ಸುಂಟಿಕೊಪ್ಪ ಡಿ.3 : ಮಕ್ಕಳಿಗೆ ಆಸ್ತಿ ಮಾಡಿಡುವ ಬದಲು ಉನ್ನತ ಶಿಕ್ಷಣ ನೀಡುವ ಮೂಲಕ ಅವರನ್ನೇ ಸಮಾಜದ ಆಸ್ತಿಯನ್ನಾಗಿ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಪೋಷಕರ ಮೇಲಿದೆ ಎಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.
ಸುಂಟಿಕೊಪ್ಪ ಹೋಬಳಿ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಆಶ್ರಯದಲ್ಲಿ ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘ ಹಾಗೂ ಬಿಲ್ಲವ ವಿದ್ಯಾರ್ಥಿ ಘಟಕದ ವತಿಯಿಂದ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀನಾರಾಯಣ ಗುರುಗಳ ಜಯಂತ್ಯೋತ್ಸವ, ಗೌರವ ಸಮರ್ಪಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾಸಂತ ನಾರಾಯಣ ಗುರುಗಳ ಸಾಧನೆ ಮತ್ತು ಜೀವನದ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕು. ನಾರಾಯಣ ಗುರುಗಳು ಬಿಲ್ಲವ ಸಮುದಾಯಕ್ಕೆ ಮಾತ್ರ ಗುರುಗಳಾಗದೆ ಸಮಾಜದ ಎಲ್ಲಾ ಸಮುದಾಯಕ್ಕೂ ಮಾದರಿಯಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಮಾಜವನ್ನು ಶೈಕ್ಷಣಿಕ ಮತ್ತು ಅರ್ಥಿಕವಾಗಿ ಸಬಲಗೊಳಿಸಬೇಕೆಂದು ಕರೆ ನೀಡಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ ಸಮಾಜ ಸುಧಾರಣೆ ಮತ್ತು ಅನುಭವ ಮಂಟಪವನ್ನು ಉಲ್ಲೇಖಿಸಿದ ಅವರು ಈ ರೀತಿಯ ದಾರ್ಶನಿಕರಿಂದ ನಾವು ಪ್ರೇರಣೆ ಪಡೆಯಬೇಕೆಂದು ಕಿವಿಮಾತು ಹೇಳಿದರು.
ಪ್ರತಿಯೊಬ್ಬರು ತಮ್ಮ ಸಂಪಾದನೆಯಲ್ಲಿ ಶೇ.10 ರಷ್ಟನ್ನು ಸಮಾಜ ಸೇವೆಗಾಗಿ ಮೀಸಲಿಡಬೇಕೆಂದು ಸಲಹೆ ನೀಡಿದ ಅಪ್ಪಚ್ಚು ರಂಜನ್, 7ನೇ ಹೊಸಕೋಟೆ ಬಳಿ ತಮ್ಮ ಮಕ್ಕಳ ನೆರವಿನಿಂದ ರೂ.1 ಕೋಟಿ ವೆಚ್ಚದಲ್ಲಿ ಅನಾಥಾಶ್ರಮವೊಂದನ್ನು ನಿರ್ಮಿಸಲಾಗುತ್ತಿದೆ ಎಂದರು.
ಮುಖ್ಯ ಭಾಷಣ ಮಾಡಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕ ಅಭಿನ್ ಬಂಗೇರ ಹಬ್ಬಗಳ ಆಚರಣೆ ಕೇವಲ ಸಾಮಾಜಿಕ ಜಾಲತಾಣಗಳಿಷ್ಟೇ ಮೀಸಲಾಗಿರಬಾರದು. ಪ್ರತಿ ಮನೆ ಮನೆಗಳಲ್ಲಿ ಸಾಂಪ್ರದಾಯಿಕವಾಗಿ ಆಚರಿಸುವ ಮೂಲಕ ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಪರಿಚಯಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ನಾವು ಜೀವನದಲ್ಲಿ ಏನೇ ಸಾಧಿಸಿದರೂ, ಎಷ್ಟೇ ಉನ್ನತ ಸ್ಥಾನಗಳಿಗೆ ಏರಿದರೂ ನಮ್ಮ ಮಾತೃಭೂಮಿ, ಮಾತೃಭಾಷೆ ಮತ್ತು ಸಂಸ್ಕೃತಿಯನ್ನು ಮರೆಯಬಾರದು ಎಂದರು.
ಸುಂಟಿಕೊಪ್ಪ ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಮಾತನಾಡಿ ಸಮಗ್ರ ಹಿಂದೂ ಸಮಾಜದ ಅಭ್ಯುದಯಕ್ಕೆ ಎಲ್ಲರು ಒಗ್ಗೂಡಿ ಕೈಜೋಡಿಸಬೇಕು. ಬಿಲ್ಲವ ಸಮುದಾಯದ ಸಮಸ್ಯೆಗಳಿಗೆ ಗ್ರಾ.ಪಂ ಮಟ್ಟದಲ್ಲಿ ಪರಿಹಾರ ಸಿಗುವುದಾದರೆ ಆ ನಿಟ್ಟಿನಲ್ಲಿ ಶ್ರಮಿಸಲು ತಾವು ಬದ್ಧರಾಗಿರುವುದಾಗಿ ಭರವಸೆ ನೀಡಿದರು.
ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್ ಮಾತನಾಡಿ ಯುವ ಜನಾಂಗ ದುಶ್ಚಟಗಳಿಂದ ದೂರ ಉಳಿದು ಉನ್ನತ ಶಿಕ್ಷಣ ಪಡೆಯುವ ಮೂಲಕ ಜೀವನದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.
::: ಕಲಾಕೃತಿ :::
ಉಪ್ಪಿನಂಗಡಿಯ ವಿನಯ್ ಶಾಂತಿ ಹಾಗೂ ತಂಡದಿಂದ ಆಕರ್ಷಣೀಯ ನಾರಾಯಣ ಗುರುಗಳ ಮಂಡಲ ಕಲಾಕೃತಿಯೊಂದಿಗೆ ಗುರುಪೂಜೋತ್ಸವ ನಡೆಯಿತು.
ಸುಂಟಿಕೊಪ್ಪ ಹೋಬಳಿ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ.ಮುಖೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕುಶಾಲನಗರ ತಾಲ್ಲೂಕು ಆಹಾರ ನಿರೀಕ್ಷಕರಾದ ಎಂ.ಎಸ್.ಸ್ವಾತಿ, ಸೋಮವಾರಪೇಟೆ ಶ್ರೀ ನಾರಾಯಣ ಗುರುಗಳ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎ.ಭಾಸ್ಕರ್, ವಿರಾಜಪೇಟೆ ಬಿಲ್ಲವ ಸಂಘದ ಅಧ್ಯಕ್ಷ ಗಣೇಶ್, ಕುಶಾಲನಗರ ಕೋಟಿ ಚೆನ್ನಯ್ಯ ಬಿಲ್ಲವ ಸಂಘದ ಅಧ್ಯಕ್ಷ ಸುಧೀರ್ ಎಸ್, ಮಡಿಕೇರಿ ಬಿಲ್ಲವ ಸಂಘದ ಅಧ್ಯಕ್ಷೆ ಲೀಲಾವತಿ, ಸುಂಟಿಕೊಪ್ಪ ಹೋಬಳಿ ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ಮಧು ನಾಗಪ್ಪ, ಸುಂಟಿಕೊಪ್ಪ ಹೋಬಳಿ ಬಿಲ್ಲವ ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರೀತಮ್ ಬಿ.ಎಸ್ ಉಪಸ್ಥಿತರಿದ್ದರು.
ಚಂದ್ರಾವತಿ ಹಾಗೂ ಚಿತ್ರಾ ಪ್ರಾರ್ಥಿಸಿ, ಸುಂಟಿಕೊಪ್ಪ ಹೋಬಳಿ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ.ಮುಖೇಶ್ ಸ್ವಾಗತಿಸಿ, ಸಂಧ್ಯಾ ಮಂಜುನಾಥ್ ಹಾಗೂ ವೆಂಕಪ್ಪ ಕೋಟ್ಯಾನ್ ನಿರೂಪಿಸಿದರು.
ಸಮಾರಂಭಕ್ಕೂ ಮೊದಲು ಶ್ರೀಕೋದಂಡ ರಾಮ ಮಂದಿರದಿAದ ಅಲಂಕೃತ ಮಂಟಪದಲ್ಲಿ ಶ್ರೀನಾರಾಯಣ ಗುರುಗಳ ಮತ್ತು ಕೋಟಿ ಚೆನ್ನಯ್ಯ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ವಿಷ್ಣುಮೂರ್ತಿ ಕುಣಿತ ಭಜನಾ ಮಂಡಳಿಯ ತಿರ್ಲೆ ಕುಣಾಲು ಭಜನಾ ಕುಣಿತ, ಮಹಿಳೆಯರ ಕುಂಭ ಕಳಸದೊಂದಿಗೆ ಮೆರವಣಿಗೆ ಸಾಗಿತು. ಸಾಮೂಹಿಕವಾಗಿ ಹಳದಿ ಬಣ್ಣದ ಸೀರೆ ಉಟ್ಟ ಮಹಿಳೆಯರು, ಬಿಳಿ ಶರ್ಟ್ ಧರಿಸಿದ ಪುರುಷರು ಮೆರವಣಿಗೆಯಲ್ಲಿ ಗಮನ ಸೆಳೆದರು.
::: ಸನ್ಮಾನ :::
ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತರಾದ 7 ಮಂದಿಯನ್ನು ಸನ್ಮಾನಿಸಲಾಯಿತು. 10ನೇ ತರಗತಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಜಿಲ್ಲಾ ಮಟ್ಟದ ನೃತ್ಯ ಕಲಾ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಕರ್ಷಕವಾಗಿತ್ತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.











