ಮಡಿಕೇರಿ ನ.17 : ತೋಟದ ಲೈನ್ ಮನೆಗಳಲ್ಲಿ ವಾಸವಿರುವ ಕಾರ್ಮಿಕರಿಗೆ ಸ್ವಂತ ಭೂಮಿ ಮತ್ತು ಮನೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಆದಿವಾಸಿ ಕಾರ್ಮಿಕರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ದಲಿತ ಆದಿವಾಸಿ ಕೃಷಿ ಕಾರ್ಮಿಕರ ಸಂಘ, ಕರ್ನಾಟಕ ರೈತ ಸಂಘ (ಎಐಕೆಎಸ್) ಮತ್ತು ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಹಕ್ಕೊತ್ತಾಯಗಳನ್ನು ಮಂಡಿಸಿದರು.
ದಲಿತ ಆದಿವಾಸಿ ಕೃಷಿ ಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ಮೂಲ ನಿವಾಸಿ ಆದಿವಾಸಿಗಳು, ದಲಿತರು, ಕೃಷಿ ಕಾರ್ಮಿಕರು ಸ್ವಂತ ಸೂರಿಲ್ಲದೆ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಶತ-ಶತಮಾನಗಳಿಂದ ಉಳ್ಳವರ ದೌರ್ಜನ್ಯಕ್ಕೆ ಒಳಗಾಗಿ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇಂದು ನಿಜವಾದ ಆದಿವಾಸಿಗಳು ಯಾವುದೇ ಸೌಲಭ್ಯಗಳಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಗುರುತಿನ ದಾಖಲೆಗಳನ್ನು ಮಾಲೀಕರು ಕಸಿದುಕೊಂಡು ಸರ್ಕಾರದ ದಾಖಲೆಗಳಲ್ಲಿ ಆದಿವಾಸಿಗಳು ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಕೊಡಗಿನ ಭೂಮಾಲೀಕ ವರ್ಗಕ್ಕೆ ಪರಿಶಿಷ್ಟ ಪಂಗಡದ ದೃಢೀಕರಣ ನೀಡಬಾರದೆಂದು ಒತ್ತಾಯಿಸಿದರು.
ಅರಣ್ಯದ ಮಧ್ಯೆ ಇರುವ ಆದಿವಾಸಿಗಳನ್ನು ಅದೇ ಅರಣ್ಯದಂಚಿಗೆ ತಂದು ಭೂಮಿ ನೀಡಬೇಕು, ಎಲ್ಲಾ ಮೂಲಭೂತ ಸೌಕರ್ಯ ಒದಗಿಸಬೇಕು, ಜಿಲ್ಲೆಯ ವಿವಿಧ ಲೈನ್‍ಮನೆಗಳಲ್ಲಿರುವ ಜೀತದಾಳುಗಳನ್ನು ಹೊರತಂದು ಸೂರು, ಭೂಮಿ ನೀಡಿ ಸ್ವತಂತ್ರ್ಯವಾಗಿ ಬದುಕಲು ಅವಕಾಶ ಕಲ್ಪಿಸಬೇಕು, ಕೊಡಗಿನ ತೋಟ ಕಾರ್ಮಿಕರಿಗೆ ಶಾಸನಬದ್ಧ ಸಂಬಳ, ಸೌಲಭ್ಯಗಳನ್ನು ನೀಡಬೇಕು, ಬ್ಯಾಡಗೊಟ್ಟ, ಬಸವನಹಳ್ಳಿ ಆದಿವಾಸಿಗಳಿಗೆ ಪುನರ್ ವಸತಿ ಯೋಜನೆಯಡಿ ಸೌಲಭ್ಯ ಮಂಜೂರು ಮಾಡಬೇಕು, ತಾಲ್ಲೂಕುವಾರು ಗುರುತಿಸಿ ಕಾಯ್ದಿರಿಸಿರುವ ಜಾಗಗಳನ್ನು ಅಭಿವೃದ್ಧಿಪಡಿಸಿ ವಸತಿ ಹೀನರಿಗೆ ನೀಡಬೇಕೆಂದು ಆಗ್ರಹಿಸಿದರು.
ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಹೆಚ್.ಪೂಜಾರ್ ಮಾತನಾಡಿ, ಆದಿವಾಸಿ ಜನರನ್ನು ನಾಗರೀಕ ಸಮಾಜಕ್ಕೆ ತರಲು ಹೋರಾಟ ನಡೆಯುತ್ತಿದೆ. ಆದರೆ ಸರ್ಕಾರ ಆದಿವಾಸಿಗಳಿಗೆ ಹಕ್ಕುಪತ್ರ, ಮನೆ ಹಾಗೂ ಮೂಲಭೂತ ಸೌಲಭ್ಯ ನೀಡದೆ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತರು, ಆದಿವಾಸಿಗಳಿಗೆ ಭೂಮಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಇಂದು ಭರವಸೆಗಳೆಲ್ಲ ಹುಸಿಯಾಗಿದೆ ಎಂದು ಟೀಕಿಸಿದರು.
ದಲಿತ ಆದಿವಾಸಿ ಕೃಷಿ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿ ಸದಸ್ಯರಾದ ವೈ.ಎಂ.ಸುರೇಶ್, ವೈ.ಸಿ.ಮೋಹನ್, ಸೌಂದರ್ಯ, ಅನಿತ, ದಾಸಪ್ಪ, ಮುತ್ತಣ್ಣ, ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ, ಕರ್ನಾಟಕ ರೈತ ಸಂಘ (ಎಐಕೆಎಸ್), ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ ಪದಾಧಿಕಾರಿಗಳು ಸೇರಿದಂತೆ ಆದಿವಾಸಿ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.









