ಮಡಿಕೇರಿ ಡಿ.15 : ವಿಶ್ವ ರಾಷ್ಟ್ರ ಸಂಸ್ಥೆಯ ಜಾಗತಿಕ ಅಲ್ಪಸಂಖ್ಯಾತ ಜನಾಂಗಗಳ ಹಕ್ಕುಗಳ ದಿನದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ 14ನೇ ವರ್ಷದ “ಗನ್ ಕಾರ್ನಿವಲ್ ತೋಕ್ ನಮ್ಮೆ”ಯನ್ನು ಡಿ.18 ರಂದು ನಾಪೋಕ್ಲು ಕೊಳಕೇರಿಯ ನೂರಂಬದ ನಾಡ್ ನಲ್ಲಿ ಆಚರಿಸಲಾಗುವುದು ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜನಪದೀಯ ಹಬ್ಬವಾಗಿ ತೋಕ್ ನಮ್ಮೆಯನ್ನು ಅತಿ ಉತ್ಸಾಹದಿಂದ ಆಚರಿಸುವ ಮೂಲಕ ಕೋವಿ ಹೊಂದುವ ಕೊಡವರ ಹಕ್ಕನ್ನು ಪ್ರತಿಪಾದಿಸಲಾಗುವುದು ಎಂದಿದ್ದಾರೆ.
ಕೊಳಕೇರಿಯ ನೂರಂಬದ ನಾಡ್ ನಲ್ಲಿರುವ ರಮ್ಮಿ ನಾಣಯ್ಯ ಹಾಗೂ ರೀನಾ ನಾಣಯ್ಯ ಅವರ ಕಾವೇರಿ ಎಸ್ಟೇಟ್ ನ ಕಾವೇರಿ ನದಿ ದಂಡೆಯಲ್ಲಿ ನಮ್ಮೆ ನಡೆಯಲಿದೆ. ಕೋವಿಗಳನ್ನು ಸಾಂಪ್ರದಾಯಿಕ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಗುವುದು. ನಂತರ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗಾಗಿ ಗುಂಡು ಹಾರಿಸುವ ಸ್ಪರ್ಧೆ ನಡೆಯಲಿದೆ. ನಮ್ಮೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಂದೂಕುಗಳನ್ನು ಪ್ರದರ್ಶಿಸುವುದರಿಂದ ಪ್ರತಿಯೊಬ್ಬರು ಬಂದೂಕು ಸಹಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನಾಚಪ್ಪ ಮನವಿ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಕಲೆ, ಶಿಲ್ಪ ಕಲೆ, ಕೊಡವ ಸಾಹಿತ್ಯ, ಪತ್ರಿಕೋದ್ಯಮ, ಸಮಾಜಿಕ, ಶಿಕ್ಷಣ, ಕೃಷಿ, ಉದ್ಯಮಶೀಲತೆ ಮುಂತಾದ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ “ಕೊಡವ ವಿಭೂಷಣ” ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಗನ್ ಕೊಡವ ಜನಾಂಗದ ಧಾರ್ಮಿಕ-ಜನಾಂಗೀಯ ಸಂಸ್ಕಾರವಾಗಿದೆ, ಗತಕಾಲದ ಶ್ರೀಮಂತ ಭಂಡಾರವಾಗಿದೆ. ಇದೇ ಕಾರಣಕ್ಕೆ ಪ್ರಸ್ತುತದಲ್ಲಿ ಮತ್ತು ಭವಿಷ್ಯದಲ್ಲಿಯೂ ಈ ನಮ್ಮ ಹಕ್ಕು ಮುಂದುವರಿಯುತ್ತದೆ.
ಕೊಡವರು ಶಸ್ತ್ರಾಸ್ತ್ರ/ಬಂದೂಕನ್ನು ಹೊಂದಲು ವಿನಾಯಿತಿ ನೀಡಲಾಗಿದೆ. ಭಾರತವು ಸ್ವಾತಂತ್ರ್ಯ ಪಡೆದ ನಂತರ, ಭಾರತೀಯ ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್ 3 ಮತ್ತು 4 ರಡಿಯಲ್ಲಿ ಗನ್ ವಿನಾಯಿತಿ ಹಕ್ಕು ಅಸ್ತಿತ್ವದಲ್ಲಿದೆ. ಆದರೆ 1956 ರಲ್ಲಿ ರಾಜ್ಯ ಪುನರ್-ಸಂಘಟನೆಯ ಕಾಯ್ದೆಯಡಿಯಲ್ಲಿ ಕೂರ್ಗ್ ಪ್ರದೇಶವನ್ನು ವಿಲೀನಗೊಳಿಸಿದ ನಂತರ ಆಳುವ ವರ್ಗಗಳು ನಮ್ಮ ಧಾರ್ಮಿಕತೆ ಮತ್ತು ವಿಶೇಷ ಹಕ್ಕುಗಳಿಗೆ ಧಕ್ಕೆ ತರಲು ಪ್ರಾರಂಭಿಸಿದವು. ಸರ್ಕಾರ ನಮ್ಮ ಎಲ್ಲಾ ಹಕ್ಕುಗಳನ್ನು ಕಸಿದುಕೊಂಡಿದೆ, ಸ್ವಯಂ ನಿರ್ಣಯದ ಹಕ್ಕು ಇಲ್ಲದಂತೆ ಮಾಡಿದೆ. ಇದು ಸಾಂವಿಧಾನಿಕ ಉಲ್ಲಂಘನೆಯ ಕ್ರಮವಾಗಿದೆ ಎಂದು ನಾಚಪ್ಪ ಆರೋಪಿಸಿದ್ದಾರೆ.
ಗನ್ ಕೊಡವ ಜನಾಂಗದ ಧಾರ್ಮಿಕ ಮತ್ತು ಸಾಂಸ್ಕೃತಿಕ ಲಾಂಛನವಾಗಿದೆ ಹಾಗೂ ಜಾನಪದ ಸಂಕೇತವಾಗಿದೆ. ಆದ್ದರಿಂದ ಈ ಪ್ರಾಚೀನ ಹೆಮ್ಮೆಯನ್ನು ರಕ್ಷಿಸಬೇಕು ಮತ್ತು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎನ್ನುವ ಉದ್ದೇಶದಿಂದ ಸಿಎನ್‍ಸಿ ಸಂಘಟನೆ ತೋಕ್ ನಮ್ಮೆಯನ್ನು ಸಾರ್ವತ್ರಿಕವಾಗಿ ಆಚರಿಸಿಕೊಂಡು ಬರುತ್ತಿದೆ ಎಂದು ಹೇಳಿದ್ದಾರೆ.










