ಮಡಿಕೇರಿ ಡಿ.14 : ಪ್ರಜಾಪ್ರಭುತ್ವದ ದೇಗುಲದಂತ್ತಿರುವ ಸಂಸತ್ ಭವನಕ್ಕೆ ನುಗ್ಗಿದ ಇಬ್ಬರು ವ್ಯಕ್ತಿಗಳು ಬಣ್ಣದ ಹೊಗೆಯ ಸ್ಪ್ರೇ ಬಳಸಿ ಆತಂಕ ಸೃಷ್ಟಿಸಿರುವುದು ಖಂಡನೀಯವೆಂದು ತಿಳಿಸಿರುವ ಆಮ್ ಆದ್ಮಿ ಪಾರ್ಟಿಯ ಕೊಡಗು ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ಅವರು, ಭದ್ರತಾ ಲೋಪಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಟೀಕಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಂಸತ್ ಭವನಕ್ಕೆ ಸೂಕ್ತ ಭದ್ರತೆ ನೀಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಸುಮಾರು 22 ವರ್ಷಗಳ ಹಿಂದೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಭಯೋತ್ಪಾದಕರ ದಾಳಿ ನಡೆದಿತ್ತು. ಇದೀಗ ಮತ್ತೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ವ್ಯಕ್ತಿಗಳು ಸಂಸತ್ ಭವನದೊಳಗೆ ನುಗ್ಗಿದ್ದಾರೆ. ಇದು ಕೇಂದ್ರ ಸರ್ಕಾರದ ಬೇಜವಾಬ್ದಾರಿತನಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಆರೋಪಿಸಿದ್ದಾರೆ.
ಸಂಸತ್ ಭವನಕ್ಕೇ ಭದ್ರತೆ ನೀಡಲಾಗದವರು ದೇಶದ ಜನತೆಗೆ ಭದ್ರತೆ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿರುವ ಭೋಜಣ್ಣ ಸೋಮಯ್ಯ, ಕೊಡಗು, ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರ ಮೂಲಕ ವ್ಯಕ್ತಿಗಳು ಪಾಸ್ ಪಡೆದಿರುವ ಪ್ರಕರಣ ಇಡೀ ಕ್ಷೇತ್ರದ ಜನತೆಗೆ ಮುಜುಗರವನ್ನುಂಟು ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದೇಶದ ಸೇನಾಕ್ಷೇತ್ರಕ್ಕೆ ಸಾವಿರಾರು ಸೈನಿಕರನ್ನು ನೀಡಿದ ಕೊಡಗು ಜಿಲ್ಲೆ ಶಿಸ್ತು ಮತ್ತು ಸ್ವಾಭಿಮಾನಕ್ಕೆ ಹೆಸರುವಾಸಿಯಾಗಿದೆ. ಆದರೆ ಈ ಕ್ಷೇತ್ರದಿಂದ ಆಯ್ಕೆಯಾದ ಒಬ್ಬ ಸಂಸದರು ಸಂಸತ್ ಪ್ರವೇಶಕ್ಕೆ ಪಾಸ್ ನೀಡುವ ಸಂದರ್ಭ ಪೂರ್ವಾಪರ ತಿಳಿಯದೆ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಇನ್ನು ಮುಂದೆಯಾದರೂ ತಾವು ಪ್ರತಿನಿಧಿಸುವ ಕ್ಷೇತ್ರಕ್ಕೆ ಮುಜುಗರ ಉಂಟಾಗದಂತೆ ಸಂಸದರು ಎಚ್ಚರ ವಹಿಸಲಿ ಎಂದು ಭೋಜಣ್ಣ ಸೋಮಯ್ಯ ಒತ್ತಾಯಿಸಿದ್ದಾರೆ.










