ಮಡಿಕೇರಿ ನ.12 : ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪುಲಿಯೇರಿ ಗ್ರಾಮದ ಆನಂದಪುರ ಟಾಟಾ ಕಾಫಿ ಎಸ್ಟೇಟ್ ನಲ್ಲಿ ನಿಧಿ ಪತ್ತೆಯಾಗಿದೆ. ಕಾಫಿ ಎಸ್ಟೇಟ್ ಒಳಗೆ ಈಶ್ವರ ದೇವಸ್ಥಾನವಿದ್ದು, ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಅಗೆಯುತ್ತಿದ್ದಾಗ ನಿಧಿ ಗೋಚರಿಸಿದೆ.
ಬಂಗಾರವನ್ನು ಹೋಲುವ 1 ಕೆಜಿ 150 ಗ್ರಾಂ ತೂಕದ ಆಭರಣ ದೊರೆತ್ತಿದೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದರು. ನಿಧಿಯನ್ನು ತಹಶೀಲ್ದಾರರಿಗೆ ಹಸ್ತಾಂತರಿಸಲಾಗಿದ್ದು, ನ್ಯಾಯಾಲಯದ ಅನುಮತಿ ನಂತರ ಪುರಾತತ್ವ ಇಲಾಖೆಗೆ ವರ್ಗಾಯಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.









