ಮಡಿಕೇರಿ ಡಿ.13 : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಕೊಡಗು ಜಿಲ್ಲೆಯ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ನೀಡುವ ಮೂಲಕ ಇಲ್ಲಿಯವರೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗು ಮತ್ತು ಮೈಸೂರು ಲೋಕಸಭಾ ಕ್ಷೇತ್ರವನ್ನು ನಿಭಾಯಿಸಬಲ್ಲ ಸಮರ್ಥ ಅಭ್ಯರ್ಥಿಗಳು ಕೊಡಗು ಜಿಲ್ಲೆಯಲ್ಲೂ ಇದ್ದಾರೆ. ರಾಜಕೀಯ ಪಕ್ಷಗಳು ಕೇವಲ ಮತಬ್ಯಾಂಕ್ ಗಾಗಿ ಕೊಡಗನ್ನು ಅವಲಂಬಿಸದೆ ಕೊಡಗಿನವರಿಗೂ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.
ಲೋಕಸಭಾ ಕ್ಷೇತ್ರದ ಹಂಚಿಕೆಯಲ್ಲಿ ಕೊಡಗು ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಹಿಂದೆ ಮಂಗಳೂರು ಕ್ಷೇತ್ರದೊಂದಿಗೆ ಸಹಿಸಿಕೊಂಡ ಕೊಡಗು, ಇದೀಗ ಮೈಸೂರಿನೊಂದಿಗೆ ಹೊಂದಿಕೊಂಡಿದೆ. ಆಮದು ಅಭ್ಯರ್ಥಿಗಳಿಂದ ಕೊಡಗು ಜಿಲ್ಲೆಗೆ ನ್ಯಾಯ ದೊರೆಯುವ ವಿಶ್ವಾಸ ಇಲ್ಲಿನ ಜನರಿಗಿಲ್ಲ. ಜಿಲ್ಲೆಯನ್ನು ಜ್ವಲಂತ ಸಮಸ್ಯೆಗಳು ಕಾಡಿದಾಗ ಇಲ್ಲಿಯವರೆಗಿನ ಸಂಸದರುಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಹೊರಗಿನ ಅಭ್ಯರ್ಥಿಗಳಿಗೆ ಇಚ್ಛಾಶಕ್ತಿಯ ಕೊರತೆ ಇರುತ್ತದೆ, ಆದರೆ ಸ್ಥಳೀಯರಾದರೆ ಕೊಡಗಿನ ಬಗ್ಗೆ ಕಾಳಜಿ ಇರುತ್ತದೆ ಮತ್ತು ಅಭಿವೃದ್ಧಿಯ ಬಗ್ಗೆ ಚಿಂತನೆ ಇರುತ್ತದೆ. ಪ್ರಸ್ತುತ ಇರುವ ಸಂಸದರು ಮೈಸೂರು ಮೇಲೆ ತೋರಿದ ಆಸಕ್ತಿಯ ಶೇ.20ರಷ್ಟು ಭಾಗವನ್ನು ಕೂಡ ಕೊಡಗಿನ ಮೇಲೆ ತೋರಿಲ್ಲ, ಸಂಸತ್ ನಲ್ಲೂ ಕೊಡಗಿನ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಪವನ್ ಪೆಮ್ಮಯ್ಯ ಆರೋಪಿಸಿದ್ದಾರೆ.
ಕೊಡಗು ಅತ್ಯಂತ ಸೂಕ್ಷ್ಮ ಮತ್ತು ವಿಶಿಷ್ಟವಾದ ಭೂಪ್ರದೇಶವನ್ನು ಹೊಂದಿದ ಜಿಲ್ಲೆಯಾಗಿದೆ. ಇದರ ಸಂರಕ್ಷಣೆಯಾಗಬೇಕಾದರೆ ಸ್ಥಳೀಯರೇ ಸಂಸದರಾಗಿ ಆಯ್ಕೆಯಾಗುವ ಅನಿವಾರ್ಯತೆ ಇದೆ. ಸೇನೆ, ಕ್ರೀಡೆ, ರಾಜಕೀಯ, ಆರ್ಥಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕೊಡಗಿನವರು ದೇಶಭಕ್ತಿಯಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನ್ಯಾಯಯುತವಾಗಿ ಕೊಡಗಿಗೆ ಪ್ರತ್ಯೇಕ ಲೋಕಸಭಾ ಸ್ಥಾನವನ್ನು ನೀಡಬೇಕಾಗಿತ್ತು. ಆದರೆ ಮಂಗಳೂರು, ಮೈಸೂರು ಎಂದು ಹಂಚಿಕೆ ಮಾಡುವ ಮೂಲಕ ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ತೋರಲಾಗುತ್ತಿದೆ.
ಒಂದು ಅರ್ಥದಲ್ಲಿ ಕೊಡಗು ಅನಾಥಭಾವವನ್ನು ಅನುಭವಿಸುತ್ತಿದೆ. ಕೇಂದ್ರದ ಮೂಲಕ ಬಗೆಹರಿಯಬಹುದಾದ ಸಮಸ್ಯೆಗಳಿಗೆ ಇಲ್ಲಿಯವರೆಗೆ ಪರಿಹಾರಗಳು ದೊರೆತ್ತಿಲ್ಲ. ಆಮದು ಅಭ್ಯರ್ಥಿಗಳ ಎದುರು ನಾವು ನಮ್ಮ ಹಕ್ಕಿಗಾಗಿ ಅಂಗಲಾಚಬೇಕಾದ ದುಸ್ಥಿತಿ ಬಂದೊದಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಮುಖ ರಾಜಕೀಯ ಪಕ್ಷಗಳು ಕೊಡಗು ಜಿಲ್ಲೆಯನ್ನು ತೋರಿಸಿ ಇಲ್ಲಿಯವರೆಗೆ ರಾಜಕೀಯ ಲಾಭ ಮಾಡಿಕೊಂಡಿರುವುದು ಸಾಕು. ಇನ್ನು ಮುಂದೆಯಾದರೂ ಕಾವೇರಿ ನಾಡು ಕೊಡಗಿಗೆ ಕೃತಜ್ಞತೆ ಸಲ್ಲಿಸುವ ಪ್ರಾಮಾಣಿಕತೆ ಇದ್ದರೆ ಕೊಡಗಿನವರಿಗೇ ಸ್ಪರ್ಧಿಸಲು ಅವಕಾಶ ನೀಡಲಿ ಮತ್ತು ಗೆಲ್ಲಿಸಿ ಲೋಕಸಭೆ ಪ್ರವೇಶಿಸುವಂತೆ ಮಾಡಲಿ ಎಂದು ಪವನ್ ಪೆಮ್ಮಯ್ಯ ಒತ್ತಾಯಿಸಿದ್ದಾರೆ.









