ನಾಪೋಕ್ಲು ನ.13 : ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ದೃಢ ನಿರ್ಧಾರದಿಂದ ಮುನ್ನಡೆದರೆ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಸ್ಟಾರ್ ಆಫ್ ಮೈಸೂರು, ಮೈಸೂರು ಮಿತ್ರ ಸಂಪಾದಕ ಡಾ.ಕಲ್ಯಾಟಂಡ ಬಿ.ಗಣಪತಿ ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಲಭಿಸಿದ ಹಿನ್ನೆಲೆಯಲ್ಲಿ ಕಕ್ಕಬ್ಬೆ ಕುಂಜಿಲ ಗ್ರಾಮದ ಕಲ್ಯಾಟಂಡ ಐನ್ ಮನೆಯಲ್ಲಿ ಅವರನ್ನು ಕುಟುಂಬಸ್ಥರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕುಟುಂಬಗಳ ನಡುವೆ ಒಗ್ಗಟ್ಟು, ಸಾಮರಸ್ಯ ಅಗತ್ಯ. ಕಲ್ಯಾಟಂಡ ಕುಟುಂಬದಲ್ಲಿ ವಾರ್ಷಿಕವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ವಿವಿಧ ಕಾರ್ಯಕ್ರಮ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ಕುಟುಂಬದ ಎಲ್ಲಾ ಸದಸ್ಯರು ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು ಎಂದ ಅವರು ಕುಟುಂಬದ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಉನ್ನತ ವಿದ್ಯಾಭ್ಯಾಸದ ಬಗ್ಗೆ ಉತ್ತೇಜಿಸುವ ಕೆಲಸ ಮಾಡಬೇಕು ಎಂದರು.
ಕಲ್ಯಾಟಂಡ ಅಪ್ಪಚ್ಚು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯರಾದ ಪ್ರೊ. ಕಲ್ಯಾಟಂಡ ಪೂಣಚ್ಚ, ಕಲ್ಯಾಟಂಡ ಅಯ್ಯಪ್ಪ, ಕಲ್ಯಾಟಂಡ ಮುತ್ತಪ್ಪ, ಕಲ್ಯಾಟಂಡ ಕುಟುಂಬದ ಅಧ್ಯಕ್ಷ ಕಲ್ಯಾಟಂಡ ಚಿಣ್ಣಪ್ಪ, ಕಲ್ಯಾಟಂಡ ರಾಲಿ ಗಣಪತಿ, ಕಲ್ಯಾಟಂಡ ಶಾರದ ಅಪ್ಪಣ್ಣ ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಲ್ಯಾಟಂಡ ಜಾನ್ಸಿ ಗಣಪತಿ ಪ್ರಾರ್ಥಿಸಿದರು. ಕಲ್ಯಾಟಂಡ ತೇಜಸ್ವಿನಿ ನಿರೂಪಿಸಿದರು, ಪ್ರೊ. ಕಲ್ಯಾಟಂಡ ಪೂಣಚ್ಚ ಸ್ವಾಗತಿಸಿದರು. ಕಲ್ಯಾಟಂಡ ರಮೇಶ್ ಚಂಗಪ್ಪ ವಂದಿಸಿದರು.
ವರದಿ : ದುಗ್ಗಳ ಸದಾನಂದ