ಮಡಿಕೇರಿ ಡಿ.7 : ಕೊಡಗು ಗೌಡ ವಿದ್ಯಾ ಸಂಘದ ವತಿಯಿಂದ ಡಿ.10 ರಂದು ಪ್ರತಿಭಾವಂತ 50 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 23 ಮಂದಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಅಂಬೆಕಲ್ಲು ನವೀನ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ತಮ್ಮ ಅಧ್ಯಕ್ಷತೆಯಲ್ಲಿ ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಕೊಡಗು ವಿದ್ಯಾ ಸಂಘದ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮಡಿಕೇರಿ ನಗರಸಭೆಯ ನಿವೃತ್ತ ಆಯುಕ್ತರಾದ ಮೂಟೇರ ಪುಷ್ಪಾವತಿ ಉದ್ಘಾಟಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಮೈಸೂರು ರಂಗಾಯಣದ ಹಿರಿಯ ಕಲಾವಿದೆ ದೇವಜನ ಗೀತಾ ಮೋಂಟಡ್ಕ, ಅತಿಥಿಗಳಾಗಿ ವಿದ್ಯಾನಿಧಿ ದಾನಿಗಳಾದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಮಂಙಂಡ್ರ ರೇಖಾ ಉಲ್ಲಾಸ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷ, ಕೆ.ಎಂ.ಟಿ ವಿದ್ಯಾ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಪೊನ್ನಚ್ಚನ ಮೋಹನ್, ನಿವೃತ್ತ ಶಿಶು ಅಭಿವೃದ್ಧಿ ಅಧಿಕಾರಿ, ಕಾಫಿ ಬೆಳೆಗಾರ ಸೂದನ ಎ.ಮೋಹಿನಿ ಹಾಗೂ ಚೇರಂಬಾಣೆ-ಕಾರುಗುಂದ ಕೊಡಗು ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ಬಾರಿ 50 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 14 ಮಂದಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 9 ಮಂದಿಯನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಎಸ್‍ಎಸ್‍ಎಲ್‍ಸಿಯ 31 ವಿದ್ಯಾರ್ಥಿಗಳು, ಪಿಯುಸಿಯ 13, ಸಿಇಟಿಯಲ್ಲಿ ಸಾವಿರದ ಒಳಗೆ ರ್ಯಾಂಕ್ ಪಡೆದ 2 ವಿದ್ಯಾರ್ಥಿಗಳು ಹಾಗೂ ನೀಟ್ ಪರೀಕ್ಷೆಯಲ್ಲಿ ಐದು ಸಾವಿರರ ಒಳಗೆ ರ್ಯಾಂಕ್ ಪಡೆದ ಒಬ್ಬ ವಿದ್ಯಾರ್ಥಿ ಮತ್ತು ಪದವಿ ವ್ಯಾಸಂಗ ಮಾಡಿದ 3 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.
ನಗರ ಪ್ರದೇಶದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದು ಶೇ.90ಕ್ಕೂ ಹೆಚ್ಚಿನ ಅಂಕ ಪಡೆದವರು ಮತ್ತು ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿ ಶೇ.80 ಕ್ಕೂ ಹೆಚ್ಚಿನ ಅಂಕ ಪಡೆದವರನ್ನು ಈ ಬಾರಿ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಪಿಯುಸಿಯಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದರು.
::: ಬಹುಮಾನ ವಿತರಣೆ :::
ಎಳೆಯ ಮನಸುಗಳಿಗೆ ಯೋಗ್ಯ ವೇದಿಕೆ ಒದಗಿಸುವ ಉದ್ದೇಶದಿಂದ ನಡೆಸಲಾದ ಛದ್ಮವೇಶ, ಚಿತ್ರಕಲೆ ಸ್ಪರ್ಧೆ, ಗೌಡ ಮನೆತನದ ಹೆಸರುಗಳನ್ನು ಹೇಳುವುದು, ಗೌಡ ಸಂಸ್ಕೃತಿಯ ಬಗ್ಗೆ ಪ್ರಬಂಧ, ಸ್ವಾತಂತ್ರ್ಯ ಹೋರಾಟದಲ್ಲಿ ಅರೆಭಾಷೆ ಗೌಡರ ಪಾತ್ರ, ಸ್ಪರ್ಧೆಯಲ್ಲಿ ಭಾಗವಹಿಸುವ ಪೋಷಕರಿಗೆ ಅರೆಭಾಷೆ ಹಾಡುಗಳು ಹೇಳುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು.
::: ಕಟ್ಟಡ ನಿರ್ಮಾಣ :::
ಸಂಘದ ನಿರ್ದೇಶಕ ಸೂದನ ಎಸ್.ಈರಪ್ಪ ಅವರು ಮಾತನಾಡಿ, ಸಮುದಾಯ ಬಾಂಧವರು ಮತ್ತು ದಾನಿಗಳ ಸಹಕಾರದೊಂದಿಗೆ ನಗರದ ಮೇಲಿನ ಗೌಡ ಸಮಾಜದ ಕಟ್ಟಡವನ್ನು ಈಗ ಇರುವ ರೀತಿಯಲ್ಲೆ ನೂತನವಾಗಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಅಮೆ ಸೀತಾರಾಮ್, ಕಾರ್ಯದರ್ಶಿ ಪೇರಿಯನ ಉದಯಕುಮಾರ್, ಸಹಕಾರ್ಯದರ್ಶಿ ತಳೂರು ದಿನೇಶ್ ಕರುಂಬಯ್ಯ, ನಿರ್ದೇಶಕರಾದ ಕುಂಭುಗೌಡನ ವಿನೋದ್ ಕುಮಾರ್ ಹಾಗೂ ಪುದಿಯನೆರವನ ರೇವತಿ ರಮೇಶ್ ಉಪಸ್ಥಿತರಿದ್ದರು.










