ಮಡಿಕೇರಿ ನ.7 : ಪೌರ ಕಾರ್ಮಿಕರಿಗೆ ನಿವೇಶನ, ವಸತಿ ಸೇರಿದಂತೆ ಸರ್ಕಾರದಿಂದ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ತಿಳಿಸಿದ್ದಾರೆ.
ಮಡಿಕೇರಿ ನಗರಸಭೆ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ‘ಪೌರ ಕಾರ್ಮಿಕರ’ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪೌರಕಾರ್ಮಿಕರಿಗಾಗಿ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದು, ಅವುಗಳನ್ನು ಬಳಸಿಕೊಂಡು ಉತ್ತಮ ಜೀವನ ನಡೆಸಬೇಕು. ತಾವು ಕರ್ತವ್ಯ ಸಂದರ್ಭದಲ್ಲಿ ಸೂಕ್ತ ರಕ್ಷಣಾ ಸಾಮಾಗ್ರಿಗಳನ್ನು ಬಳಸಿ ಕಾರ್ಯನಿರ್ವಹಿಸಬೇಕು ಎಂದು ಶಾಸಕರು ಸಲಹೆ ನೀಡಿದರು.
ಪೌರಕಾರ್ಮಿಕರು ರಜೆ ಕೇಳಿದ್ದಲ್ಲಿ ನೀಡಬೇಕು. ಯಾವುದೇ ಕಾರಣಕ್ಕೂ ಸತಾಯಿಸಬಾರದು. ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸುವುದರ ಜೊತೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು ಎಂದು ಡಾ.ಮಂತರ್ ಗೌಡ ಕರೆ ನೀಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಎಲ್ಲೆಂದರಲ್ಲಿ ಬಿಸಾಡುವವರಿಂದ ದಂಡ ವಸೂಲಿ ಮಾಡಬೇಕು. ಈ ರೀತಿ ಆದಲ್ಲಿ ಪ್ರತಿಯೊಬ್ಬರೂ ಎಚ್ಚರವಹಿಸಲು ಸಾಧ್ಯ ಎಂದು ಶಾಸಕರಾದ ಡಾ.ಮಂತರ್ ಗೌಡ ಅವರು ನುಡಿದರು.
ನಗರಸಭೆಯಲ್ಲಿ ಓಬಳಿಯಂತ ಪೌರಕಾರ್ಮಿಕರು ನಾಲ್ಕು ದಶಕಗಳ ಕಾಲ ದುಡಿದಿದ್ದಾರೆ. ಅವರ ಆರೋಗ್ಯಕ್ಕೆ ಅಗತ್ಯ ನೆರವು ನೀಡಬೇಕು ಎಂದ ಶಾಸಕರು, ಓಬಳಿ ಅವರಿಗೆ ವೈಯಕ್ತಿಕವಾಗಿ 10 ಸಾವಿರ ರೂ.ವನ್ನು ಇದೇ ಸಂದರ್ಭದಲ್ಲಿ ನೀಡಿದರು. ಜೊತೆಗೆ ಹುಟ್ಟುಹಬ್ಬದ ಪ್ರಯುಕ್ತ ಪೌರಕಾರ್ಮಿಕರಿಗೆ ಶಾಸಕರು ವಸ್ತ್ರ ವಿತರಿಸಿದರು.
ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಮಾತನಾಡಿ ಪೌರಕಾರ್ಮಿಕರು ಮಡಿಕೇರಿ ನಗರದ ಕಿರೀಟವಿದ್ದಂತೆ, ಪೌರಕಾರ್ಮಿಕರು ಒಂದು ದಿನ ಸ್ವಚ್ಛತಾ ಕಾರ್ಯ ಕೈಗೊಳ್ಳದಿದ್ದಲ್ಲಿ ಊಹಿಸಿಕೊಳ್ಳುವುದು ಕಷ್ಟಸಾಧ್ಯ. ಆದ್ದರಿಂದ ಪೌರಕಾರ್ಮಿಕರನ್ನು ಗೌರವಿಸಬೇಕು ಎಂದರು.
ಮಡಿಕೇರಿ ದಸರಾ ಸೇರಿದಂತೆ ಹಲವು ಸಂದರ್ಭಗಳಲ್ಲಿ ಪೌರಕಾರ್ಮಿಕರು ಹೆಚ್ಚಿನ ಕೆಲಸ ನಿರ್ವಹಿಸಿದ್ದಾರೆ. ಮಡಿಕೇರಿ ನಗರದ ಪೌರಕಾರ್ಮಿಕರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪೌರಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸಲು ಪ್ರಯತ್ನಿಸಲಾಗುತ್ತಿದೆ. ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಿಸಿಕೊಡುವ ಕೆಲಸ ಆಗಬೇಕಿದೆ. ಎಲ್ಲಾ ಪೌರಕಾರ್ಮಿಕರಿಗೂ ವಸತಿ ಸೌಲಭ್ಯ ಕಲ್ಪಿಸುವುದು ಆದ್ಯತೆಯಾಗಿದ್ದು, ಆ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ನಿವೇಶನ ಒದಗಿಸುವಂತಾಗಬೇಕು ಎಂದು ಕೋರಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ನಗರ, ಪಟ್ಟಣಗಳು ಸ್ವಚ್ಛವಾಗಿರಲು ಪೌರಕಾರ್ಮಿಕರ ಕರ್ತವ್ಯ ನಿಷ್ಠೆ ಹೆಚ್ಚಿನದ್ದಾಗಿದೆ. ಮಡಿಕೇರಿ ನಗರದಲ್ಲಿ ಉತ್ತಮ ವಾತಾವರಣ ಇರಲು ಪೌರಕಾರ್ಮಿಕರ ಪಾತ್ರ ಹೆಚ್ಚಿನದ್ದಾಗಿದೆ ಎಂದರು.
ದಸರಾ ಸಮಯದಲ್ಲಿ ಹೆಚ್ಚಿನ ಕೆಲಸವನ್ನು ಪೌರಕಾರ್ಮಿಕರು ನಿರ್ವಹಿಸಿದ್ದಾರೆ. ಮುಂದಿನ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪೌರಕಾರ್ಮಿಕರನ್ನು ಗೌರವಿಸುವಂತಾಗಬೇಕು ಎಂದು ಹೇಳಿದರು.
‘ನಗರಸಭೆ ಉಪಾಧ್ಯಕ್ಷರಾದ ಸವಿತಾ ರಾಕೇಶ್ ಅವರು ಮಾತನಾಡಿ ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ಪೌರಕಾರ್ಮಿಕರು ಪ್ರತಿನಿತ್ಯ ಬೆಳಗಿನ ಜಾವ ಕರ್ತವ್ಯ ನಿರ್ವಹಿಸುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.’
ನಗರಸಭೆ ಸದಸ್ಯರಾದ ರಾಜೇಶ್ ಯಲ್ಲಪ್ಪ ಅವರು ಮಾತನಾಡಿ ಪೌರಕಾರ್ಮಿಕರಿಗೆ ಶೀಘ್ರ ವಸತಿ ಸೌಲಭ್ಯ ಕಲ್ಪಿಸಬೇಕು. ಪೌರಕಾರ್ಮಿಕರ ಜೀವನ ಮಟ್ಟ ಸುಧಾರಿಸಬೇಕು ಎಂದರು.
ಪೌರಾಯುಕ್ತರಾದ ವಿಜಯ್ ಅವರು ಮಾತನಾಡಿ ‘ಪೌರಕಾರ್ಮಿಕರು ಸ್ವಚ್ಛತಾ ಸೇನಾನಿಗಳು’ ಎಂಬುದನ್ನು ಯಾರೂ ಸಹ ಮರೆಯಬಾರದು. ನಗರದ ನೈರ್ಮಲ್ಯ, ಆರೋಗ್ಯ ಹಾಗೂ ಶುಚಿತ್ವ ಕಾಪಾಡುವಲ್ಲಿ ಪೌರಕಾರ್ಮಿಕರ ಕಾರ್ಯ ಹೆಚ್ಚಿನದ್ದಾಗಿದೆ. ಪೌರಕಾರ್ಮಿಕರು ಕೆಲಸದಿಂದ ಒಂದು ದಿನ ದೂರ ಉಳಿದರೆ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದು ಕಷ್ಟಸಾಧ್ಯ ಎಂದರು.
