ಸೋಮವಾರಪೇಟೆ ನ.9 : ಚೈಲ್ಡ್ ಮೂವ್ಮೆಂಟ್ ಫಾರ್ ಸಿವಿಕ್ ಅವರ್ನೆಸ್(ಸಿ.ಎಂ.ಸಿ.ಎ), ನಾವು ಪ್ರತಿಷ್ಠಾನ ಕೊಡಗು ಮತ್ತು ಅರಸಿಕೆರೆ ಪ್ರಕೃತಿ ಫೌಂಡೇಶನ್ ಆಶ್ರಯದಲ್ಲಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಸ್ನೇಹಿ ಗ್ರಾಮಸಭೆ ಕುರಿತು ಜಾಗೃತಿ ಕಾರ್ಯಾಗಾರ ನಡೆಯಿತು.
ಕಿರಗಂದೂರು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಕಾಜೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳ ಗ್ರಾಮಸಭೆ, ಮಕ್ಕಳ ಹಕ್ಕುಗಳು, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಸಹಾಯವಾಣಿ ಕುರಿತು ಅರಿವು ಮೂಡಿಸಲಾಯಿತು.
ಸರ್ಕಾರದ ಮಟ್ಟದಲ್ಲಿ ಶಾಲಾ ಅಗತ್ಯತೆಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದನ್ನು ತಿಳಿಸಲಾಯಿತು. ಪಂಚಾಯಿತಿ ಮಟ್ಟದಲ್ಲಿ ನಡೆಯುವ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು ಅಧಿಕಾರಿಗಳಿಗೆ ತಿಳಿಸಿ, ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಬಗ್ಗೆ ತಿಳಿಸಲಾಯಿತು.
ನವೆಂಬರ್ ತಿಂಗಳಿನಲ್ಲಿ ಆಯಾಯ ಗ್ರಾ.ಪಂ ಗಳಲ್ಲಿ ಮಕ್ಕಳ ಗ್ರಾಮ ಸಭೆ ನಡೆಯಲಿದ್ದು, ಮಕ್ಕಳ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಪ್ರತಿಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತದೆ ಎಂದು ನಾವು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು ತಿಳಿಸಿದರು.
ಸಂಸ್ಥೆಯ ಸದಸ್ಯ ಪಿ.ಬಿ.ಪೊನ್ನಪ್ಪ ಹಾಜರಿದ್ದರು.