ಸೋಮವಾರಪೇಟೆ ಡಿ.12 : ಗೌಡಳ್ಳಿ ಗ್ರಾ.ಪಂ, ಬೆಂಗಳೂರು ಮಕ್ಕಳ ಕಲ್ಯಾಣ ನಿರ್ದೇಶನಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ ಹಾಗೂ ನಾವು ಪ್ರತಿಷ್ಠಾನದ ವತಿಯಿಂದ ಗೌಡಳ್ಳಿ ಪ್ರೌಢಶಾಲೆ ಸಭಾಂಗಣದಲ್ಲಿ ಮಕ್ಕಳ ಗ್ರಾಮಸಭೆ ನಡೆಯಿತು.
ಸಭೆಯಲ್ಲಿ ವಿದ್ಯಾರ್ಥಿಗಳು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಶುಂಠಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಎರಡು ಕೊಠಡಿಯ ಮೇಲ್ಚಾವಣಿಯ ಮರಗಳು ಗೆದ್ದಲು ಹಿಡಿದಿದ್ದು, ಯಾವಾಗ ಬೇಕಾದರೂ ಕುಸಿದು ಬೀಳಬಹುದು ಎಂದು 5ನೇ ತರಗತಿ ಶ್ರೀನಿಧಿ ಹೇಳಿದರು.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಬಂದು ನೋಡಿ ಹೋಗುತ್ತಾರೆ. ಆದರೆ ದುರಸ್ತಿ ಕೆಲಸ ಮಾಡಿಸಿಲ್ಲ. ಮಕ್ಕಳ ಜೀವಹಾನಿಯಾದರೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದರು.
ಪಂಚಾಯಿತಿ ವತಿಯಿಂದ ಇಂಗು ಗುಂಡಿ ನಿರ್ಮಾಣ ಮಾಡಲಾಗಿದೆ. ಆದರೆ ಪೈಪ್ ಅಳವಡಿಸಿಲ್ಲ. ಶಾಲಾ ಆವರಣ ವಾಸನೆಯಿಂದ ಕೂಡಿದೆ. ಗ್ರಾಮೀಣ ಭಾಗದಿಂದ ಮಕ್ಕಳು ಕಾಲ್ನಡಿಗೆಯಲ್ಲೇ ಬರಬೇಕು. ಮಳೆಗಾಲದಲ್ಲಿ ಛತ್ರಿ ಮತ್ತು ಸ್ವೆಟ್ಟರ್ ನೀಡಬೇಕು. ಹಾಗೂ ಎಲ್ಲಾ ಬೇಡಿಕೆಯನ್ನು ಈಡೇರಿಸುವಂತೆ ಮನವಿ ಮಾಡಿದರು.
ನಂದಿಗುಂದ ಸರ್ಕಾರಿ ಪ್ರಾಥಮಿಕ ಶಾಲೆಗೆ ಕೈತೊಳೆಯುವ ತೊಟ್ಟಿ ನಿರ್ಮಿಸಿಕೊಡಬೇಕು. ಶಾಲೆಯ ಮೆಟ್ಟಿಲ ತನಕ ಕಾಂಕ್ರೀಟ್ ರಸ್ತೆ ಬೇಕು. ಆಟದ ಮೈದಾನ ಸ್ವಚ್ಚಗೊಳಿಸಿಕೊಡಬೇಕು ಎಂದು ಶಾಲಾ ವಿದ್ಯಾರ್ಥಿ ಬೇಡಿಕೆ ಸಲ್ಲಿಸಿದರು.
ಗೌಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುತ್ತ ಕಾಡು ಬೆಳೆದಿದ್ದು, ಹಾವುಗಳು ಕೊಠಡಿಯೊಳಗೆ ಬರುತ್ತವೆ. ಕಾಡು ಕಡಿಸಿಕೊಡಿ ಎಂದು ಪಂಚಾಯಿತಿಗೆ ಮನವಿ ಸಲ್ಲಿಸಿದರು. ರಾತ್ರಿ ಸಮಯದಲ್ಲಿ ಕಿಡಿಗೇಡಿಗಳು ಕೊಠಡಿಯ ಬೀಗ ಒಡೆದು ಕಪ್ಪು ಹಲಗೆಯಲ್ಲಿ ಅಶ್ಲೀಲ ಪದಗಳನ್ನು ಬರೆಯುತ್ತಾರೆ. ಕೊಠಡಿಯೊಳಗೆ ಮೂತ್ರ ಮಾಡಿ ಹೋಗುತ್ತಾರೆ. ನಮ್ಮ ಶಾಲೆಗೆ ರಕ್ಷಣೆ ಬೇಕು ಎಂದು ಮನವಿ ಮಾಡಿದರು.
ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದು, ಕ್ರೀಡಾ ಸಾಮಾಗ್ರಿಗಳನ್ನು ಒದಗಿಸಿ ಕೊಡಬೇಕೆಂದು ಗೌಡಳ್ಳಿ ಪ್ರೌಢಶಾಲೆಯ ಕೌಶಿಕ್ ಹೇಳಿದರು.
