ನಾಪೋಕ್ಲು ಡಿ.6 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಸಯುಕ್ತ ಆಶ್ರಯದಲ್ಲಿ ಮಡಿಕೇರಿ ತಾಲೂಕಿನ ಚೆಟ್ಟಿಮಾನಿಯಲ್ಲಿ ಗ್ರಾಮ ಸಿರಿ ಕಾರ್ಯಕ್ರಮ ನಡೆಸುವ ಸಲುವಾಗಿ ಚೆಟ್ಟಿಮಾನಿ ಶಾದಿ ಮಹಲ್ ನಲ್ಲಿ ಪಂಚಾಯತ್ ಅಧ್ಯಕ್ಷ ಪೊಡನೋಳನ ದಿನೇಶ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಗ್ರಾಮ ಸಿರಿ ಕಾರ್ಯಕ್ರಮ ಒಂದು ಹೋಬಳಿಯ ಮೂರು ಗ್ರಾ.ಪಂ ಗಳಿಗೆ ಒಳಪಟ್ಟ ಶಾಲಾ-ಕಾಲೇಜುಗಳು, ಅಂಗನವಾಡಿ, ಸಂಜೀವಿನಿ ಒಕ್ಕೂಟ, ಸ್ವಸಹಾಯ ಸ್ತ್ರೀಶಕ್ತಿ ಸಂಘಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಇವರೆಲ್ಲರ ಸಹಭಾಗಿತ್ವದಲ್ಲಿ ಗ್ರಾಮೀಣ ಕ್ರೀಡಾಕೂಟ, ಜನಪದ ಸಾಹಿತ್ಯ ಕ್ಷೇತ್ರದ ಸಾಧಕರ ಪರಿಚಯ, ಸಾಂಸ್ಕೃತಿಕ ಕಾರ್ಯಕ್ರಮಗಳನೊಳಗೊಂಡ ಒಂದು ದಿನದ ಕಾರ್ಯಕ್ರಮನ್ನು ಗ್ರಾಮಸ್ಥರೇ ಸೇರಿಕೊಂಡು ಗ್ರಾಮದಲ್ಲಿ ನಡೆಸುವ ಎಂದ ಟಿ.ಪಿ.ರಮೇಶ್ ಮಾಹಿತಿಗಳನ್ನು ಕ್ರೋಢೀಕರಿಸಿ ಸ್ವಾಗತ ಸಮಿತಿಯ ಗಮನಕ್ಕೆ ತಂದು ಕಿರು ಸಂಚಿಕೆ ಹೊರ ತರುವಂತೆ ಸೂಚನೆ ನೀಡಿದರು.
ಗ್ರಾಮಸ್ಥರಿಂದ ಕಾರ್ಯಕ್ರಮ ನಡೆಸುವ ದಿನಾಂಕ ನಿಗದಿ ಹಾಗೂ ಉಪ ಸಮಿತಿಗಳ ರಚನೆ ಮಾಡುವ ಬಗ್ಗೆ ಒಪ್ಪಿಗೆ ಪಡೆದು ಜ.20 ರ ಶನಿವಾರ ಹಾಗೂ 21 ರ ಭಾನುವಾರ ಗ್ರಾಮಸಿರಿ ಕಾರ್ಯಕ್ರಮವನ್ನು ನಡೆಸುವಂತೆ ಸಭೆ ತೀರ್ಮಾನಿಸಿತು.
ಜ.20 ರಂದು ಗ್ರಾಮೀಣ ಕ್ರೀಡಾಕೂಟಗಳು ಹಾಗೂ ಜ.21ರಂದು ಬೆಳಗ್ಗೆನಿಂದ ಸಂಜೆವರೆಗೆ ಗ್ರಾಮ ಸಿರಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಸಭೆ ನಿರ್ಧರಿಸಿತು. ಧ್ವಜಾರೋಹಣ ,ಗ್ರಾಮೀಣ ಜನಪದ ಕಲಾತಂಡಗಳ ಹಾಗೂ ಸ್ತಬ್ಧ ಚಿತ್ರಗಳ ವರ್ಣ ರಂಜಿತ ಮೆರವಣಿಗೆಯೊಂದಿಗೆ ಆರಂಭವಾಗಿ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಉಪನ್ಯಾಸ, ಗೀತ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪೂರ್ಣ ಗ್ರಾಮೀಣ ಸೊಗಡಿನ ರಸದೌತಣ ಬಡಿಸುವ ಗ್ರಾಮ ಸಿರಿ ಕಾರ್ಯಕ್ರಮವನ್ನು ನಡೆಸುವುದಾಗಿ ಸಭೆಯಲ್ಲಿ ನಿರ್ಧರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಸ್ವಾಗತ ಸಮಿತಿ, ಹಣಕಾಸು ಸಮಿತಿ, ಅಲಂಕಾರ ಸಮಿತಿ, ಮೆರವಣಿಗೆ ಸಮಿತಿ, ಕ್ರೀಡಾ ಸಮಿತಿ, ವೇದಿಕೆ ಸಮಿತಿ, ಆರೋಗ್ಯ ಹಾಗೂ ನೈರ್ಮಲ್ಯ ಸಮಿತಿ, ಪ್ರಚಾರ ಸಮಿತಿ, ಕಾನೂನು ಹಾಗೂ ಶಿಸ್ತು ಸಮಿತಿ, ವಸ್ತು ಪ್ರದರ್ಶನ ಸಮಿತಿಗಳನ್ನು ಉಪಸಮಿತಿಗಳಾಗಿ ರಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಆಯಾ ಸಮಿತಿಯ ಅಧ್ಯಕ್ಷರುಗಳು ಮತ್ತಷ್ಟು ಸದಸ್ಯರುಗಳನ್ನು ಸಮಿತಿಗೆ ಸೇರಿಸಿಕೊಂಡು ಡಿ.15ರ ಒಳಗಾಗಿ ಸಂಪೂರ್ಣ ವರದಿಯನ್ನು ಸ್ವಾಗತ ಸಮಿತಿಯ ಅಧ್ಯಕ್ಷ ಪಾಣತಲೆ ವಿಶ್ವನಾಥ ಅವರಿಗೆ ಸಲ್ಲಿಸುವಂತೆ ಸೂಚಿಸಲಾಯಿತು.
ಗ್ರಾಮ ಸಿರಿಯ ವರ್ಣ ರಂಜಿತ ಮೆರವಣಿಗೆಯು ಕುಂದಚೇರಿ ಪಂಚಾಯತ್ ಗಡಿಭಾಗವಾದ ಕೋಡಿ ಮೊಟ್ಟೆಯಿಂದ ಚೆಟ್ಟಿಮಾನಿ ಶಾಲಾ ಮೈದಾನದವರೆಗೆ ಸಾಗುವಂತೆ ತೀರ್ಮಾನ ಕೈಗೊಳ್ಳಲಾಯಿತು. ಇದೇ ಸಂದರ್ಭ ಗ್ರಾಮಸ್ಥರಾದ ಮಧು ಅವರು ಊರಿನ ದೇವಸ್ಥಾನ ಐತಿಹಾಸಿಕ ಸ್ಥಳಗಳು ಹಾಗೂ ವೈಶಿಷ್ಟ್ಯ ಸಂಗತಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಪ್ರಚಾರ ಕೈಗೊಳ್ಳುವಂತೆ ಮನವಿ ಮಾಡಿದರು.
ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಗ್ರಾಮ ಸಿರಿ ಕಾರ್ಯಕ್ರಮದ ಬಗ್ಗೆ ಎರಡು ಸಭೆ ನಡೆದಿದ್ದು, ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ಸ್ಪಂದನೆ ದೊರೆಯುತ್ತಿದೆ. ಸಮಿತಿ ರಚನೆಯಲ್ಲಿ ಹಾಗೂ ಕಾರ್ಯಕ್ರಮದ ಬಗ್ಗೆ ಯಾವುದೇ ಗೊಂದಲ ಹಾಗೂ ಸಮಸ್ಯೆಗಳು ಇದ್ದಲ್ಲಿ ಪರಿಷತ್ತು ತಮ್ಮೊಂದಿಗೆ ಇದ್ದು ಕೈಜೋಡಿಸಲಿದೆ. ಚೆಟ್ಟಿಮಾನಿಯಲ್ಲಿ ಇದೇ ಮೊದಲಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮ ನಡೆಯುತ್ತಿದ್ದು, ಈ ಕಾರ್ಯಕ್ರಮ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಮಾದರಿಯಾಗಬೇಕು ಎಂದು ಆಶಿಸಿದರು.
