ಮಡಿಕೇರಿ ಡಿ.15 : ದಕ್ಷಿಣ ಕೊಡಗಿನಲ್ಲಿ ವರ್ಷದ ಹಿಂದೆ ‘ಪೊನ್ನಂಪೇಟೆ ತಾಲ್ಲೂಕು’ ರಚನೆಯಾಗಿದೆ. ಆದರೆ ನೂತನ ತಾಲ್ಲೂಕಿಗೆ ಮತ್ತು ಇಲ್ಲಿನ ಜನತೆಗೆ ದೊರಕಬೇಕಾದ ಯಾವುದೇ ಸೌಲಭ್ಯಗಳು ಇಲ್ಲಿಯವರೆಗೆ ತಲುಪಿಲ್ಲವೆಂದು ಸಾರ್ವಜನಿಕ ಹಿತರಕ್ಷಣಾ ಸಮಿತಿ ಆರೋಪಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ, ವಿವಿಧ ಸಂಘಟನೆಗಳ ಹೋರಾಟದಿಂದ ಪೊನ್ನಂಪೇಟೆ ತಾಲ್ಲೂಕು ಅಸ್ತಿತ್ವಕ್ಕೆ ಬಂದಿದೆ. ನೂತನ ತಾಲ್ಲೂಕು ಕಚೇರಿ ಆರಂಭಿಸಿರುವ ಸರಕಾರ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಿಲ್ಲ. ಈಗ ಇರುವ ಸಿಬ್ಬಂದಿಗಳ ಸಂಖ್ಯೆ ಬೆರಳೆಣಿಕೆಯಷ್ಟಿದ್ದು, ಇದರಿಂದ ಅಗತ್ಯ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಹಿಂದಿನಂತೆ ವಿರಾಜಪೇಟೆ ತಾಲ್ಲೂಕು ಕಚೇರಿಗೆ ತೆರಳುವ ಅನಿವಾರ್ಯತೆ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪೊನ್ನಂಪೇಟೆ ತಾಲ್ಲೂಕು ಕಚೇರಿಯಲ್ಲಿರುವ ಕೆಲವೇ ಸಿಬ್ಬಂದಿಗಳು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಹಳಷ್ಟು ಕೆಲಸಗಳಿಗೆ ವಿರಾಜಪೇಟೆ ತಾಲ್ಲೂಕು ಕಚೇರಿಗೆ ತೆರಳುವಂತೆ ಸೂಚಿಸುತ್ತಾರೆ. ಸರ್ವೇ ವಿಭಾಗವು ವಿರಾಜಪೇಟೆಯಿಂದ ಪೊನ್ನಂಪೇಟೆಗೆ ವರ್ಗಾವಣೆಯಾಗದೇ ಇರುವುದರಿಂದ ಈ ವ್ಯಾಪ್ತಿಯ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ತಕ್ಷಣ ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
::: ಬಸ್ ನಿಲ್ದಾಣವಿಲ್ಲ :::
ದಕ್ಷಿಣ ಕೊಡಗಿನ ವಾಣಿಜ್ಯ ನಗರಿಯಾಗಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಗೋಣಿಕೊಪ್ಪಲುವಿನಲ್ಲಿ ದಿನದಿಂದ ದಿನಕ್ಕೆ ವಾಹನದಟ್ಟಣೆ, ಜನಸಂಖ್ಯೆ ಹೆಚ್ಚಾಗುತ್ತಿದೆ. ಹೈಟೆಕ್ ಬಸ್ ನಿಲ್ದಾಣದ ಅಗತ್ಯವಿದೆ ಎನ್ನುವ ಸಾರ್ವಜನಿಕರ ಬೇಡಿಕೆ ಇಂದಿಗೂ ಈಡೇರಿಲ್ಲವೆಂದು ಕಟ್ಟಿ ಮಂದಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ದಶಕದ ಹಿಂದೆ ಗೋಣಿಕೊಪ್ಪಲಿನಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಕೋಟಿ ಅನುದಾನ ಬಿಡುಗಡೆಯಾಗಿದೆ ಎನ್ನಲಾಗುತಿತ್ತು. ಆದರೆ, ಈ ಅನುದಾನ ಬಂದಿದೆಯೋ ಇಲ್ಲವೋ ಎನ್ನುವುದು ತಿಳಿದಿಲ್ಲ. ಇನ್ನಾದರು ಗೋಣಿಕೊಪ್ಪಲಿನಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸುವಂತೆ ನೂತನ ಶಾಸಕರಿಗೆ ಮನವಿ ಸಲ್ಲಿಸಿ ಒತ್ತಡ ಹೇರುವುದಾಗಿ ತಿಳಿಸಿದರು.
ಸಮಿತಿ ಕಾರ್ಯಾಧ್ಯಕ್ಷ ಬಾಚೀರ ಕಾಶಿ ಕಾರ್ಯಪ್ಪ ಮಾತನಾಡಿ, ಗೋಣಿಕೊಪ್ಪದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಇಲ್ಲದಿರುವ ಬಗ್ಗೆ ಈ ಹಿಂದೆ ಹಲವು ಬಾರಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯಲಾಗಿದೆ. ಆದರೆ ಇಲ್ಲಿಯವರೆಗೆ ನೂತನ ಬಸ್ ನಿಲ್ದಾಣ ನಿರ್ಮಾಣಗೊಂಡಿಲ್ಲ. ಗೋಣಿಕೊಪ್ಪ ವೇಗವಾಗಿ ಬೆಳವಣಿಗೆ ಕಾಣುತ್ತಿದ್ದು, ಟ್ರಾಫಿಕ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಸಣ್ಣುವಂಡ ರತ್ನ ಸುಬ್ಬಯ್ಯ, ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ ಹಾಗೂ ಸಂಘಟನಾ ಕಾರ್ಯದರ್ಶಿ ಕೋಳೆರ ಸನ್ನು ಕಾವೇರಪ್ಪ ಉಪಸ್ಥಿತರಿದ್ದರು.









