ಮಡಿಕೇರಿ ಡಿ.5 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಂಡಿಸಿದ ಹಕ್ಕೊತ್ತಾಯದ ಹಿನ್ನೆಲೆಯಲ್ಲಿ ಡಾ.ದ್ವಾರಕನಾಥ್ ಆಯೋಗದ ವರದಿ ಮತ್ತು ಕರ್ನಾಟಕ ರಾಜ್ಯ ಶ್ರೇಷ್ಠ ನ್ಯಾಯಾಲಯದ ಸ್ಪಷ್ಟ ನಿರ್ದೇಶನವಿದ್ದರೂ ಸರ್ಕಾರಿ ದಾಖಲೆಗಳಲ್ಲಿ ಕೊಡವರನ್ನು “ಕೊಡವ” ಎಂದು ನಮೂದಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿ ಎರಡು ತಿಂಗಳೇ ಕಳೆದಿದ್ದರೂ ಸರ್ಕಾರದ ಸಾಫ್ಟ್ ವೇರ್‍ನಲ್ಲಿ ಈ ಬದಲಾವಣೆಯನ್ನು ಅಪ್‍ಲೋಡ್ ಮಾಡಿಲ್ಲ. ಇದರಿಂದ ಕೊಡವರಿಗೆ ದಾಖಲೆಗಳನ್ನು ಪಡೆಯುವ ಸಂದರ್ಭ ಅನ್ಯಾಯವಾಗುತ್ತಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಈ ವಿಚಾರದಲ್ಲಿ ಆಡಳಿತಾಂಗ ದಿವ್ಯ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಸಮಾಜ ವಿಜ್ಞಾನಿ ಡಾ.ಸಿ.ಎಸ್.ದ್ವಾರಕನಾಥ್ ಅವರನ್ನು ಸಿಎನ್‍ಸಿ ಕೊಡಗಿಗೆ ಆಹ್ವಾನಿಸಿ, ಕೊಡವರ ಸಮಗ್ರ ಸಾಮಾಜಿಕ, ಚಾರಿತ್ರಿಕ ಹಿನ್ನೆಲೆ ಮತ್ತು ದಾಖಲೆಗಳನ್ನು ಒದಗಿಸುವುದರೊಂದಿಗೆ ಆಯೋಗದ ಕರೆಯಂತೆ ಬೆಂಗಳೂರಿನ ಆಯೋಗದ ನ್ಯಾಯಾಲಯದಲ್ಲಿ ಈ ಸಂಬಂಧ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಕೊಡವ ಅವರು ಸುದೀರ್ಘ ಜ್ಞಾಪನ ಪತ್ರ ಸಲ್ಲಿಸಿದರು. ಅದರಂತೆ ಆಯೋಗವು ಕೊಡಗರು ಬದಲು “ಕೊಡವ” ಎಂದು ಅದರ ಶಾಸ್ತ್ರೀಯ ನಾಮವನ್ನು ಸರ್ಕಾರಿ ದಾಖಲೆಗಳಲ್ಲಿ ಅಳವಡಿಸಲು ಶಿಫಾರಸ್ಸು ಮಾಡಿತು. ಸದರಿ ಶಿಫಾರಸ್ಸನ್ನು ಒಪ್ಪಿದ ಸರ್ಕಾರ ತದನಂತರ ಬದಲಾದ ಅಧಿಕಾರ ವ್ಯವಸ್ಥೆಯಲ್ಲಿ ತಾನೇ ಒಪ್ಪಿದ ಆದೇಶವನ್ನ ಕಸದ ಬುಟ್ಟಿ ಸೇರಿಸಿತು. ಈ ಸಂಬಂಧ ಸಿಎನ್‍ಸಿ ರಾಜ್ಯ ಶ್ರೇಷ್ಠ ನ್ಯಾಯಾಲಯದ ಮೊರೆ ಹೋಯಿತು. ಕಳೆದ 14 ವರ್ಷಗಳಿಂದ ಸಿಎನ್‍ಸಿ ಸಂಘಟನೆ ನಡೆಸಿದ ಹೋರಾಟದ ಫಲವಾಗಿ ನ್ಯಾಯಾಲಯ ನೀಡಿದ ಆದೇಶದ ಹಿನ್ನೆಲೆ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಸರ್ಕಾರಿ ದಾಖಲೆಗಳಲ್ಲಿ ಕೊಡವರನ್ನು “ಕೊಡವ” ಎಂದು ನಮೂದಿಸಲು ಅಧಿಕೃತ ಸೂಚನೆಯನ್ನು ನೀಡಿದೆ. ಆದರೆ ಇದುವರೆಗೂ ಈ ಪ್ರಕ್ರಿಯೆ ಜಾರಿಯಾಗಿಲ್ಲ. ಇದು ಸಾಂವಿಧಾನಿಕ ಮತ್ತು ಆಡಳಿತಾತ್ಮಕ ಹಕ್ಕಿನ ಉಲ್ಲಂಘನೆಯಾಗಿದೆ. ಆಡಳಿತಾತ್ಮಕ ಅಧಿಕಾರಿಗಳು ಅಸಡ್ಡೆ ತೋರುತ್ತಿರುವುದರಿಂದ ಕೊಡವರು ಇಂದು ಅತಂತ್ರ ಪರಿಸ್ಥಿತಿ ಅನುಭವಿಸುತ್ತಿದ್ದು, ಸರ್ಕಾರದ ಕಲ್ಯಾಣ ರಾಜ್ಯ ವ್ಯವಸ್ಥೆಯ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
ಪ್ರತೀ ಜನಾಂಗದ ಜಾತಿ ದೃಢಿಕರಣ ಹೊಂದುವುದು ಇಂದಿನ ಪ್ರಜಾತಂತ್ರ ವ್ಯವಸ್ಥೆಯ ದೈನಂದಿನ ಅವಶ್ಯಕತೆ ಆಗಿದೆ. ಕೊಡವರು “ಕೊಡವ” ನಾಮಕರಣದಡಿಯಲ್ಲಿ ಜಾತಿ ಪ್ರಮಾಣಪತ್ರವನ್ನು ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ. ಈ ರೀತಿಯ ಅನ್ಯಾಯವು ಅತಿದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ 21 ನೇ ಶತಮಾನದ ಅತ್ಯಂತ ದೊಡ್ಡ ದುರಂತವಾಗಿದೆ ಎಂದು ಆರೋಪಿಸಿದರು.
