ಮಡಿಕೇರಿ ನ.27 : ಕೊಡ್ಲಿಪೇಟೆ ಸಮೀಪದ ನೀರಗುಂದ ಗ್ರಾಮದಲ್ಲಿ ಶ್ರೀ ವೀರಭದ್ರ ಸ್ವಾಮಿ ದೇವಾಲಯ, ಶ್ರೀ ಮಲ್ಲೇಶ್ವರ ಸ್ವಾಮಿ ಹಾಗೂ ಶ್ರೀ ಕನ್ನಂಬಾಡಿ ಅಮ್ಮನವರ ದೇವಾಲಯದಲ್ಲಿ ಕಾರ್ತಿಕ ಮಾಸದ ಪೂಜೆ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ಮುಂಜಾನೆಯಿಂದಲೇ ವೀರಭದ್ರ ಸ್ವಾಮಿಗೆ ಶತ ರುದ್ರಾಭಿಷೇಕ, ವಿಷೇಶವಾಗಿ ತರಕಾರಿಯಿಂದ ದೇವರ ವಿಗ್ರಹಕ್ಕೆ ಅಲಂಕಾರ, ದೇವಾಲಯಗಳಿಗೆ ಹೂವಿನ ಗುಚ್ಚಗಳಿಂದ ಅಲಂಕಾರ ಮಾಡಲಾಗಿತ್ತು. ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ರಾತ್ರಿ ದೀಪಾಲಂಕಾರ, ಕಾರ್ತೀಕ ಪೂಜೆ, ಆಕಾಶದಲ್ಲಿ ವರ್ಣರಂಜಿತ ಪಟಾಕಿ ಸಿಡಿಸುವ ಕಾರ್ಯಕ್ರಮವು ಜರುಗಿತು. ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗವಾಯಿತು. ಪೂಜಾಕೈಂಕರ್ಯಗಳನ್ನು ಕಿರಿಕೊಡ್ಲಿ ಮಠಾಧ್ಯಕ್ಷರಾದ ಶ್ರೀ ಶ್ರೀ ಸದಾಶಿವ ಸ್ವಾಮೀಜಿ, ಅರ್ಚಕ ಮಣಿಕಂಠ ಹಾಗೂ ಚಂದ್ರಯ್ಯ ನೆರವೇರಿಸಿದರು.
ಹೊರ ಜಿಲ್ಲೆಗಳಲ್ಲಿ, ರಾಜ್ಯಗಳಲ್ಲಿ ವೃತ್ತಿ ಜೀವನ ನಡೆಸುತ್ತಿರುವ ಎಲ್ಲರೂ ಒಟ್ಟಾಗಿ ಸೇರಿಕೊಂಡು ತಮ್ಮ ಕುಟುಂಬದ ಸದಸ್ಯರೊಂದಿಗೆ ಕೂಡಿ ಈ ಪೂಜಾಕೈಂಕರ್ಯಗಳನ್ನು ಪ್ರತೀ ವರ್ಷದಂತೆ ನಡೆಸಿಕೊಂಡು ಬರುತ್ತಿರುವುದು ವಿಷೇಶವಾಗಿದೆ. ಗ್ರಾಮದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ಎನ್.ಎ.ಅಶ್ವಥ್ ಕುಮಾರ್ (ಕುಶಾಲನಗರ)








