ಮಡಿಕೇರಿ ಡಿ.5 : ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಹುದ್ದೆಯನ್ನು ಖಾಯಂಗೊಳಿಸಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ನಗರದಲ್ಲಿ ಪ್ರತಿಭಟನೆ ನಡೆಸಿತು.
ಸಂಘದ ರಾಜ್ಯಾಧ್ಯಕ್ಷ ಹನುಮಂತ ಗೌಡ ಕಲ್ಮಣಿ ಹಾಗೂ ಜಿಲ್ಲಾಧ್ಯಕ್ಷ ಎಂ.ಎ.ಶ್ಯಾಮ್ ಪ್ರಸಾದ್, ಅವರ ನೇತೃತ್ವದಲ್ಲಿ ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಅತಿಥಿ ಉಪನ್ಯಾಸಕರು ಘೋಷಣೆಗಳ ಸಹಿತ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿದ ಸಂಘದ ರಾಜ್ಯಾಧ್ಯಕ್ಷ ಹನುಮಂತ ಗೌಡ ಕಲ್ಮಣಿ ರಾಜ್ಯದಾದ್ಯಂತ ಇರುವ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ ಅತಿಥಿ ಉಪನ್ಯಾಸಕರು ಸೇವಾ ಭದ್ರತೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಅತಿಥಿ ಉಪನ್ಯಾಸಕರನ್ನು ಜೀತದಂತೆ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅತಿಥಿ ಉಪನ್ಯಾಸಕರನ್ನು ಖಾಯಂ ಗೊಳಿಸುವ ಭರವಸೆ ನೀಡಿದ್ದರು. ಇಂದು ಸ್ವತ: ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿದ್ದರು ನಮ್ಮ ಬೇಡಿಕೆ ಈಡೇರಿಲ್ಲ. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಅತಿಥಿ ಉಪನ್ಯಾಸಕರ ಭವಿಷ್ಯವೇ ಕತ್ತಲಲ್ಲಿ ಮುಳುಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅತಿಥಿ ಉಪನ್ಯಾಸಕರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಎಐಟಿಯುಸಿ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ, ಅತಿಥಿ ಉಪನ್ಯಾಸಕರ ಹುದ್ದೆಯನ್ನು ರಾಜ್ಯ ಸರ್ಕಾರ ತಕ್ಷಣ ಖಾಯಂಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮಂಗಳೂರು ವಿವಿ ಮಾಜಿ ಸೆನೆಟರ್ ಹಾಗೂ ಸಂಘದ ಪ್ರಮುಖರಾದ ಹರೀಶ್ ಆಚಾರ್ಯ ಮಾತನಾಡಿ, ಅತಿಥಿ ಉಪನ್ಯಾಸಕರು ಪ್ರಸ್ತುತ ಅಭದ್ರತೆಯ ವಾತಾವರಣದಲ್ಲಿದ್ದಾರೆ. ರಾಜ್ಯ ವ್ಯಾಪಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14 ಸಾವಿರ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಇವರಲ್ಲಿ ಶೇ.70 ರಷ್ಟು ಅಂದರೆ ಸುಮಾರು 9 ಸಾವಿರ ಮಂದಿ ಅತಿಥಿ ಉಪನ್ಯಾಸಕರೆ ಆಗಿದ್ದಾರೆ. ಇವರೆಲ್ಲರು ಮುಷ್ಕರಕ್ಕೆ ಇಳಿದರೆ ರಾಜ್ಯವ್ಯಾಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ ಸುಮಾರು 2.50 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಏನಾಗಬಹುದು ಎನ್ನುವುದನ್ನು ಸರ್ಕಾರ ಚಿಂತನೆ ಹರಿಸಬೇಕಿದೆ ಎಂದು ಹೇಳಿದರು.
ಯಾವುದೇ ಸರ್ಕಾರಿ ನೇಮಕಾತಿಗಳು ಸಿಬ್ಬಂದಿ ಸೇವಾ ನೇಮಕಾತಿ ನಿಯಮದಡಿ ನಡೆಯಬೇಕು. ಈ ಹಿನ್ನೆಲೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಖಾಯಂ ಗೊಳಿಸಬೇಕೆಂದು ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಅಧಿವೇಶನದಲ್ಲಿ ಸ್ಪಷ್ಟಪಡಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದರು.
ಸಂಘದ ರಾಜ್ಯ ಕಾರ್ಯದರ್ಶಿ ಪೀಟರ್ ವಿನೋದ್ ಚಂದ್, ಹಾವೇರಿ ಜಿಲ್ಲಾ ಅಧ್ಯಕ್ಷ ಕಾಂತೇಶ್ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಮಾದಪ್ಪ, ಖಜಾಂಚಿ ಮೋಹನ್, ಮಹಿಳಾ ಘಟಕದ ಪ್ರಮುಖರಾದ ಡೀನಾ, ಸಂಘದ ಸದಸ್ಯರುಗಳಾದ ಸುನಿಲ್, ಧನ್ಯ ಕೆ.ಜಿ. ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.









