ಮಡಿಕೇರಿ ನ.15 : ಎಸ್‍ವೈಎಸ್ ರಾಜ್ಯ ಸಮ್ಮೇಳನದ ಪ್ರಚಾರಾರ್ಥ ನ.17 ರಂದು ಸಿದ್ದಾಪುರದಲ್ಲಿ ‘ಕೊಡಗು ಜಿಲ್ಲಾ ಮಟ್ಟದ ಯುವ ಜನೋತ್ಸವ’ ನಡೆಯಲಿದೆ ಎಂದು ಸಂಘಟನೆಯ ಜಿಲ್ಲಾ ಮಾಧ್ಯಮ ವಕ್ತಾರ ಶಾಫಿ ಸಅದಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‍ವೈಎಸ್ ಸಂಘಟನೆಯು ಮೂವತ್ತರ ಸಂಭ್ರಮದಲ್ಲಿದ್ದು, ‘ಪರಂಪರೆಯ ಪ್ರತಿನಿಧಿಗಳಾಗೋಣ’ ಎಂಬ ಘೋಷಣೆಯೊಂದಿಗೆ ಜ.14 ರಂದು ಮಂಗಳೂರಿನಲ್ಲಿ ರಾಜ್ಯ ಸಮ್ಮೇಳನ ನಡೆಯಲಿದೆ. ಇದರ ಪ್ರಚಾರಾರ್ಥ ಪ್ರತೀ ಜಿಲ್ಲೆಯಲ್ಲೂ ಯುವ ಜನೋತ್ಸವ ನಡೆಯಲಿದ್ದು, ನ.17 ರಂದು ಸಂಜೆ 5 ಗಂಟೆಗೆ ಸಿದ್ದಾಪುರದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆಯಲಿದೆ ಎಂದರು.
ಯುವ ಜನೋತ್ಸವವನ್ನು ಎಸ್‍ವೈಎಸ್ ರಾಜ್ಯಾಧ್ಯಕ್ಷ ಹಫೀಳ್ ಸಅದಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಎಸ್‍ವೈಎಸ್ ಜಿಲ್ಲಾಧ್ಯಕ್ಷ ಹಮೀದ್ ಮುಸ್ಲಿಯಾರ್ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಕೂರ್ಗ್ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದ್ ಶಿಹಾಬುದ್ದೀನ್ ಅಲ್ ಐದರೂಸಿ, ಎನ್‍ವೈಎಸ್ ರಾಜ್ಯ ನಾಯಕ ಸಯ್ಯಿದ್ ಇಲ್ಯಾಸ್ ಸಖಾಫಿ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಸೇರಿದಂತೆ ಹಲವು ಧಾರ್ಮಿಕ ಮತ್ತು ರಾಜಕೀಯ ನಾಯಕರುಗಳು ಪಾಲ್ಗೊಳ್ಳಲಿದ್ದು, ವಹ್ಹಾಬ್ ಸಖಾಫಿ ಮಂಬಾಡ್ ಹಾಗೂ ಡಾ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಕಕ್ಕಿಂಜೆ ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು.
ಆಧುನಿಕತೆಯೊಂದಿಗೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ, ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಿರುವ ಯುವ ಸಮೂಹಕ್ಕೆ ಧಾರ್ಮಿಕ, ನೈತಿಕ ಪಾಠ ಬೋಧಿಸುವುದು ಸೇರಿದಂತೆ ಸಮಾಜದ ಒಳಿತಿಗಾಗಿ ಕಾರ್ಯಾಚರಿಸುತ್ತ, ದುರ್ಬಲರ ಬೆನ್ನೆಲುಬಾಗಿರುವ ಒಂದು ಸಮೂಹವನ್ನು ಕಟ್ಟಿ ಬೆಳೆಸುವ ಚಿಂತನೆ ಎಸ್‍ವೈಎಸ್ ಸಂಘಟನೆಯದ್ದಾಗಿದೆಯೆಂದು ಶಾಫಿ ಸಅದಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಸ್‍ವೈಎಸ್ ಜಿಲ್ಲಾಧ್ಯಕ್ಷ ಹಮೀದ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿ ಅಹ್ಮದ್ ಮದನಿ ಗುಂಡಿಕೆರೆ, ಕೋಶಾಧಿಕಾರಿ ಅಬ್ದುಲ್ಲ, ಸದಸ್ಯ ಕೆ.ಎಂ.ಸೈಯ್ಯದ್ ಬಾವ ಉಪಸ್ಥಿತರಿದ್ದರು.