ಪರಿಷತ್ತಿನ ಗೌರವ ಕಾರ್ಯದರ್ಶಿ ಪುದಿಯ ನೆರವನ ರೇವತಿ ರಮೇಶ್ ಮಾತನಾಡಿ, ಜಾನಪದ ಸೊಗಡಿನ ಗ್ರಾಮೀಣ ಕ್ರೀಡಾಕೂಟಗಳು ಈ ಕಾರ್ಯಕ್ರಮದಲ್ಲಿ ಮೂಡಿಬರಲಿ ಎಂದರು.
ಪಂಚಾಯತ್ ಸದಸ್ಯರಾದ ಹಾರಿಸ್, ಭಾಗಮಂಡಲ ಅಯ್ಯಂಗೇರಿ ಕುಂದಚೇರಿ ಪಂಚಾಯತ್ ಗೆ ಸೇರಿದ ಗ್ರಾಮಸ್ಥರನ್ನು ಜೊತೆ ಸೇರಿಸಿಕೊಂಡು ಕಾರ್ಯಕ್ರಮವನ್ನು ಯಶಸ್ಸು ಗೊಳಿಸುತ್ತೇವೆ ಎಂದು ಭರವಸೆ ನೀಡಿದರು.
ಪಂಚಾಯತ್ ಅಧ್ಯಕ್ಷ ಪೊಡನೋಳನ ದಿನೇಶ್ ಮಾತನಾಡಿ, ಪರಿಷತ್ತಿನ ಮೂಲಕ ಕನ್ನಡ ಕಾರ್ಯಕ್ರಮವನ್ನು ನಮ್ಮೂರಿನಲ್ಲಿ ನಡೆಸುವುದು ನಮಗೆ ಒದಗಿದ ಸೌಭಾಗ್ಯ . ತಮ್ಮೆಲ್ಲರ ಸಹಕಾರ ಸಹಭಾಗಿತ್ವದೊಂದಿಗೆ ಗ್ರಾಮ ಸಿರಿ ಯಶಸ್ವಿಯಾಗಲಿ ಎಂದು ಶುಭ ಕೋರಿದರು.
ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜೇತ ಆಪಾಡಂಡ ವೀರರಾಜ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ, ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುನಿಲ್ ಪತ್ರಾವೋ ಗೌರವ ಕಾರ್ಯದರ್ಶಿಗಳಾದ ಚಲನ್ ನಿಡ್ಯಮಲೆ, ಕುದುಕುಳಿ ಇಂದಿರಾ ಭರತ್, ಪಿ.ಡಿ.ಒ. ಪಂಚಾಯತ್ ಸದಸ್ಯರಾದ ಬೊಮ್ಮಿಯನ ಬಸಪ್ಪ, ಕೆದಂಬಾಡಿ ವಿಶು ಪ್ರವೀಣ್ ಕುಮಾರ್, ಅಬ್ದುಲ್ ರಶೀದ್, ಜ್ಞಾನೋದಯ ಶಾಲಾ ಮುಖ್ಯ ಶಿಕ್ಷಕಿ ಶ್ವೇತನ್ ಚಂಗಪ್ಪ, ಮೀನಾಕ್ಷಿ ಓ.ಆರ್. ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು, ಸ್ವ ಸಹಾಯ ಸಂಘ, ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳು ಭಾಗಮಂಡಲ ಅಯ್ಯಂಗೇರಿ ಚೆಟ್ಟಿಮಾನಿ, ಕುಂದಚೇರಿ ಭಾಗದ ಊರಿನ ಮುಖಂಡರು,ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