ಮಡಿಕೇರಿ ಡಿ.2 : ನಿಗಮ ಮಂಡಳಿಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದಕ್ಕಾಗಿ ಮತ್ತು ಪ್ರಚಾರಕ್ಕಾಗಿ ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ ಅವರು ಕೊಡಗು, ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ಕೃಷಿ ಮೋರ್ಚಾದ ಕಿರುಗೂರು ಘಟಕದ ಅಧ್ಯಕ್ಷ ಚೆಪ್ಪುಡಿರ ರಾಕೇಶ್ ದೇವಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಅವಧಿಯಲ್ಲಿ ಕೊಡಗು ಮತ್ತು ಮೈಸೂರು ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ದಶಪಥ ಹೆದ್ದಾರಿ ಯೋಜನೆಯನ್ನು ಅನುಷ್ಠಾನಗೊಳಿಸಿರುವುದು ಕೂಡ ದೊಡ್ಡ ಸಾಧನೆಯಾಗಿದೆ ಎಂದು ತಿಳಿಸಿದ್ದಾರೆ.
ಆದರೆ ಇತ್ತೀಚೆಗೆ ಸಂಕೇತ್ ಪೂವಯ್ಯ ಅವರು ಈ ದಶಪಥವನ್ನು ಸಂಬAಧ ಇಲ್ಲದ ರಸ್ತೆ ಬಗ್ಗೆ ಸಂಸದರು ಮಾತನಾಡುತ್ತಾರೆ ಎಂದು ಟೀಕಿಸಿರುವುದು ಖಂಡನೀಯ. ಜನೋಪಯೋಗಿ ಯೋಜನೆಯೊಂದು ಯಶಸ್ವಿಯಾಗಿರುವುದಕ್ಕೆ ಹೆಮ್ಮೆ ಪಡಬೇಕೆ ಹೊರತು ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡಬಾರದು. ಇದೇ ಹೆದ್ದಾರಿಯಲ್ಲಿ ಸ್ವತ: ಸಂಕೇತ್ ಪೂವಯ್ಯ ಅವರು ಕೂಡ ಸಂಚರಿಸುವುದಿಲ್ಲವೇ ಎಂದು ಪ್ರಶ್ನಿಸಿರುವ ರಾಕೇಶ್ ದೇವಯ್ಯ, ರಾಜ್ಯದ ವಿವಿಧೆಡೆ ಕೊಡಗಿನ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ, ಯುವ ಜನತೆ ಉದ್ಯೋಗದಲ್ಲಿದ್ದಾರೆ ಹಾಗೂ ಉದ್ಯಮಿಗಳಿದ್ದಾರೆ. ಇವರೆಲ್ಲರಿಗೂ ದಶಪಥ ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.
ಸಂಸದರನ್ನು ಟೀಕಿಸುವುದಕ್ಕಾಗಿಯೇ ಜಿಲ್ಲೆಯ ಕಾಫಿ ಬೆಳೆಗಾರರ ಬಗ್ಗೆ ಕಾಳಜಿಯ ಮಾತುಗಳನ್ನಾಡಿರುವ ಸಂಕೇತ್ ಪೂವಯ್ಯ ಅವರು, ಮೊದಲು ಕೃಷಿಕರ 10 ಹೆಚ್‌ಪಿ ವರೆಗಿನ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ಸರ್ಕಾರದ ಮೇಲೆ ಒತ್ತಡ ಹೇರಲಿ ಎಂದು ಒತ್ತಾಯಿಸಿದ್ದಾರೆ.
ತಮ್ಮ ಬಹುಮತದ ಸರ್ಕಾರದ ಮೂಲಕ ಕೊಡಗಿನ ಬೆಳೆಗಾರರಿಗೆ ಸಹಕಾರಿಯಾಗುವ ಕೆಲಸವನ್ನು ಮಾಡಬೇಕೆ ಹೊರತು ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡಿ ಜನರ ಹಾದಿ ತಪ್ಪಿಸುವ ಪ್ರಯತ್ನ ಮಾಡಬಾರದು. ಜಿಲ್ಲೆಯ ಜನ ಪ್ರಜ್ಞಾವಂತರಾಗಿದ್ದು, ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ದೊರೆತ ಮತಗಳೆಷ್ಟು ಎನ್ನುವ ಬಗ್ಗೆ ಸಂಕೇತ್ ಪೂವಯ್ಯ ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
ಸರ್ಕಾರದ ಪ್ರತಿನಿಧಿಯಲ್ಲದಿದ್ದರೂ ವನ್ಯಜೀವಿಗಳು ದಾಳಿ ಮಾಡಿದಾಗ ಸಂತ್ರಸ್ತರ ಎದುರು ಮೊಸಳೆ ಕಣ್ಣಿರು ಸುರಿಸುವ ಅವರು ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಲು ಸರ್ಕಾರದ ಮೇಲೆ ಯಾಕೆ ಒತ್ತಡ ಹೇರುತ್ತಿಲ್ಲವೆಂದು ರಾಕೇಶ್ ದೇವಯ್ಯ ಪ್ರಶ್ನಿಸಿದ್ದಾರೆ.
ಯಾವುದೋ ಅಧಿಕಾರದ ಮೇಲಿನ ವ್ಯಾಮೋಹಕ್ಕಾಗಿ ಲಾಬಿ ಮಾಡಲು ಬಾಲಿಶ ಹೇಳಿಕೆಗಳನ್ನು ನೀಡುವುದನ್ನು ಮೊದಲು ನಿಲ್ಲಿಸಲಿ, ಜನರ ಪ್ರೀತಿ ಗಳಿಸಿ ನಂತರ ಅಧಿಕಾರ ಪಡೆಯಲಿ ಎಂದು ಅವರು ಒತ್ತಾಯಿಸಿದ್ದಾರೆ.