ಪೌರಕಾರ್ಮಿಕರ ಕೆಲಸದ ಸಂದರ್ಭದಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಲಾಗುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಲಾಗುತ್ತಿದೆ ಎಂದು ಪೌರಾಯುಕ್ತರು ತಿಳಿಸಿದರು.
ಮಡಿಕೇರಿ ನಗರಸಭೆ ಅಭಿವೃದ್ಧಿಯಲ್ಲಿ ಪೌರಕಾರ್ಮಿಕರ ಪಾತ್ರ ಹೆಚ್ಚಿನದ್ದಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಒಂದು ಕೋಟಿ ರೂ. ತೆರಿಗೆ ಸಂಗ್ರಹವಾಗಿರುವುದು ವಿಶೇಷವಾಗಿದೆ. ಪೌರಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯುವುದರ ಜೊತೆಗೆ ಕರ್ತವ್ಯವನ್ನು ಮರೆಯಬಾರದು ಎಂದು ಪೌರಾಯುಕ್ತರಾದ ಕಿವಿಮಾತು ಹೇಳಿದರು.
ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ 22 ಖಾಯಂ ಪೌರಕಾರ್ಮಿಕರಿದ್ದು, 18 ಮಂದಿ ಹೊರಗುತ್ತಿಗೆಯಡಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಡಿಕೇರಿಯಲ್ಲಿ 6 ಮಂದಿ ಪೌರಕಾರ್ಮಿಕರನ್ನು ಖಾಯಂ ಮಾಡಲಾಗಿದೆ ಎಂದು ವಿವರಿಸಿದರು.
ಖಾಯಂ ಪೌರಕಾರ್ಮಿಕರಿಗೆ ತಲಾ 7 ಸಾವಿರ ವಿಶೇಷ ಭತ್ಯೆ ಚೆಕ್ ವಿತರಿಸಲಾಯಿತು. ಎಸ್‍ಎಸ್‍ಎಲ್‍ಸಿ, ಪಿಯುಸಿ ಮತ್ತು ಪದವಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲಾಯಿತು. ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ನಗರಸಭೆ ಸದಸ್ಯರಾದ ಮಹೇಶ್ ಜೈನಿ ಅವರು ಮಾತನಾಡಿದರು. ಶಾಸಕರಾದ ಡಾ.ಮಂತರ್ ಗೌಡ ಮತ್ತು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಇದೇ ಸಂದರ್ಭದಲ್ಲಿ ಪೌರ ಸನ್ಮಾನ ನೀಡಿ ಗೌರವಿಸಲಾಯಿತು.
ನಗರಸಭೆ ಸದಸ್ಯರಾದ ಉಮೇಶ್ ಸುಬ್ರಮಣಿ, ಚಿತ್ರಾವತಿ, ಕಲಾವತಿ, ಉಷಾ, ಶ್ವೇತಾ, ಸಬಿತಾ, ಅರುಣ್ ಶೆಟ್ಟಿ, ಶಾರದ, ಚಂದ್ರಶೇಖರ್, ಪೌರ ಸೇವಾ ನೌಕರರ ಜಿಲ್ಲಾಧ್ಯಕ್ಷರಾದ ಪಿ.ಕೆ.ಸತೀಶ್, ತಾಲ್ಲೂಕು ಅಧ್ಯಕ್ಷರಾದ ಎಸ್.ಕೆ.ಸತ್ಯನಾರಾಯಣ, ಇತರರು ಇದ್ದರು.
ಪರಿಸರ ಎಂಜಿನಿಯರ್ ಸೌಮ್ಯ ನಿರೂಪಿಸಿದರು. ಸಹಾಯಕ ಎಂಜಿನಿಯರ್ ಹೇಮಂತ್ ಕುಮಾರ್ ಸ್ವಾಗತಿಸಿದರು. ನಗರಸಭೆ ಕಂದಾಯ ಅಧಿಕಾರಿ ತಾಹೀರ್ ವಂದಿಸಿದರು.