ಮಡಿಕೇರಿ ಡಿ.6 : ವಿಶ್ವ ವಿಶೇಷ ಚೇತನರ ದಿನಾಚರಣೆಯ ಕಾರ್ಯಕ್ರಮವು ನಗರದ ಕಾವೇರಿ ಕಲಾಕ್ಷೇತ್ರ ಸಭಾಂಗಣದಲ್ಲಿ ನಡೆಯಿತು.
ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ವಿಶೇಷ ಚೇತನರಿಗಾಗಿ ಎಲ್ಲಾ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯಲ್ಲಿನ ಶೇ.5 ರಷ್ಟು ಅನುದಾನವನ್ನು ಮೀಸಲಿರಿಸಲಾಗಿದ್ದು, ಈ ಅನುದಾನದ ಉಪಯೋಗ ಪಡೆದುಕೊಳ್ಳುವಂತೆ ಹಾಗೂ ಸರ್ಕಾರದಿಂದ ದೊರೆಯುವ ಸಾಧನ ಸಲಕರಣೆಗಳು, ಪಿಂಚಣಿ ಇತ್ಯಾದಿ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಸಲಹೆ ಮಾಡಿದರು. ಹಾಗೆಯೇ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್ ಲೈಬ್ರರಿಯ ವ್ಯವಸ್ಥೆ ಕೂಡ ವಿಶೇಷ ಚೇತನರಿಗೆ ಮಾಡಲಾಗಿದೆ ಎಂದರು.
ವೋಟರ್ ಹೆಲ್ಪ್‍ಲೈನ್‍ನಲ್ಲಿ ಆಧಾರ್ ಕಾರ್ಡನ್ನು ನೋಂದಣಿ ಮಾಡಿಕೊಂಡಲ್ಲಿ ಚುನಾವಣೆಗಳಲ್ಲಿ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಮಾಡಿಕೊಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ವಕೀಲರಾದ ವೈಧ್ಯನಾಥ್ ಮಾತನಾಡಿ 1981 ರ ಡಿಸೆಂಬರ್ 3 ನ್ನೂ ವಿಶ್ವ ವಿಶೇಷಚೇತನ ದಿನಾಚರಣೆ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿದೆ ಎಂದು ತಿಳಿಸಿದರು.
ವಿಶೇಷ ಚೇತನರಿಗಾಗಿ ಕಾನೂನು ರೂಪಿಸುವ ಸಲುವಾಗಿ ವಿಶೇಷ ಚೇತನರ ಕಾಯಿದೆ ಜಾರಿಗೆ ಬಂದಿದ್ದು, ಇದರಿಂದ ವಿಕಲಚೇತನರ ಹಕ್ಕು ಪೋಷಣೆ ಮಾಡುವುದು 2016ರ ಆರ್‍ಪಿಡಬ್ಲ್ಯುಡಿ ಆಕ್ಟ್ ಜಾರಿಗೆ ಬಂದಿದೆ. ಇದರಿಂದ ಸಮಾಜದಲ್ಲಿ ಇತರರಂತೆ ಬದುಕುವ ಅವಕಾಶ ನೀಡಿದೆ ಎಂದರು.
ವಿಕಲಚೇತನರ ಹಕ್ಕನ್ನು ಕಸಿಯುವ ಅವಕಾಶ ಬಂದರೆ ಪ್ರಶ್ನೆ ಮಾಡಲು ಈ ಕಾಯ್ದೆ ಉಪಯೋಗಕಾರಿಯಾಗಿದೆ. ಅವರಿಗಾಗಿ ವಿಶೇಷ ನ್ಯಾಯಾಲಯವಿದೆ ಹಕ್ಕಿಗೆ ಚ್ಯುತಿ ಬಂದಲ್ಲಿ ಪ್ರಶ್ನೆ ಮಾಡುವ ಹಕ್ಕನ್ನು ಈ ಕಾಯ್ದೆ ನೀಡುತ್ತದೆ. ಸಾರ್ವಜನಿಕ ಸ್ಥಳದಲ್ಲಿ ವಿಶೇಷವಾಗಿ ರ್ಯಾಂಪ್ ನಿರ್ಮಾಣ ಮಾಡುವುದು ಸರ್ಕಾರಿ ಕಚೇರಿಗಳಲ್ಲಿ ಮೀಸಲಾತಿ ಒದಗಿಸುವದು ವಿಶೇಷ ಸಾಮಾಜಿಕ ಭದ್ರತೆ ನೀಡುವುದು ಈ ಕಾಯ್ದೆಯ ಉದ್ದೇಶವಾಗಿದೆ. ಉಚಿತ ಕಾನೂನು ಸೇವಾ ಪ್ರಾಧಿಕಾರವಿದೆ ಅದಕ್ಕಾಗಿ ನೇಮಕ ಮಾಡಲಾಗುತ್ತದೆ.
ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಡಾಕ್ಟರ್ ಕುಮಾರ್ ಜಿ.ಎಸ್ ಮಾತನಾಡಿ ಸರ್ಕಾರಿ ಸವಲತ್ತುಗಳನ್ನು ವಿಶೇಷ ಚೇತನರಿಗೆ ಒದಗಿಸುವಲ್ಲಿ ಮತ್ತಷ್ಟು ಶ್ರಮಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ ಅವರು ವಿಶೇಷ ಚೇತನರಿಗೆ ಸರ್ಕಾರದಿಂದ ಎಲ್ಲಾ ಸೌಲಭ್ಯಗಳು ಸಿಗುವಂತಾಗಬೇಕು ಎಂದರು.
ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟಗಳನ್ನು ಪ್ರತಿನಿಧಿಸಿದ ಹಸನ್ ಹೊಸಕೇರಿ ಹಾಗೂ ಉತ್ತಮವಾಗಿ ಕೆಲಸ ನಿರ್ವಹಿಸುವಂತಹ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು ಮತ್ತು ಇಲಾಖೆಯ ಫಲಾನುಭವಿಗಳಿಗೆ ಸಾಧನ ಸಲಕರಣೆಗಳನ್ನು ಹಾಗೂ ವಿವಿಧ ಯೋಜನೆಗಳ ಬಾಂಡ್‍ಗಳನ್ನು ವಿತರಿಸಲಾಯಿತು.
ವಿಶೇಷಚೇತನ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು ಹಾಗೂ ಆಯುಷ್ ಇಲಾಖೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ನಿರೂಪಿಸಿದರು. ವಿಕಲಚೇತನ ಕಲ್ಯಾಣಾಧಿಕಾರಿ ವಿಮಲಾ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.










