ಮಡಿಕೇರಿ ನ.11 : ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಗಿದೆ. ವಿವಿಧ ಭಾಗ್ಯಗಳನ್ನು ಪೂರೈಸುವುದರಲ್ಲೇ ಮಗ್ನವಾಗಿರುವ ಸರ್ಕಾರ ಗ್ರಾಮೀಣ ರಸ್ತೆಗಳ ಅಭಿವೃದ್ಧಿಯನ್ನು ಕಡೆಗಣಿಸಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದಕ್ಕೆ ಪೂರಕ ಎಂಬಂತೆ ಕೊಡಗಿನ ರಸ್ತೆಗಳು ಸಂಪೂರ್ಣವಾಗಿ ಹೊಂಡ, ಗುಂಡಿಗಳಾಗಿದ್ದು, ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸುಮಾರು ಆರು ತಿಂಗಳು ಮಳೆಯಲ್ಲೇ ಕಳೆದು ಹೋಗುವ ಕೊಡಗು ಜಿಲ್ಲೆ ಮಳೆಯ ಕಾರಣದಿಂದಲೇ ರಸ್ತೆಗಳನ್ನು ಕಳೆದುಕೊಳ್ಳುತ್ತಿರುವುದು ಸಾಮಾನ್ಯ. ಆದರೆ ಗುಣಮಟ್ಟದ ರಸ್ತೆಗಳು 5 ರಿಂದ 10 ವರ್ಷ ಹಾಳಾಗದೆ ಉಳಿದ ಉದಾಹರಣೆಗಳಿವೆ. ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯೇ ಹೆಚ್ಚಾಗಿದ್ದು, ಇಲ್ಲಿನ ರಸ್ತೆಗಳ ದುಸ್ಥಿತಿ ಆಡಳಿತ ನಡೆಸುತ್ತಿರುವವರಿಗೇ ಪ್ರೀತಿ ಎಂಬಂತ್ತಾಗಿದೆ.
ಕುಶಾಲನಗರ- ವಾಲ್ನೂರು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಮತ್ತು ಪಾದಾಚಾರಿಗಳ ಸಂಚಾರ ಅಸಾಧ್ಯವಾಗಿದೆ. ನೆಲ್ಯಹುದಿಕೇರಿವರೆಗೆ ಸಂಪೂರ್ಣವಾಗಿ ರಸ್ತೆ ಹೊಂಡ ಗುಂಡಿಗಳಾಗಿದ್ದು, ಗ್ರಾಮಸ್ಥರೇ ಮಣ್ಣು ಹಾಕಿ ಗುಂಡಿ ಮುಚ್ಚಬೇಕಾದ ಪರಿಸ್ಥಿತಿ ಉದ್ಭವಿಸಿದೆ. ನಿತ್ಯ ಪ್ರವಾಸಿಗರ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಅಲ್ಲದೆ ಸ್ಥಳೀಯರ ವಾಹನಗಳು ಕೂಡ ಓಡಾಡುತ್ತವೆ. ರಸ್ತೆ ಅವ್ಯವಸ್ಥೆಯಿಂದ ಪ್ರಸ್ತುತ ಪಾದಾಚಾರಿಗಳು ಕೂಡ ಸಂಚರಿಸಲು ಸಾಧ್ಯವಾಗುತ್ತಿಲ್ಲ.
