ಮಡಿಕೇರಿ ಡಿ.5 : ಕುಶಾಲನಗರ ಗ್ರಾಮಾಂತರ ವ್ಯಾಪ್ತಿಯ ಬಾಳಗೋಡು ಗ್ರಾಮದ ಮನೆಯೊಂದರಿಂದ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಮೂಲದ ಆರೋಪಿಯನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ರಂಗಸಮುದ್ರ ಗ್ರಾಮದಲ್ಲಿ ವಾಸವಿದ್ದ, ಅಸ್ಸಾಂ ಮೂಲದ ಸೈಫುಲ್ ಇಸ್ಲಾಂ(33) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತನ ಬಳಿಯಲ್ಲಿದ್ದ 1 ಸಾವಿರ ರೂ. ನಗದು, 47 ಗ್ರಾಂ ಚಿನ್ನಾಭರಣ ಹಾಗೂ 200 ಗ್ರಾಂ ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಾಳಗೋಡು ಗ್ರಾಮದ ಶರೀಫ್ ಎಂಬುವವರ ಮನೆಯಿಂದ ಇದೇ ಡಿ.2 ರ ರಾತ್ರಿ ಗಾದ್ರೇೀಜ್‍ನಲ್ಲಿದ್ದ 5ಸಾವಿರ ರೂ. ನಗದು, 47 ಗ್ರಾಂ ಚಿನ್ನಾಭರಣ ಹಾಗೂ 200ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಪೊಲೀಸರು, ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಸೈಫುಲ್ ಇಸ್ಲಾಂ, ಅಸ್ಸಾಂನ ಬುರಗಾಂವ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೊಲೆ ಪ್ರಕರಣ ಹಾಗೂ ಮರಿಗಾಂವ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕಳವು, ನಿಷೇಧಿತ ಮಾದಕ ವಸ್ತುಗಳ ಸರಬರಾಜು ಮತ್ತು ಮಾರಾಟ ಪ್ರಕರಣಗಳಲ್ಲಿ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರಪೇಟೆ ಉಪವಿಭಾಗದ ಡಿವೈಎಸ್‍ಪಿ ಆರ್.ವಿ.ಗಂಗಾಧರಪ್ಪ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿಗಳಾದ ರಾಜೇಶ್.ಕೆ, ಮೋಹನ್ ರಾಜು, ಕುಶಾಲನಗರ ಪಿಎಸ್‍ಐ ಕೆ.ಹೆಚ್.ಭಾರತಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
::: ಎಸ್‍ಪಿ ಶ್ಲಾಘನೆ :::
ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಎಸ್‍ಪಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.
::: ವಿಶೇಷ ಸೂಚನೆ :::
ಹೊರ ರಾಜ್ಯ ಅಥವಾ ಹೊರ ಜಿಲ್ಲೆಗಳಿಂದ ಕೂಲಿ ಕೆಲಸಕ್ಕಾಗಿ ಬರುವ ಜನರ ಹಿನ್ನೆಲೆಯನ್ನು ಮತ್ತು ಅವರ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟವರು ಪಡೆದುಕೊಳ್ಳಬೇಕು. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಇಲ್ಲವೇ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಮನವಿ ಮಾಡಿರುವ ಎಸ್‍ಪಿ ಕೆ. ರಾಮರಾಜನ್, ಅಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.








