ಸೋಮವಾರಪೇಟೆ ಡಿ.13 : ಪಟ್ಟಣ ಪಂಚಾಯಿತಿಗೆ ಸೇರಿದ ಅಂಗಡಿಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಸದಸ್ಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ, ದಿನಾಂಕ ನಿಗದಿ, ಮಳಿಗೆ ಮೀಸಲಾತಿ ಸೇರಿದಂತೆ ಯಾವ ವಿಚಾರಕ್ಕೂ ಸದಸ್ಯರ ಅಭಿಪ್ರಾಯ ಪಡೆದಿಲ್ಲ ಹಾಗೂ ಗಮನಕ್ಕೂ ತರದೆ ಏಕಾಏಕಿ ಅಧಿಕಾರಿಗಳು ಹರಾಜು ನಡೆಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಸೋಮವಾರಪೇಟೆ ಪ.ಪಂ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರಪೇಟೆ ಪ.ಪಂ ಮುಖ್ಯಾಧಿಕಾರಿ ನಾಚಪ್ಪ ಅವರಿಗೆ ಮನವಿ ಸಲ್ಲಿಸಿದ ಸದಸ್ಯರು ಹರಾಜು ಪ್ರಕ್ರಿಯೆ ಮುಂದೂಡುವಂತೆ ಮನವಿ ಮಾಡಿದ್ದಾರೆ.
2023 ಸೆ.13 ರಂದು ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿ, ನಗರದ ಅಭಿವೃದ್ಧಿ ಹಾಗೂ ವರ್ತಕರ ಹಿತದೃಷ್ಟಯಿಂದ ಸರ್ಕಾರದ ಅಭಿಪ್ರಾಯ ಪಡೆದು ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವಂತೆ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಅಧಿಕಾರಿಗಳು ಇತ್ತೀಚೆಗೆ ಮಳಿಗೆಗಳ ಹರಾಜು ಪ್ರಕಟಣೆ ನೀಡಿದ್ದಾರೆ.
ಎರಡು ಸಭೆಗಳನ್ನು ಮುಂದೂಡಿದ್ದಾರೆ ಇದರಿಂದಾಗಿ ಸದಸ್ಯರ ಅಭಿಪ್ರಾಯ ತಿಳಿಸಲು ಅವಕಾಶವಾಗಿಲ್ಲ ಆದ್ದರಿಂದ ಹಿಂದಿನ ಸಭೆಯ ನಿರ್ಣಯ ರದ್ದುಪಡಿಸಿ ಹಾಗೂ ಹರಾಜು ಪ್ರಕ್ರಿಯೆಯನ್ನು ಮುಂದೂಡಬೇಕು, ಶೀಘ್ರ ಸಾಮಾನ್ಯ ಸಭೆ ಕರೆಯಬೇಕೆಂದು ಒತ್ತಾಯಿಸಿ ಹನ್ನೊಂದು ಮಂದಿ ಸದಸ್ಯರು ಸಹಿ ಮಾಡಿ ಮುಖ್ಯಾಧಿಕಾರಿಗೆ ಮನವಿ ನೀಡಿದರು.
ಈ ಬಗ್ಗೆ ಆಡಳಿತಾಧಿಕಾರಿ ಗಳೊಡನೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದರು.
ಈ ಸಂದರ್ಭ ಮಾಜಿ ಅಧ್ಯಕ್ಷ ಪಿ.ಕೆ ಚಂದ್ರು, ಸದಸ್ಯರಾದ ಶೀಲಾಡಿಸೋಜ, ಜೀವನ್, ಮೃತ್ಯುಂಜಯ, ಶುಭಕರ, ಮೋಹಿನಿ, ಮಹೇಶ್ ಹಾಜರಿದ್ದರು.