ಮಡಿಕೇರಿ ಡಿ.12 : 18 ವರ್ಷ ಮೇಲ್ಪಟ್ಟ ಯುವಜನರನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವಲ್ಲಿ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವಂತಾಗಬೇಕು ಎಂದು ರಾಜ್ಯ ಸ್ವೀಪ್ ಸಮಿತಿ ಅಧಿಕಾರಿ ಪಿ.ಎಸ್.ವಸ್ತ್ರದ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಗೆ ಯುವ ಜನರನ್ನು ಹೆಸರು ಸೇರ್ಪಡೆ ಬಗ್ಗೆ ನಡೆದ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದರು.
ಕಾಲೇಜುಗಳಿಗೆ ಭೆಟಿ ನೀಡಿ 18 ವರ್ಷ ಮೇಲ್ಪಟ್ಟ ಯುವ ಜನರನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವಲ್ಲಿ ಕ್ರಮವಹಿಸಲಾಗಿದೆ. ಹಾಗೆಯೇ ಮನೆ ಮನೆಗೆ ಭೇಟಿ ನೀಟಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಮುಂದಾಗಬೇಕು ಎಂದು ಸಲಹೆ ಮಾಡಿದರು.
ವಲಸಿಗರು, ಆದಿವಾಸಿಗಳು, ಕಾರ್ಮಿಕರು, ವಿಶೇಷಚೇತನರು ಹೀಗೆ ಎಲ್ಲಾ ಯುವ ಮತದಾರರ ಬಗ್ಗೆ ಗಮನಹರಿಸಬೇಕು ಎಂದು ಪಿ.ಎಸ್.ವಸ್ತ್ರದ್ ಅವರು ತಿಳಿಸಿದರು.
ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರು ಮಾತನಾಡಿ ಜಿಲ್ಲೆಯ ಎಲ್ಲೆಡೆ 18 ವರ್ಷ ಮೇಲ್ಪಟ್ಟವರನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅಗತ್ಯ ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸ್ವೀಪ್ ಅಧಿಕಾರಿ ಎನ್.ಮಂಜುನಾಥ್ ಅವರು ಸ್ವೀಪ್ ಚಟುವಟಿಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್, ತಹಶೀಲ್ದಾರ್ ಪ್ರವೀಣ್ ಕುಮಾರ್, ಚುನಾವಣಾ ತಹಶೀಲ್ದಾರ್ ಸಿ.ಜಿ.ರವಿಶಂಕರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕೃಷ್ಣಪ್ಪ ಇತರರು ಹಲವು ಮಾಹಿತಿ ನೀಡಿದರು.