ಇಷ್ಟರವರೆಗೆ ಚುನಾವಣೆ ಮತ್ತು ಮಳೆಗಾಲವೆಂದು ರಸ್ತೆ ದುರಸ್ತಿ ಕಂಡಿರಲಿಲ್ಲ. ಇದೀಗ ನೂತನ ಸರ್ಕಾರ ಅಧಿಕಾರ ಬಂದು 6 ತಿಂಗಳು ಸಮೀಪಿಸಿದರೂ ರಸ್ತೆ ಅಭಿವೃದ್ಧಿಗೆ ಕಾಲ ಕೂಡಿ ಬಂದಿಲ್ಲವೆಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಶಾಸಕರು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ರಸ್ತೆಯನ್ನು ಡಾಂಬರೀಕರಣಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮಡಿಕೇರಿ ತಾಲ್ಲೂಕಿನ ಅರೆಕಾಡು, ಹೊಸ್ಕೇರಿ, ಅಭ್ಯತ್ ಮಂಗಲ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಹೊಂಡ ಗುಂಡಿಗಳಾಗಿವೆ. ರಸ್ತೆ ಅವ್ಯವಸ್ಥೆಯಿಂದ ವಾಹನಗಳು ಮತ್ತು ಪಾದಾಚಾರಿಗಳ ಸಂಚಾರ ಅಸಾಧ್ಯವಾಗಿದೆ. ಇಲ್ಲಿಯವರೆಗೆ ರಸ್ತೆ ಅಭಿವೃದ್ಧಿಯನ್ನು ಕಂಡಿಲ್ಲ, ಬದಲಿಗೆ ಮತ್ತಷ್ಟು ಹದಗೆಟ್ಟಿದೆ. ದ್ವಿಚಕ್ರ ವಾಹನಗಳು ಹಾಗೂ ಪಾದಾಚಾರಿಗಳು ನಿಯಂತ್ರಣ ತಪ್ಪಿ ಬೀಳುತ್ತಿರುವ ಘಟನೆಗಳು ನಡೆದಿದೆ. ಅನೇಕರು ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ, ಪ್ರಸ್ತುತ ಜೀವಕ್ಕೇ ಹಾನಿಯಾಗುವ ಪರಿಸ್ಥಿತಿ ಉದ್ಭವಿಸಿದೆ.
ನಾಪೋಕ್ಲು – ವಿರಾಜಪೇಟೆ ಮುಖ್ಯ ರಸ್ತೆಯ ಹಳೆ ತಾಲ್ಲೂಕು ಬಳಿ ರಸ್ತೆ ಹೊಂಡ ಗುಂಡಿಗಳಿಂದ ಕೂಡಿದ್ದು, ಮೃತ್ಯುಕೂಪವಾಗಿ ಪರಿಣಮಿಸಿದೆ. ಪಟ್ಟಣಕ್ಕೆ ಸಮೀಪದ ಹಳೆ ತಾಲ್ಲೂಕು ಬಳಿಯ ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ಪಕ್ಕದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನಗಳು ರಸ್ತೆಯ ಮತ್ತೊಂದು ಭಾಗದಿಂದ ಚಲಿಸುತ್ತಿವೆ. ಅಲ್ಲಿಯೂ ನೀರಿನ ಪೈಪ್ ಗೆ ಹಾನಿಯಾಗಿ ರಸ್ತೆಯಲ್ಲಿ ನೀರು ಹರಿಯುತ್ತಿದೆ.
ಕಕ್ಕಬ್ಬೆ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳು ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದ್ದು, ತಕ್ಷಣ ಆಡಳಿತ ವ್ಯವಸ್ಥೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಕ್ಕಬ್ಬೆ ಶ್ರೀಇಗ್ಗುತ್ತಪ್ಪ ದೇವಾಲಯದ ರಸ್ತೆ ಸಂಪೂರ್ಣವಾಗಿ ಹೊಂಡ, ಗುಂಡಿಗಳಾಗಿದ್ದು, ಮಳೆಯ ಸಂದರ್ಭ ಕೆರೆಯಂತ್ತಾಗುತ್ತದೆ. ವಾಹನಗಳು, ವಿದ್ಯಾರ್ಥಿಗಳು ಹಾಗೂ ಪಾದಾಚಾರಿಗಳ ಸಂಚಾರ ಅಸಾಧ್ಯವಾಗಿದೆ. ಆದ್ದರಿಂದ ರಸ್ತೆ ಡಾಂಬರೀಕರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕುಶಾಲನಗರದಿಂದ ಸಿದ್ದಾಪುರಕ್ಕೆ ತೆರಳುವ ರಂಗಸಮುದ್ರದ ಕಬ್ಬಿಣ ಸೇತುವೆ, ಬಾಳುಗೋಡು, ಬಸವೇಶ್ವರ ದೇವಾಲಯದವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಂಚಾರ ದುಸ್ತರವಾಗಿದೆ. ರಸ್ತೆ ಅಭಿವೃದ್ಧಿ ಕಾರ್ಯವನ್ನು ತಕ್ಷಣ ಆರಂಭಿಸಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗುಡ್ಡೆಹೊಸೂರು ಗ್ರಾ.ಪಂ ವ್ಯಾಪ್ತಿಯಲ್ಲಿರುವ ಈ ಹೆದ್ದಾರಿ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ. ರಸ್ತೆ ಸಂಪೂರ್ಣವಾಗಿ ಹೊಂಡ, ಗುಂಡಿಗಳಾಗಿದ್ದು, ದ್ವಿಚಕ್ರ ವಾಹನ ಚಾಲಕರು ಹಾಗೂ ಪಾದಾಚಾರಿಗಳು ಬಿದ್ದು ಆಸ್ಪತ್ರೆ ಸೇರಿದ ಘಟನೆಯೂ ನಡೆದಿದೆ. ಈ ಹೆದ್ದಾರಿಯಲ್ಲಿ ಪ್ರತಿದಿನ ಕಾಫಿ ಸೇರಿದಂತೆ ಸರಕುಗಳನ್ನು ಸಾಗಾಟ ಮಾಡುವ ಲಾರಿಗಳು ಸಂಚರಿಸುತ್ತವೆ. ಕೇರಳ ರಾಜ್ಯಕ್ಕೆ ಇದೇ ಮಾರ್ಗವಾಗಿ ಭಾರೀ ವಾಹನಗಳು ತೆರಳುತ್ತವೆ. ಹೆಸರುವಾಸಿ ಪ್ರವಾಸಿತಾಣ ದುಬಾರೆ ಮತ್ತು ಚಿಕ್ಲಿಹೊಳೆ ಜಲಾಶಯಕ್ಕೆ ಪ್ರತಿದಿನ ಅಧಿಕ ಸಂಖ್ಯೆಯ ಪ್ರವಾಸಿ ವಾಹನಗಳು ಆಗಮಿಸುತ್ತವೆ.
ಸುಂದರವಾದ ಪ್ರಕೃತಿ ಸೌಂದರ್ಯ ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಈ ರೀತಿ ರಸ್ತೆಗಳು ಹದಗೆಟ್ಟಿರುವ ಬಗ್ಗೆ ಪ್ರವಾಸಿಗರು ತೀವ್ರ ಬೇಸರ ವ್ಯಕ್ತಪಡಿಸುತ್ತಾರೆ. ಗುಂಡಿ ಬಿದ್ದ ರಸ್ತೆಯಿಂದಾಗ ವಾಹನಗಳು ಹಾನಿಗೊಳಗಾಗಿ ಬದಿಯಲ್ಲಿ ನಿಲುಗಡೆಗೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ರಸ್ತೆ ತೆರಿಗೆಯನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡಿ ಈ ರೀತಿಯ ಹದಗೆಟ್ಟ ರಸ್ತೆಯಲ್ಲಿ ನಮ್ಮ ವಾಹನವನ್ನು ಕೊಂಡೊಯ್ಯಬೇಕೆ ಎಂದು ವಾಹನ ಚಾಲಕರು ಪ್ರಶ್ನಿಸುತ್ತಿದ್ದಾರೆ.
