ಸೋಮವಾರಪೇಟೆ ಡಿ.12 : ಕಾಫಿ ಬೆಳೆಗಾರರ 10 ಹೆಚ್.ಪಿ. ಪಂಪ್ಸೆಟ್ಗಳಿಗೆ ಷರತ್ತಿಲ್ಲದೆ ಉಚಿತ ವಿದ್ಯುತ್ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ವತಿಯಿಂದ ಪಟ್ಟಣ ಜೇಸಿ ವೇದಿಕೆಯಲ್ಲಿ ಧರಣಿ ಪ್ರತಿಭಟನೆ ನಡೆಯಿತು.
2006ರಿಂದಲೂ ಉಚಿತ ವಿದ್ಯುತ್ಗಾಗಿ ರೈತ ಸಂಘ ಹೋರಾಟ ಮಾಡುತ್ತಿದೆ. ಕಳೆದ ವರ್ಷದ ಬೆಳಗಾವಿ ಅಧಿವೇಶನದಲ್ಲಿ ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಅನೇಕ ಷರತ್ತುಗಳನ್ನು ಹಾಕಿ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದರು.
ಕೊನೆಗೂ ಸರ್ಕಾರದ ಆದೇಶವಾಗಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದು, ಬೆಳಗಾವಿ ಅಧಿವೇಶನದಲ್ಲೇ ಉಚಿತ ವಿದ್ಯುತ್ ನೀಡುವ ಆದೇಶ ಹೊರಬೀಳಬೇಕು. ಈ ಬಗ್ಗೆ ಜಿಲ್ಲೆಯ ಶಾಸಕರಾದ ಡಾ.ಮಂತರ್ಗೌಡ ಮತ್ತು ಎ.ಎಸ್.ಪೊನ್ನಣ್ಣ ಕಾಫಿ ಬೆಳೆಯುವ ಜಿಲ್ಲೆಗಳ ಶಾಸಕರ ಸಹಕಾರದೊಂದಿಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯಲೇಬೇಕು ಎಂದು ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಆಗ್ರಹಿಸಿದರು.
ಉಚಿತ ವಿದ್ಯುತ್ ಸಿಗುವ ನಿರೀಕ್ಷೆಯಿಂದ ಸಣ್ಣ ರೈತರು ಪಂಪ್ಸೆಟ್ಗಳ ವಿದ್ಯುತ್ ಬಿಲ್ ಪಾವತಿಸಿಲ್ಲ. ಕಳೆದ ಐದಾರು ವರ್ಷಗಳಿಂದ ಅಕಾಲಿಕ ಮಳೆಯಿಂದ ಕಾಫಿ ಫಸಲು ಹಾನಿಯಾಗಿದೆ. ಅವೈಜ್ಞಾನಿಕ ವಿದ್ಯುತ್ ಬಿಲ್, ಶುಲ್ಕ, ಬಿಲ್ ಮೇಲಿನ ಬಡ್ಡಿ, ಚಕ್ರಬಡ್ಡಿ ಸೇರಿ, ಬಡ ರೈತರ ಪಂಪ್ಸೆಟ್ಗಳು ವಿದ್ಯುತ್ಬಿಲ್ ಲಕ್ಷ ದಾಟಿದೆ. ಬರಪೀಡಿತ ಜಿಲ್ಲೆ ಎಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಬಾಕಿ ವಿದ್ಯುತ್ ಬಿಲ್ ಮೊತ್ತವನ್ನು ಸರ್ಕಾರ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ರೈತರ ಬೇಡಿಕೆಯನ್ನು ಬೆಳಗಾವಿ ಅಧಿವೇಶನದಲ್ಲಿ ಈಡೇರಿಸದಿದ್ದರೆ, ಮುಂದಿನ ಸ್ಥಳೀಯ ಪಂಚಾಯಿತಿ ಹಾಗೂ ಲೋಕಾಸಭಾ ಚುನಾವಣೆಯನ್ನು ಬಹಿಷ್ಕರಿಸುವ ಬಗ್ಗೆ ನಿರ್ಧಾರ ಪ್ರಕಟಿಸಲಾಗುವುದು ಎಂದು ಎಚ್ಚರಿಸಿದರು.
ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆಯಾಗಿರುವ ಹಿನ್ನಲೆಯಲ್ಲಿ ವಾಣಿಜ್ಯ ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ಪಡೆದಿರುವ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, ಸೋಮವಾರಪೇಟೆ ತಾಲ್ಲೂಕನ್ನು ಪೋಡಿಮುಕ್ತ ತಾಲ್ಲೂಕು ಮಾಡಬೇಕು, ರೈತರಿಗೆ ನಿರಂತರ ವಿದ್ಯುತ್ ನೀಡಬೇಕು, ರೈತರ ಮಕ್ಕಳನ್ನು ಮದುವೆಯಾಗುವ ವಧುವಿನ ಖಾತೆಗೆ 5ಲಕ್ಷ ಹಣವನ್ನು ಪ್ರೋತ್ಸಾಹ ಧನವಾಗಿ ಸರ್ಕಾರ ನೀಡಬೇಕು ಎಂದು ಸಂಘದ ಉಪಾಧ್ಯಕ್ಷ ಜಿ.ಎಂ.ಹೂವಯ್ಯ ಆಗ್ರಹಿಸಿದರು.
ಪ್ರತಿಭಟನಾ ಧರಣಿಯಲ್ಲಿ ಸಂಘದ ಪದಾಧಿಕಾರಿಗಳಾದ ಎ.ಆರ್.ಕುಶಾಲಪ್ಪ, ಮಚ್ಚಂಡ ಅಶೋಕ್, ಲಕ್ಷ್ಮಣ, ಮಂದಣ್ಣ, ಪ್ರಸನ್ನ ಕೊಡಿಪೇಟೆ, ಐ.ಎಚ್.ನಿಂಗಪ್ಪ, ರಾಜೇಶ್ ಲಿಂಗೇರಿ, ಉಮಾಶಂಕರ್, ರಾಜಶೇಖರ್, ಸಂದೀಪ್ ಕೂಗೂರು, ಎಚ್.ಈ. ರಮೇಶ್ ಮತ್ತಿತರರು ಇದ್ದರು.
ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಎನ್.ಎಸ್.ನರಗುಂದ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿದರು.