ಮಡಿಕೇರಿ ಡಿ.12 : ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಜಾರ್ಖಂಡ್‍ನ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಬಿಜೆಪಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಸಂಸದ ಧೀರಜ್ ಸಾಹು ಅವರಿಗೆ ಸೇರಿದ್ದು ಎನ್ನಲಾದ ಕೋಟ್ಯಾಂತರ ರೂ. ನಗದು ಪತ್ತೆಯಾಗಿದ್ದು, ಇದು ಭ್ರಷ್ಟಾಚಾರಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ ಐಟಿ ದಾಳಿ ಸಂದರ್ಭ ಅಪಾರ ಪ್ರಮಾಣದ ಹಣ ಸಿಕ್ಕಿದೆ, ಈ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಲೂಟಿ ಮಾಡಿದ ಹಣವನ್ನು ಚುನಾವಣೆಗೆ ಬಳುಸುತ್ತಿದೆ. ದೇಶವನ್ನೇ ಕಾಂಗ್ರೆಸ್ ಪಕ್ಷದವರು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಭ್ರಷ್ಟಾಚಾರವನ್ನು ಬಯಲು ಮಾಡುವ ಕೆಲಸವನ್ನು ಐಟಿ, ಇಡಿಯವರು ಮಾಡುತ್ತಿದ್ದಾರೆ. ಸಂಸದ ಧೀರಜ್ ಸಾಹುಗೆ ಜೈಲು ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಕಾಂಗ್ರೆಸ್ ನ ಎಲ್ಲಾ ಮುಖಂಡರ ಮನೆ ಮೇಲೆ ಐಟಿ ದಾಳಿ ನಡೆಯಬೇಕು. ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವ ಮುಖಂಡರನ್ನು ತೀವ್ರ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಸತೀಶ್, ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್, ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ನಗರಾಧ್ಯಕ್ಷ ಮನು ಮಂಜುನಾಥ್, ನಗರಸಭೆಯ ಬಿಜೆಪಿ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.