ಶನಿವಾರಸಂತೆ, ಗೌಡಳ್ಳಿ, ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಕಾಡುಬೆಳೆದಿದ್ದು, ಲೋಕೋಪಯೋಗಿ ಇಲಾಖೆಯವರು ಕೂಡಲೆ ಕಾಡು ಕಡಿಸಬೇಕು ಎಂದು ಗೌಡಳ್ಳಿ ಶಾಲೆಯ ವಿದ್ಯಾರ್ಥಿ ಲೋಕೇಶ್ ಮನವಿ ಮಾಡಿದರು.
ಪಿಡಿಒ ಲಿಖಿತ ಮಾತನಾಡಿ, ಕಳೆದ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ಅನೇಕ ಬೇಡಿಕೆಗಳನ್ನು ಇಟ್ಟಿದ್ದರು. ಗೌಡಳ್ಳಿ ಸರ್ಕಾರಿ ಶಾಲೆಗೆ ರಸ್ತೆ, ಶೌಚಗೃಹ, ಕಾಂಪೌಂಡ್ ಮಾಡಲಾಗಿದೆ, ನಂದಿಗುಂದ ಶಾಲೆಗೆ ಕಾಂಪೌಂಡ್ ಆಗಿದೆ. ಶುಂಠಿ ಶಾಲೆಗೂ ಕಾಂಪೌಂಡ್ ಮಾಡಲಾಗಿದೆ. ಉದ್ಯಾನವನ್ನು ಮಾಡಿಕೊಡಲಾಗುವುದು. ಕಟ್ಟದ ದುರಸ್ತಿಯ ಬಗ್ಗೆ ಜಿ.ಪಂ ಅರ್ಜಿ ಸಲ್ಲಿಸಲಾಗಿದೆ ಎಂದರು.
ನಾವು ಪ್ರತಿಷ್ಠಾನದ ಕಾರ್ಯಕಾರಿ ನಿರ್ದೇಶಕರಾದ ಸುಮನ ಮ್ಯಾಥ್ಯು ಮಾತನಾಡಿ, ಇಂದಿನ ಮಕ್ಕಳು ಇಂದಿನ ಪ್ರಜೆಗಳು. ದೇಶದಲ್ಲಿ 51ಕೋಟಿ ಮಕ್ಕಳಿದ್ದಾರೆ. ಅದರಲ್ಲಿ ಶೇ 38ರಷ್ಟು ಗ್ರಾಮೀಣ ಭಾಗದಲ್ಲಿ ಮಕ್ಕಳಿದ್ದಾರೆ. ಬದುಕುವ ಹಕ್ಕು, ರಕ್ಷಣೆ ಹೊಂದುವ ಹಕ್ಕು, ಭಾಗವಹಿಸುವ ಹಕ್ಕುಗಳನ್ನು ಸಂವಿಧಾನ ನೀಡಿದ್ದು, ಎಲ್ಲಾ ಹಕ್ಕುಗಳು ಸಿಗುವಂತಾಗಬೇಕು. ಮಕ್ಕಳು ಯಾವುದೇ ಮುಲಾಜಿಲ್ಲದೆ ಕೇಳಿ ಪಡೆದುಕೊಳ್ಳಬೇಕು. ನಿಮ್ಮ ಸಮಸ್ಯೆಗಳನ್ನು ಸಹಾಯವಾನಿ ಕರೆ ಹೇಳಿಕೊಳ್ಳಬಹುದು ಎಂದು ಹೇಳಿದರು.
ಸಭೆಯಲ್ಲಿ ಗೌಡಳ್ಳಿ ಗ್ರಾ.ಪಂ ಅಧ್ಯಕ್ಷ ನವೀನ್ ಅಜ್ಜಳ್ಳಿ, ಉಪಾಧ್ಯಕ್ಷೆ ವಿಶಾಲಾಕ್ಷಿ, ಸದಸ್ಯರಾರ ರೋಹಿಣಿ, ಸುಮಾ, ಮಲ್ಲಿಕಾ, ಮಂಜುನಾಥ್, ವೆಂಕಟೇಶ್, ನಾಗರಾಜು, ಗಣೇಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಸಲಹೆಗಾರರಾದ ಜಿ.ಆರ್.ತುಳಸಿ, ಮಕ್ಕಳ ಸಹಾಯವಾಣಿ ಸಂಯೋಜಕ ನವೀನ್ ಕುಮಾರ್, ನಾವು ಪ್ರತಿಷ್ಠಾನದ ಸ್ಥಾಪಕ ಗೌತಮ್ ಕಿರಗಂದೂರು, ವಿದ್ಯಾರ್ಥಿಗಳಾದ ಸ್ಪೂರ್ತಿ, ಗಾನವಿ, ಜಯಶ್ರೀ ಇದ್ದರು.