ಮಡಿಕೇರಿ ಡಿ.15 : ಮಾನವ ಬಂಧುತ್ವ ವೇದಿಕೆ ವತಿಯಿಂದ ಡಿ.18 ರಂದು ‘ಕಲ್ಯಾಣ ರಾಜ್ಯದ ಪರಿಕಲ್ಪನೆ ಸತ್ಯ ಮತ್ತು ಮಿಥ್ಯೆಗಳು’ ಎನ್ನುವ ವಿಷಯವನ್ನು ಆಧರಿಸಿ ನಗರದಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ವಿಭಾಗೀಯ ಸಂಚಾಲಕ ಸತೀಶ್ ಕುಮಾರ್ ಸರ್ವರಿಗು ಸಮಪಾಲು, ಸರ್ವರಿಗು ಸಮ ಬಾಳು ಎಂಬ ತತ್ತ್ವದ ಮೇಲೆ ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ‘ಕಲ್ಯಾಣ ರಾಜ್ಯ’ ಎಂಬ ಪರಿಕಲ್ಪನೆ ನಮ್ಮ ರಾಜ್ಯ ಮತ್ತು ದೇಶದಲ್ಲಿ ಯಾವ ಪ್ರಮಾಣದಲ್ಲಿ ಅನುಷ್ಟಾನಗೊಂಡಿದೆ ಎನ್ನುವ ಅಂಶದ ಬಗ್ಗೆ ವಿಚಾರ ಸಂಕಿರಣದಲ್ಲಿ ಬೆಳಕು ಚೆಲ್ಲಲಾಗುವುದು ಎಂದರು.
ನಗರದ ಕೂರ್ಗ್ ಕಮ್ಯೂನಿಟಿ ಹಾಲ್ನಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಗೆ ಆರಂಭಗೊಳ್ಳುವ ವಿಚಾರ ಸಂಕಿರಣವನ್ನು ಚಿಂತಕರು, ಸಾಹಿತಿಗಳು ಮತ್ತು ಇತಿಹಾಸ ಸಂಶೋಧಕರಾದ ಕೆ.ಆರ್.ವಿದ್ಯಾಧರ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ವೇದಿಕೆಯ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ ವಹಿಸಲಿದ್ದಾರೆ. ಮೊದಲ ಗೋಷ್ಠಿಯಲ್ಲಿ ಕರ್ನಾಟಕ ಕಾರ್ಮಿಕ ಚಳವಳಿಯ ನಾಯಕರಾದ ಬೆಂಗಳೂರಿನ ಡಾ.ಪ್ರಕಾಶ್ ಅವರು ‘ಕಲ್ಯಾಣ ರಾಜ್ಯದ ಪರಿಕಲ್ಪನೆ ಮತ್ತು ಕಾರ್ಪೋರೇಟ್ ಶಕ್ತಿಗಳ ಹುನ್ನಾರ’ದ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ.
ದ್ವಿತೀಯ ಗೋಷ್ಠಿಯಲ್ಲಿ ‘ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳ ಹೊರೆ- ಜನ ತಿಳಿಯದ ಮಾಯಾಜಾಲ’ ವಿಷಯದ ಕುರಿತು ಚಿಂತಕರು ಮತ್ತು ಲೇಖಕರಾದ ಬೆಂಗಳೂರಿನ ಬಿ.ಶ್ರೀಪಾದ ಭಟ್ ಮಾತನಾಡಲಿದ್ದಾರೆ. ಈ ಸಂದರ್ಭ ಲೇಖಕಿ ಮತ್ತು ಯುವ ಉದ್ಯಮಿಯಾದ ಮೈಸೂರಿನ ಡಾ.ಶ್ವೇತಾ ಮಡಪ್ಪಾಡಿ, ಸಾಮಾಜಿಕ ಹೋರಾಟಗಾರ ನೆರವಂಡ ಉಮೇಶ್, ಕೊಡಗು ಜಿ.ಪಂ ಮಾಜಿ ಉಪಾಧ್ಯಕ್ಷರಾದ ಡಾ.ಹೆಚ್.ಎಂ.ಕಾವೇರಿ, ಸಾಮಾಜಿಕ ಹೋರಾಟಗಾರ ಟಿ.ಈ.ಸುರೇಶ್ ಪ್ರತಿಕ್ರಿಯೆ ಮಂಡಿಸಲಿದ್ದಾರೆ. ಅತಿಥಿಗಳಾಗಿ ವೇದಿಕೆಯ ನಿಕಟಪೂರ್ವ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ಪಾಲ್ಗೊಳ್ಳಲಿದ್ದಾರೆ ಎಂದು ಸತೀಶ್ ಕುಮಾರ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಜೆ.ಎಲ್.ಜನಾರ್ಧನ, ಸಕ್ರಿಯ ಸದಸ್ಯರುಗಳಾದ ನೆರವಂಡ ಉಮೇಶ್, ರಮಾನಾಥ್ ಬೇಕಲ್ , ಹನೀಫ್ ಸಂಪಾಜೆ ಹಾಗೂ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ವೀರೇಂದ್ರ ಉಪಸ್ಥಿತರಿದ್ದರು.









