರೇಣುಕಾ ದೇವಿ ಸಿ. ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ನೀಮಾ ಸಂಘಟನೆಯ ಡಾ.ಅನುಷಾ ಮಾತನಾಡಿ, ಆಯುರ್ವೇದ ದಿನಾಚರಣೆಯನ್ನು 1948 ರಿಂದ ನಡೆಸಿಕೊಂಡು ಬರಲಾಗುತ್ತಿದ್ದು, 2017 ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಆಯುರ್ವೇದ ದಿನವನ್ನು ಅಧಿಕೃತವಾಗಿ ಘೋಷಿಸಿತೆಂದು ಮಾಹಿತಿಯನ್ನಿತ್ತರು.
ನೀಮಾ ಸಂಘಟನೆಯ ಡಾ. ಜ್ಯೋತಿ ರಾಜರಾಮ್ ಮಾತನಾಡಿ, ಪ್ರತಿ ಮನೆಗೆ ಆಯುರ್ವೇದವನ್ನು ತಲುಪಿಸಬೇಕು ಎನ್ನುವ ಚಿಂತನೆಯಡಿ ಆಯುರ್ವೇದ ದಿನಾಚರಣೆ ರೂಪುಗೊಂಡಿದೆ. ಪ್ರತಿಯೊಬ್ಬರ ಆರೋಗ್ಯವನ್ನು ಸಂರಕ್ಷಿಸುವುದು ಮತ್ತು ರೋಗದ ಉಪಶಮನ ಆಯುರ್ವೇದದ ಮುಖ್ಯ ಉದ್ದೇಶವಾಗಿದೆಯೆಂದು ತಿಳಿಸಿದರು.
ಗೋಷ್ಠಿಯಲ್ಲಿ ನೀಮಾ ಸಂಘಟನೆಯ ಡಾ.ಅಧಿತಿ ಭಟ್ ಉಪಸ್ಥಿತರಿದ್ದರು.