ಚಾರಿತ್ರಿಕ ಆದೇಶ ಹೊರಡಿಸಿದ ಹೈಕೋರ್ಟ್‍ನ ಘನ ನ್ಯಾಯಮೂರ್ತಿಗಳಾದ ಜಸ್ಟಿಸ್ ಕೃಷ್ಣಧಿಕ್ಷಿತ್ ಅವರು ಈ ರೀತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡಾ.ದ್ವಾರಕನಾಥ್ ಆಯೋಗದ ವರದಿಯ ಸಿಫಾರಸ್ಸು ಗಂಗಾನದಿಯ ನೀರಿನಷ್ಟೆ ನಿರ್ಮಲವಾಗಿದೆ. ಕೊಡವರು ಪದದ ಅನುಷ್ಠಾನಕ್ಕೆ ಯಾವುದೇ ಮರು ವ್ಯಾಖ್ಯಾನದ ಅವಶ್ಯಕತೆ ಇಲ್ಲ. ಅಥವಾ ಯಾವುದೇ ಬಿಕ್ಕಟ್ಟುಗಳ ನೆಪ ಹೇಳುವ ಅವಶ್ಯಕತೆ ಇಲ್ಲ. ನಾವಿಂದು ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತದಲ್ಲೂ ಇಲ್ಲ. ಕಲ್ಯಾಣ ರಾಜ್ಯವು ಸದಾಕಾಲ ಜನರ ಏಳಿಗೆಗೆ ಮತ್ತು ಅವರಲ್ಲಿ ಆತ್ಮವಿಶ್ವಾಸ ರೂಪಿಸುವಲ್ಲಿ ಮುಂದಾಗಬೇಕೆಂದು ಯಾವುದೇ ಆಡಳಿತಾತ್ಮಕ ನೆಪಗಳನ್ನು ತೋರಿಸಬಾರದೆಂದು ಕೊಡವ ಶಾಸ್ತ್ರೀಯ ಪದವನ್ನು ಆದಷ್ಟು ಬೇಗ ಬಳಕೆಗೆ ತಂದು ಕೊಡವರು ಸಂವಿಧಾನದಡಿ ದೊರಕಬೇಕಾದ ಸವಲತ್ತುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕೆಂದು ಮಹತ್ವ ಪೂರ್ಣ ತೀರ್ಪು ನೀಡಿರುತ್ತಾರೆ. ನ್ಯಾಯಾಲಯದ ತೀರ್ಪಿಗೆ, ಆಯೋಗದ ಶಿಫಾರಸ್ಸಿಗೆ ಮತ್ತು ಸರ್ಕಾರಿ ಆದೇಶಕ್ಕೆ ಗೌರವ ನೀಡುವ ಕೆಲಸ ಆಗಬೇಕಾಗಿದೆ.
ಸರ್ಕಾರಿ ಆದೇಶ ಬಂದು ಎರಡು ತಿಂಗಳು ಕಳೆದರೂ ಸಾಫ್ಟ್‍ವೇರ್ ನಲ್ಲಿ “ಕೊಡವ” ಅಪ್‍ಲೋಡ್ ಆಗಲಿಲ್ಲವೆಂದರೆ ಏನರ್ಥ ?
“ಕೊಡವ” ನಾಮಕರಣವನ್ನು ಸಾಫ್ಟ್‍ವೇರ್‍ಗೆ ಅಪ್‍ಲೋಡ್ ಮಾಡಿ “ಕೊಡಗರು” ಪದ ಬಳಕೆಯನ್ನು ಕೈಬಿಟ್ಟು ಆಡಳಿತ ಲೋಪ ಸರಿಪಡಿಸಬೇಕು. ಮತ್ತಷ್ಟು ವಿಳಂಬವಿಲ್ಲದೆ “ಕೊಡವ” ಶಾಸ್ತ್ರೀಯ ನಾಮಕರಣವನ್ನು ಸಾಫ್ಟ್‍ವೇರ್‍ಗೆ ಅಪ್‍ಲೋಡ್ ಮಾಡುವ ಮೂಲಕ ಡಾ.ದ್ವಾರಕನಾಥ್ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ ಅವರು, ಕೊಡವ ನಾಮಕರಣವು ನಮ್ಮ ಜನಾಂಗೀಯ ಹೆಗ್ಗುರುತನ್ನು ಶಾಸನಬದ್ಧವಾಗಿ ಅನುಮೋದಿಸುತ್ತದೆ ಮತ್ತು ನಮ್ಮ ಅಸ್ತಿತ್ವವನ್ನು ಈ ನೆಲದಲ್ಲಿ ಸಾಕ್ಷೀಕರಿಸುತ್ತದೆ ಎಂದು ಹೇಳಿದರು.
ಜ್ಞಾಪನ ಪತ್ರದ ಪ್ರತಿಗಳನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷರು ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರುಗಳಿಗೆ ಕಳುಹಿಸಿಕೊಡಲಾಗಿದೆ ಎಂದು ನಾಚಪ್ಪ ಮಾಹಿತಿ ನೀಡಿದರು.