ರಸಲ್ ಪುರದವರೆಗೆ ರಸ್ತೆ ದುರಸ್ತಿಯಾಗಿದ್ದು, ಮುಂದಿನ ರಸ್ತೆಯನ್ನು ಹಾಗೇ ಬಿಡಲಾಗಿದೆ. ಈ ಹಿಂದೆ ಅಪ್ಪಚ್ಚು ರಂಜನ್ ಅವರು ಶಾಸಕರಾಗಿದ್ದಾಗ ರಸ್ತೆ ಅಭಿವೃದ್ಧಿಗಾಗಿ ಭೂಮಿಪೂಜೆ ಆಗಿತ್ತೇ ಹೊರತು ಇಲ್ಲಿಯವರೆಗೆ ಕಾಮಗಾರಿ ಆರಂಭಗೊಂಡಿಲ್ಲವೆಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ರಸ್ತೆಯ ಒಂದು ಭಾಗದಲ್ಲಿ ಚಿಕ್ಲಿಹೊಳೆ ಜಲಾಶಯದ ಕಾಲುವೆ ನೀರು ಹರಿಯುತ್ತಿದ್ದರೆ, ಮತ್ತೊಂದು ಭಾಗದಲ್ಲಿ ಗದ್ದೆಗಳಿಗೆ. ರಸ್ತೆ ನಿತ್ಯ ನೀರಿನಿಂದ ಕೂಡಿರುವುದರಿಂದ ಇಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುವ ಅಗತ್ಯವಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಗ್ರಾಮಸ್ಥರು ರಸ್ತೆಗಿಳಿದು ಹೋರಾಡುವ ಮೊದಲು ಶಾಸಕರು ಸ್ಥಳ ಪರಿಶೀಲನೆ ನಡೆಸಿ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು ಸೂಕ್ತ.
ಕುಶಾಲನಗರ- ವಾಲ್ನೂರು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಮತ್ತು ಪಾದಾಚಾರಿಗಳ ಸಂಚಾರ ಅಸಾಧ್ಯವಾಗಿದೆ.
ನೆಲ್ಯಹುದಿಕೇರಿವರೆಗೆ ಸಂಪೂರ್ಣವಾಗಿ ರಸ್ತೆ ಹೊಂಡ ಗುಂಡಿಗಳಾಗಿದ್ದು, ಗ್ರಾಮಸ್ಥರೇ ಮಣ್ಣು ಹಾಕಿ ಗುಂಡಿ ಮುಚ್ಚಬೇಕಾದ ಪರಿಸ್ಥಿತಿ ಉದ್ಭವಿಸಿದೆ. ನಿತ್ಯ ಪ್ರವಾಸಿಗರ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಅಲ್ಲದೆ ಸ್ಥಳೀಯರ ವಾಹನಗಳು ಕೂಡ ಓಡಾಡುತ್ತವೆ. ರಸ್ತೆ ಅವ್ಯವಸ್ಥೆಯಿಂದ ಪ್ರಸ್ತುತ ಪಾದಾಚಾರಿಗಳು ಕೂಡ ಸಂಚರಿಸುವುದು ಅಸಾಧ್ಯವಾಗಿದೆ.
ಇಷ್ಟರವರೆಗೆ ಚುನಾವಣೆ ಮತ್ತು ಮಳೆಗಾಲವೆಂದು ರಸ್ತೆ ದುರಸ್ತಿ ಕಂಡಿರಲಿಲ್ಲ. ಇದೀಗ ನೂತನ ಸರ್ಕಾರ ಅಧಿಕಾರ ಬಂದು 6 ತಿಂಗಳು ಸಮೀಪಿಸಿದರೂ ರಸ್ತೆ ಅಭಿವೃದ್ಧಿಗೆ ಕಾಲ ಕೂಡಿ ಬಂದಿಲ್ಲವೆಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಶಾಸಕರು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ರಸ್ತೆಯನ್ನು ಡಾಂಬರೀಕರಣಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇದೇ ಪರಿಸ್ಥಿತಿ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಇದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
::: ಅಭಿವೃದ್ಧಿ ಆಗಲಿದೆ :::
ಗ್ಯಾರಂಟಿ ಕಾರ್ಡ್‍ಗಳ ಭರವಸೆಗಳನ್ನು ಈಡೇರಿಸಲು ಸುಮಾರು 4 ತಿಂಗಳ ಕಾಲ ಆರ್ಥಿಕ ಹೊರೆಯಾಗಿತ್ತು. ಆದರೆ ಈಗ ಎಲ್ಲವೂ ಸರಿಯಾಗಿದ್ದು, ರಸ್ತೆಗಳ ಅಭಿವೃದ್ಧಿ ಕಾರ್ಯ ನಡೆಯಲಿದೆ. ಕ್ರಿಯಾ ಯೋಜನೆ ಸಿದ್ಧಗೊಂಡಿದ್ದು, ಅನುದಾನ ಬಿಡುಗಡೆಯಾಗಲಿದೆ, ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ. (ಎ.ಎಸ್.ಪೊನ್ನಣ್ಣ, ಶಾಸಕರು, ವಿರಾಜಪೇಟೆ ವಿಧಾನಸಭಾ ಕ್ಷೇತ್ರ)
::: ನಿರೀಕ್ಷೆ ಹುಸಿಯಾಗಿದೆ :::
ಕಳೆದ 25 ವರ್ಷಗಳಿಂದ ಜಿಲ್ಲೆಯಲ್ಲಿ ಬಿಜೆಪಿ ಶಾಸಕರುಗಳೇ ಇದ್ದ ಕಾರಣದಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿತ್ತು. ನೂತನ ಶಾಸಕರುಗಳ ನೇತೃತ್ವದಲ್ಲಾದರೂ ರಸ್ತೆಗಳು ಅಭಿವೃದ್ಧಿ ಕಾಣಬಹುದೆನ್ನುವ ನಿರೀಕ್ಷೆಗಳಿತ್ತು. ಆದರೆ ಇದು ಹುಸಿಯಾಗಿದೆ, ಸರ್ಕಾರ ಭಾಗ್ಯಗಳನ್ನು ಪೂರೈಸುವುದರಲ್ಲೇ ಮಗ್ನವಾಗಿರುವುದನ್ನು ಗಮನಿಸಿದರೆ ರಸ್ತೆ ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಸಂಶಯ ಮೂಡುತ್ತಿದೆ. (ಪವನ್ ಪೆಮ್ಮಯ್ಯ, ಅಧ್ಯಕ್ಷರು, ಕೊಡಗು ರಕ್ಷಣಾ ವೇದಿಕೆ)
::: ಶೀಘ್ರ ದುರಸ್ತಿಪಡಿಸಿ :::
ಕೊಡಗು ಜಿಲ್ಲೆಯಲ್ಲಿ ಕಾಫಿ ತೋಟಗಳ ಸಂಖ್ಯೆ ಹೆಚ್ಚು ಇರುವ ಕಾರಣ ಕಾರ್ಮಿಕರ ಸಂಖ್ಯೆಯೂ ಸಾವಿರಾರು ಇದೆ. ಪ್ರತಿದಿನ ಕಾರ್ಮಿಕರನ್ನು ಕರೆದೊಯ್ಯುವ ವಾಹನಗಳು ರಸ್ತೆ ವ್ಯವಸ್ಥೆಯಿಂದ ಕಷ್ಟ ಅನುಭವಿಸುತ್ತಿವೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕಾರ್ಮಿಕರ ವಾಹನ ಸಂಚರಿಸಲಾಗದ ಪರಿಸ್ಥಿತಿ ಉದ್ಭವಿಸಿದೆ. ಕಾರ್ಮಿಕರು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಸಕರುಗಳು ಶೀಘ್ರ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. (ಪಿ.ಆರ್.ಭರತ್, ಕಾರ್ಮಿಕ ಮುಖಂಡರು, ನೆಲ್ಲಿಹುದಿಕೇರಿ)
::: ಜೀವಹಾನಿಗೆ ಆಹ್ವಾನ :::
ಜಿಲ್ಲೆಯ ಗ್ರಾಮೀಣ ಪ್ರದೇಶಗಳ ರಸ್ತೆ ಅವ್ಯವಸ್ಥೆ ಒಂದಲ್ಲ ಒಂದು ದಿನ ಜೀವಹಾನಿಗೆ ಕಾರಣವಾಗಬಹುದು. ಅನಾಹುತ ಸಂಭವಿಸುವ ಮೊದಲು ಗ್ರಾಮ ಪಂಚಾಯಿತಿ, ಜಿ.ಪಂ ಹಾಗೂ ಲೋಕೋಪಯೋಗಿ ಇಲಾಖೆ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. (ಡಾ.ಸಣ್ಣುವಂಡ ಕಾವೇರಪ್ಪ, ಮಾಜಿ ಉಪಾಧ್ಯಕ್ಷರು, ಕಾಫಿ ಮಂಡಳಿ)