ಮಡಿಕೇರಿ ಡಿ.2 : ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಲು ಬದ್ಧನಾಗಿರುವುದಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ತಿಳಿಸಿದ್ದಾರೆ.
ಕೊಡವಾಮೆರ ಕೊಂಡಾಟ ಸಂಘಟನೆ ವತಿಯಿಂದ ನಗರದ ಬಾಲಭವನದಲ್ಲಿ ನಡೆದ 2ನೇ ವರ್ಷದ ಕೊಡವ ಅಂತರ ಕುಟುಂಬ ಬಾಳೋಪಾಟ್ ಬಂಬಂಗ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯಾವುದೇ ಒಂದು ಜನಾಂಗದ ಏಳಿಗೆಗೆ ಸರ್ಕಾರದ ಸಹಕಾರದ ಅಗತ್ಯವಿದೆ. ಜನಪ್ರತಿನಿಧಿಯಾಗಿ ಜಿಲ್ಲೆಯ ಮತ್ತು ಜನರ ಅಭ್ಯುದಯಕ್ಕಾಗಿ ಸರ್ಕಾರಿ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ ಅಭಿವೃದ್ಧಿಯ ವಿಚಾರದಲ್ಲಿ ಪಕ್ಷಬೇಧ ಮರೆತು ಒಟ್ಟಾಗಿ ಶ್ರಮಿಸುವುದಾಗಿ ಹೇಳಿದರು.
ದೇಶದ ಸಂವಿಧಾನದಡಿ ಕೊಡವರಿಗೆ ದೊರಕಬೇಕಾದ ಹಕ್ಕುಗಳ ಪರ ಇರುವುದಾಗಿ ಭರವಸೆ ನೀಡಿದರು.
ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಅವರು ಮಾತನಾಡಿ ಕೊಡವ ಜನಾಂಗದ ಏಳಿಗೆಯ ದೃಷ್ಟಿಯಿಂದ ಕೊಡವಾಮೆರ ಕೊಂಡಾಟ ಸಂಘಟನೆ ಜನಜಾಗೃತಿ ಮೂಡಿಸುವ ಮೂಲಕ ಇತರರಿಗೆ ಮಾದರಿಯಾಗಿದೆ ಎಂದರು.
ಜನಾಂಗದ ಎಲ್ಲಾ ಸಮಾಜ ಮತ್ತು ಸಂಘಟನೆಗಳು ಒಂದೇ ವೇದಿಕೆಯಡಿ ಬರುವಂತಾಗಬೇಕು. ಈ ಕ್ರಮದಿಂದ ಮಾತ್ರ ಒಗ್ಗಟ್ಟು ಮತ್ತು ಒಮ್ಮತದ ನಿರ್ಣಯಗಳಿಗೆ ಬರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಮಾತನಾಡಿ, ಕೊಡವ ಸಾಹಿತ್ಯದ ಮೇರು ವ್ಯಕ್ತಿಗಳಾದ ಹರಿದಾಸ ಅಪ್ಪನೆರವಂಡ ಅಪ್ಪಚ್ಚ ಕವಿ, ನಡಿಕೇರಿಯಂಡ ಚಿಣ್ಣಪ್ಪ, ಐ.ಮಾ.ಮುತ್ತಣ್ಣ ಅವರ ಸಾಹಿತ್ಯ ಸೇವೆಗೆ ಸೂಕ್ತ ಸ್ಥಾನಮಾನ ದೊರಕಲಿಲ್ಲ, ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಕಳೆದ ನಾಲ್ಕೂವರೆ ವರ್ಷಗಳಿಂದ ಕೊಡವಾಮೆರ ಕೊಂಡಾಟ ಸಂಘಟನೆ ಜನಾಂಗದ ಜಾಗೃತಿಗಾಗಿ ಶ್ರಮಿಸುತ್ತಿದ್ದು, ಈ ಕಾರ್ಯ ಮುಂದುವರೆಯಲಿದೆ ಎಂದರು.
ದಾನಿಗಳಾದ ಸರ್ಕಂಡ ಸೋಮಯ್ಯ, ಹಂಚೆಟ್ಟಿರ ಮನುಮುದ್ದಪ್ಪ, ಅಂಜಪರವಂಡ ರಂಜು ಮುತ್ತಪ್ಪ ಉಪಸ್ಥಿತರಿದ್ದರು.
ಬಾಳೋಪಾಟ್ ಸ್ಪರ್ಧೆಯಲ್ಲಿ ಚೇನಂಡ, ಕನ್ನಿಗಂಡ, ಓಡಿಯಂಡ ಮತ್ತು ಮಾತಂಡ ಮೊಣ್ಣಪ್ಪ ಸ್ಮರಣಾರ್ಥ ಪ್ರಬಂಧ ಸ್ಪರ್ಧೆಯಲ್ಲಿ ಅಮ್ಮಣಿಚಂಡ ಗಂಗಮ್ಮ ಬೆಳ್ಯಪ್ಪ, ಬಾಚಮಾಡ ಭೀಮಯ್ಯ ಹಾಗೂ ಸಣ್ಣುವಂಡ ಅಕ್ಕಮ್ಮ ಸನ್ನಿ ಬಹುಮಾನ ಪಡೆದರು.
ಹಿರಿಯರಾದ ಚೆನಿಯಪಂಡ ಮನುಮಂದಣ್ಣ ಅವರು ಒಕ್ಕಣೆ ಕಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಗಿರೀಶ್ ಭೀಮಯ್ಯ ಸ್ವಾಗತಿಸಿ, ಕುಲ್ಲಚಂಡ ದೇಚಮ್ಮ ನಿರೂಪಿಸಿ, ತೀತಮಾಡ ಸೋಮಣ್ಣ ವಂದಿಸಿದರು.










