ನಾಪೋಕ್ಲು ಡಿ.14 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಗಡಿ ಪ್ರಾಧಿಕಾರ ಮತ್ತು ಕರಿಕೆ ಗ್ರಾ.ಪಂ ಸಂಯುಕ್ತ ಆಶ್ರಯದಲ್ಲಿ ಗಡಿ ಉತ್ಸವ ನಡೆಸುವ ಬಗ್ಗೆ ಕರಿಕೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಕರಿಕೆ ಗ್ರಾ.ಪಂ ಅಧ್ಯಕ್ಷ ಬಾಲಚಂದ್ರ ನಾಯರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗಡಿ ಉತ್ಸವವನ್ನು ಜನವರಿ 8 ರಂದು ಎಳ್ಳುಕೊಚ್ಚಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಗಡಿ ಭಾಗವಾದ ಕರಿಕೆಯಲ್ಲಿ ಕನ್ನಡ ಧ್ವಜಾರೋಹಣ, ನಾಡು ನುಡಿಯ ಜಾನಪದ ಕಲಾತಂಡಗಳ ಮೆರವಣಿಗೆ ಕಾರ್ಯಕ್ರಮದೊಂದಿಗೆ ಗಡಿಭಾಗದ ಸಮಸ್ಯೆಗಳು ಅಹವಾಲುಗಳ ಬಗ್ಗೆ, ವಿಚಾರಗೋಷ್ಠಿ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡ ಒಂದು ದಿನದ ಗಡಿ ಉತ್ಸವವನ್ನುನಡೆಸಲಾಗುವುದು ಎಂದು ತಿಳಿಸಿದರು.
ಗಡಿ ಉತ್ಸವಕ್ಕೆ ಶಾಸಕರುಗಳನ್ನು, ಸಂಬಂಧಪಟ್ಟ ಅಧಿಕಾರಿಗಳನ್ನು ಬರಮಾಡಿಕೊಂಡು ಅವರ ಸಮ್ಮುಖದಲ್ಲಿ ವಿಚಾರಗೋಷ್ಠಿ ನಡೆಸಿ, ಗಡಿ ಭಾಗದ ಸಮಸ್ಯೆ ಗಳಿಗೆ ಸಂಬಂಧ ಪಟ್ಟ ನಿರ್ಣಯ ಮಂಡನೆ ಮಾಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಭರವಸೆ ನೀಡಿದರು.
ಗ್ರಾಮದ ಮುಖಂಡರಾದ ಬೇಕಲ್ ರಮಾನಾಥ ಮಾತನಾಡಿ, ಕರಿಕೆ ಗ್ರಾಮ ಕೊಡಗು ಹಾಗೂ ಕೇರಳ ರಾಜ್ಯದ ಗಡಿಭಾಗವಾಗಿದ್ದು, ಇಲ್ಲಿನ ಶೈಕ್ಷಣಿಕ, ಸಾರಿಗೆ, ರಸ್ತೆಗಳ ಅವ್ಯವಸ್ಥೆಗಳ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡರು.
ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಗಡಿ ಉತ್ಸವ ನಡೆಸಲು ಕರಿಕೆ ಉತ್ತಮ ಸ್ಥಳ ಆಗಿದ್ದು, ಈ ಭಾಗದ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮನ ಮುಟ್ಟಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗಡಿ ಉತ್ಸವ ಒಳ್ಳೆಯ ಅವಕಾಶವಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು ಜಾನಪದ ಸಿರಿ, ಗ್ರಾಮ ಸಿರಿ, ಗಡಿ ಉತ್ಸವದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡದ ಕಂಪನ್ನು ಪಸರಿಸುವ ಕೆಲಸ ಮಾಡುತ್ತಿದೆ ಕರ್ನಾಟಕ ಕೇರಳದ ಗಡಿಯಲ್ಲಿರುವ ಕರಿಕೆಯಲ್ಲಿ ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುವ ಮೂಲಕ ಕನ್ನಡಕ್ಕೆ ಪ್ರಾಮುಖ್ಯತೆ ಸಿಗಬೇಕು ಎಂದರು.
ಜಿಲ್ಲಾ ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್ ಮಾತನಾಡಿ, ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗ ಬೇಕು. ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರೇ ಒಂದಾಗಿ ಹೋರಾಟ ನಡೆಸಬೇಕು ಎಂದರು.
ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುನಿಲ್ ಪತ್ರಾವೋ ಮಾತನಾಡಿ, ಕರಿಕೆ ಗಡಿ ಪ್ರದೇಶವಾಗಿದ್ದು, ಇಲ್ಲಿ ನಡೆಯುವ ಕಾರ್ಯಕ್ರಮ ಕನ್ನಡ, ಅರೆಭಾಷೆ, ಮಲೆಯಾಳಂ, ಮರಾಠಿ, ತುಳು ಎಲ್ಲ ಭಾಷೆಯ ಸಮ್ಮಿಲನ ಕಾರ್ಯಕ್ರಮ ಆಗಲಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಇದೇ ಸಂದರ್ಭ ಗಡಿ ಉತ್ಸವದ ಸ್ವಾಗತ ಸಮಿತಿ ಹಾಗೂ ಉಪ ಸಮಿತಿಗಳನ್ನು ರಚಿಸಲಾಯಿತು.
ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಕಲ್ಪನಾ ಜಗದೀಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೇಕಲ್ ದೇವರಾಜ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್, ಆಯುಷ್ ಇಲಾಖೆಯ ವೈದ್ಯಾಧಿಕಾರಿ ಕೆ.ಸಿ.ಪಲ್ಲವಿ ಗ್ರಾ.ಪಂ ಸದಸ್ಯರಾದ ಕೆ.ಜಿ.ಜಯಶ್ರೀ, ಎಮ್.ಎಚ್.ಆಯಿಷ, ದೇವದತ್ತ ಅಂಗನವಾಡಿ ಕಾರ್ಯಕರ್ತರಾದ ಮಾಲಿನಿ, ಯಶೋಧ, ಕೆ.ಕೆ.ವಸಂತಿ, ಹರಿಣಾಕ್ಷಿ ,ಶಾಲಾ ಶಿಕ್ಷಕರಾದ ದೀಪ್ತಿ ,ರಾಜಶೇಖರ, ಎಸ್ ಡಿ ಎಂ ಸಿ ಅಧ್ಯಕ್ಷ ಎಸ್.ಆರ್.ಜಯಂತ್ ಸೇರಿದಂತೆ ಊರಿನ ಪ್ರಮುಖರು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಸ್ ಐ ಐ ಮುನೀರ್ ಅಹ್ಮದ್ ಸ್ವಾಗತಿಸಿದರು. ಬೇಕಲ್ ರಮಾನಾಥ ವಂದಿಸಿದರು.
ವರದಿ : ದುಗ್ಗಳ ಸದಾನಂದ








