ಮಡಿಕೇರಿ ಡಿ.14: ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನದ ವಿಷಯದ ಕಲಿಕೆಯಲ್ಲಿ ಉತ್ತಮ ಯಶಸ್ಸನ್ನು ಸಾಧಿಸಲು ಅನ್ವೇಷಣೆ – ನರ್ಸರೀಸ್ ಆಫ್ ಟ್ಯಾಲೆಂಟ್ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಖಜಾಂಚಿ ಡಾ. ಕೆ.ಎನ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಕೊಡಗು ಶಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕರಿಕೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅನ್ವೇಷಣೆ – ನರ್ಸರೀಸ್ ಆಫ್ ಟ್ಯಾಲೆಂಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅದನ್ನು ಪ್ರೋತ್ಸಾಹಿಸುವುದು ಕಾರ್ಯಕ್ರಮದ ಉದ್ದೇಶ ಎಂದ ಅವರು, ನೀಡಿದ ಸಲಹೆಯನ್ನು ಅರ್ಥ ಮಾಡಿಕೊಂಡು ನಿಜ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಪಾಠವು ನಿಮಗೆ ಪ್ರಮಾಣ ಪತ್ರವನ್ನು ನೀಡಬಹುದು, ಒಳ್ಳೆಯ ಕೆಲಸ ಸಿಗುವಂತೆ ಮಾಡಬಹುದು, ಆದರೆ ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗುವುದು ಮುಖ್ಯವಾಗುತ್ತದೆ ಎಂದು ತಿಳಿಸಿದರು.
ಸಾಧನೆಗೆ ಯಾವುದು ಕೂಡಾ ಅಡ್ಡಿ ಬರುವುದಿಲ್ಲ, ನಾವು ಮನಸ್ಸು ಮಾಡಬೇಕಷ್ಟೇ. ಇಲ್ಲದಿರುವ ವ್ಯವಸ್ಥೆಗಳ ಕುರಿತು ಚಿಂತಿಸದೇ ಇರುವ ವ್ಯವಸ್ಥೆಗಳನ್ನು ಸದುಪಯೋಗಪಡಿಸಿಕೊಳ್ಳಿ. ಪ್ರಸ್ತುತ ದಿಗಳಲ್ಲಿ ಅಧ್ಯಯನ ನಡೆಸಲು ಸಾಕಷ್ಟು ಪುಸ್ತಕಗಳಿದ್ದು, ನಾವು ತಲೆ ತಗ್ಗಿಸಿ ಪುಸ್ತಕ ಓದಿದರೆ ಪುಸ್ತಕವು ನಮ್ಮನ್ನು ತಲೆ ಎತ್ತಿ ಓಡಾಡುವಂತೆ ಮಾಡುತ್ತದೆ. ಪುಸ್ತಕವನ್ನು ಓದುವುದರಿಂದ ಜ್ಞಾನ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕೊಡಗು ಸಾರ್ವಜನಿಕ ಶಿಕ್ಷಣ ಇಲಾಖೆಯ ಯೋಜನಾ ಉಪ ಸಮನ್ವಯಾಧಿಕಾರಿ ಎಂ.ಕೃಷ್ಣಪ್ಪ ಮಾತನಾಡಿ, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥೆಯ ಅನ್ವೇಷಣೆ ಕಾರ್ಯಕ್ರಮವು ವಿದ್ಯಾರ್ಥಿಗಳ ವಿಕಾಸಕ್ಕೆ ಸಹಕಾರಿಯಾಗಲಿದ್ದು, ಸಂಸ್ಥೆಯವರು ನೀಡಿರುವ ಈ ಸೌಲಭ್ಯಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಎಸ್.ಡಿ.ಎಮ್.ಸಿ. ಅಧ್ಯಕ್ಷ ಕೆ.ಆರ್.ಜನಾರ್ಧನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ತಾಲ್ಲೂಕಿನ ಶಿಕ್ಷಣ ಸಂಯೋಜನಾಧಿಕಾರಿ ಹರೀಶ್, ಕರಿಕೆ ಸರ್ಕಾರಿ ಪ್ರೌಢಶಾಲಾ ಎಸ್.ಡಿ.ಎಮ್.ಸಿ. ಸದಸ್ಯ ಸತ್ಯನಾಥ್, ಮುಖ್ಯೋಪಾಧ್ಯಾಯರಾದ ರಾಜಶೇಖರ್ ಮತ್ತು ಎಸ್.ವಿ.ವೈ.ಎಮ್. ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಅಂಕಾಚಾರಿ ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು.