ಮಡಿಕೇರಿ ನ.26 : ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮತ್ತೆ ಮಿತಿ ಮೀರಿದೆ. ಕಾಡಾನೆಗಳ ಹಿಂಡು ಕಾಡಿನಿಂದ ತೋಟ, ಇದೀಗ ತೋಟದಿಂದ ಮನೆಯಂಗಳಕ್ಕೆ ಬಂದು ಉಪಟಳ ನೀಡಲು ಆರಂಭಿಸಿದೆ
ವಿರಾಜಪೇಟೆ ತಾಲ್ಲೂಕಿನ ಬೇಟೋಳ್ಳಿ ಗ್ರಾಮದಲ್ಲಿ ಸುಮಾರು ನಾಲ್ಕು ಕಾಡಾನೆಗಳು ಕಾಣಿಸಿಕೊಂಡಿವೆ. ಕಳೆದ ಮೂರು ದಿನಗಳಿಂದ ಮುಖ್ಯ ರಸ್ತೆ ಸಂಚರಿಸುತ್ತಿರುವ ಕಾಡಾನೆಗಳು ಸ್ಥಳೀಯ ಡಿ.ಎಚ್.ಎಸ್ ಮಿಲ್ ಆವರಣದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು. ನಿಲ್ಲಿಸಿದ್ದ ಕಾರುಗಳ ಪಕ್ಕದಲ್ಲೇ ಸ್ವಲ್ಪ ಹೊತ್ತು ಅಡ್ಡಾಡಿದ ಎರಡು ಕಾಡಾನೆಗಳು ಯಾವುದೇ ಹಾನಿ ಮಾಡದೆ ಮರಳಿದೆ. ಆನೆಗಳ ಹಿಂಡು ಇಲ್ಲಿನ ಶ್ರೀಭದ್ರಕಾಳಿ ದೇವಸ್ಥಾನದ ಸಮೀಪದಲ್ಲೇ ಇದೆ ಎಂದು ಗ್ರಾಮಸ್ಥರು ಭಯ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿರುವ ಅರಣ್ಯ ಸಿಬ್ಬಂದಿಗಳು ಕಾಡಾನೆಗಳನ್ನು ಕಾಡಿಗಟ್ಟುವ ಪ್ರಯತ್ನ ಮಾಡಿದರು. ಸಾರ್ವಜನಿಕರು ಸಂಚರಿಸುವಾಗ ಎಚ್ಚರದಿಂದ ಇರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಕಾಡಾನೆ ಹಾವಳಿ ತಡೆಗೆ ಸರ್ಕಾರ ಶಾಶ್ವತ ಪರಿಹಾರ ಸೂಚಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.













