ನಾಪೋಕ್ಲು ನ.10 : ನಾಪೋಕ್ಲು- ವಿರಾಜಪೇಟೆ ಮುಖ್ಯರಸ್ತೆಯ ಹಳೆ ತಾಲೂಕು ಬಳಿ ರಸ್ತೆ ಸಂಪೂರ್ಣವಾಗಿ ಗುಂಡಿಮಯವಾಗಿದ್ದು, ಪಾದಾಚಾರಿಗಳು ಹಾಗೂ ವಾಹನ ಚಾಲಕರ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣಕ್ಕೆ ಸಮೀಪದ ಹಳೆ ತಾಲೂಕು ಬಳಿಯ ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ಪಕ್ಕದ ರಸ್ತೆಯಲ್ಲಿ ಹೊಂಡವಾಗಿದ್ದು ಹಲವು ದಿನಗಳಿಂದ ಮುಚ್ಚದೆ ಇದ್ದುದರಿಂದ ಸಣ್ಣ ಗುಂಡಿಗಳು ದೊಡ್ಡ ಗುಂಡಿಗಳಾಗಿ ರಸ್ತೆ ಸಂಚಾರಕ್ಕೆ ತೀವ್ರ ತೊಂದಯಾಗುತ್ತಿದೆ. ವಾಹನಗಳು ರಸ್ತೆಯ ಅವ್ಯವಸ್ಥೆಯಿಂದ ಒಂದು ಪಾಶ್ವದಲ್ಲಿ ಚಲಿಸಲಾರದೆ ಮತ್ತೊಂದು ಕಡೆಯಲ್ಲಿ ಚಲಿಸುತ್ತಿದ್ದು ನೀರಿನ ಪೈಪಿಗೆ ತೊಂದರೆ ಉಂಟಾಗುತ್ತಿರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಗಣೇಶೋತ್ಸವದ ಸಂದರ್ಭದಲ್ಲಿ ದೇವಾಲಯದ ಸಮಿತಿ ಸದಸ್ಯರು ಕಾಂಕ್ರೀಟ್ ಹಾಕಿ ಗುಂಡಿ ಮುಚ್ಚುವ ಪ್ರಯತ್ನ ಮಾಡಿದ್ದರು. ಇದೀಗ ಮತ್ತೆ ರಸ್ತೆ ಗುಂಡಿಮಯವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಇನ್ನಾದರೂ ಸಂಬಂಧಪಟ್ಟವರು ಗಮನಹರಿಸಿ ರಸ್ತೆಯ ಗುಂಡಿಯನ್ನು ಮುಚ್ಚಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ವರದಿ : ದುಗ್ಗಳ ಸದಾನಂದ










