ಸೋಮವಾರಪೇಟೆ ಡಿ.15 : ಅಂಗಡಿ ಮಳಿಗೆ ಹರಾಜು ವಿಚಾರದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರನ್ನು ಕಡೆಗಣಿಸಲಾಗಿದೆ ಎಂಬ ವಿಚಾರ ಇಂದು ಪ್ರತಿಭಟನೆಯ ಸ್ವರೂಪ ಪಡೆದುಕೊಂಡಿತು. ಅಧಿಕಾರಿಗಳ ವಿರುದ್ಧ ಘೋಷಣೆ, ಮಾತಿನ ಚಕಮಕಿ ನಡೆಯಿತು.
ಪಟ್ಟಣದ ಖಾಸಗಿ ಬಸ್ ನಿಲ್ದಾಣ ಸೇರಿದಂತೆ ವಿವಿಧ ಭಾಗದ 60 ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಡಳಿತಾಧಿಕಾರಿಗಳು ಹಾಗೂ ಅಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಹರಾಜಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದ ಸದಸ್ಯರು ಹರಾಜು ಪ್ರಕ್ರಿಯೆ ಮುಂದೂಡಿ ಹಾಗೂ ಸಭೆ ಕರೆಯಿರಿ ಎಂದು ಮನವಿ ಮಾಡಿದರೂ ಸ್ಪಂದಿಸದ ಆಡಳಿತಾಧಿಕಾರಿ ಕ್ರಮ ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬೆಳಗ್ಗಿನಿಂದಲೇ ಪಂಚಾಯ್ತಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಡಳಿತಾಧಿಕಾರಿ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು.
12 ಗಂಟೆಗೆ ಆಗಮಿಸಿದ ಆಡಳಿತಾಧಿಕಾರಿಯನ್ನುದ್ದೇಶಿಸಿ ಮಾತನಾಡಿದ ಪ್ರತಿಭಟನಾಕಾರರು ಹಿಂದಿನ ಸಭೆಯಲ್ಲಿ ನಮ್ಮ ಅಭಿಪ್ರಾಯ ತಪ್ಪಾಗಿ ನಿರ್ಣಯ ಮಾಡಿದ್ದೀರಿ, ನಂತರ ಎರಡು ಸಭೆಗಳನ್ನು ಮುಂದೂಡಿದ್ದೀರಿ, ನಮ್ಮನ್ನು ಕಡೆಗಣಿಸಿ ಹರಾಜು ಕರೆದಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಹರಾಜು ಪ್ರಕ್ರಿಯೆಯನ್ನು ಮುಂದೂಡಿ ತಕ್ಷಣ ಸಭೆ ಕರೆಯಿರಿ ಎಂದು ಒತ್ತಾಯಿಸಿದರು.
ಇದಕ್ಕೆ ಆಡಳಿತಾಧಿಕಾರಿ ಪ್ರತಿಕ್ರಿಯಿಸಿ ನಾನು ಸರಿಯಾಗಿಯೇ ಮಾಡಿದ್ದೇನೆ, ಹರಾಜು ಮುಂದೂಡುವ ಪ್ರಶ್ನೆಯೇ ಇಲ್ಲ ಹಾಗೂ ಸಭೆಯ ಅವಶ್ಯಕತೆಯೂ ಇಲ್ಲ. ನನ್ನಿಂದ ತಪ್ಪಾಗಿದೆ ಎನ್ನುವುದಾದರೆ ಮೇಲಧಿಕಾರಿಗಳಿಗೆ ದೂರು ನೀಡಿ ಎಂದರು. ಇದು ಪ್ರತಿಭಟನಾಕಾರರನ್ನು ಮತ್ತಷ್ಟು ಕೆರಳಿಸಿತು. ಈ ಸಂದರ್ಭ ಅಧಿಕಾರಿಯ ವಾಹನಕ್ಕೆ ಅಡ್ಡ ನಿಂತು ದಿಕ್ಕಾರ ಕೂಗಿದರು.
ಹಿಂತಿರುಗಿ ಬಂದ ಆಡಳಿತಾಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸದಸ್ಯರು ಸೆ.13ರ ಸಭೆಯಲ್ಲಿ ನಾವುಗಳು ಹರಾಜು ನಡೆಸುವಂತೆ ತಿಳಿಸಿಲ್ಲ. ಆದರೆ ನೀವು ನಿರ್ಣಯ ಕೈಗೊಂಡಿದ್ದೀರಿ, ನಂತರ ಎರಡು ಸಭೆಗಳಲ್ಲಿ ಹರಾಜಿನ ವಿಷಯವಿಟ್ಟು ಸಭೆ ಮುಂದೂಡಿದ್ದೀರಿ, ನಮ್ಮ ಗಮನಕ್ಕೆ ಬಾರದೆ ಏಕಾಏಕಿ ಹರಾಜು ಪ್ರಕಟಣೆ ನೀಡಿದ್ದೀರಿ. ಜನರಿಂದ ಆಯ್ಕೆಯಾಗಿರುವ ನಾವು ಇರುವುದು ಯಾಕೆ ಎಂದು ಪ್ರಶ್ನಿಸಿದರು.
ಶಾಸಕರ ಸಮ್ಮುಖದಲ್ಲಿ ಸಭೆ ಕರೆಯಿರಿ ಎಂಬ ಒತ್ತಡಕ್ಕೆ ಮಣಿದ ಆಡಳಿತಾಧಿಕಾರಿಗಳು ಶನಿವಾರ ಸಭೆ ಕರೆಯುವುದಾಗಿ ತಿಳಿಸಿದರು. ಆದರೆ ಈ ಬಗ್ಗೆ ಲಿಖಿತವಾಗಿ ಭರವಸೆ ನೀಡುವಂತೆ ಸದಸ್ಯರು ಪಟ್ಟು ಹಿಡಿದರು. ಒಂದಷ್ಟು ಕಾಲ ಮಾತಿನ ಚಕಮಕಿ ನಡೆಯಿತು.
ಶನಿವಾರ ಸಭೆ ನಡೆಸುವುದಾಗಿ ತಿಳಿಸಿ ಹೊರ ನಡೆದರು.
ಪಟ್ಟಣ ಪಂಚಾಯ್ತಿ ಸದಸ್ಯರುಗಳಾದ ಚಂದ್ರು, ಸಂಜೀವ, ಮೃತ್ಯುಂಜಯ, ಮೋಹಿನಿ, ಶೀಲಾ ಡಿಸೋಜ, ಜೀವನ್, ಮಹೇಶ್, ನಾಗರತ್ನ ಹಾಗೂ ಶುಭಕರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಕಲ್ಪಿಸಿದ್ದರು.











