ಮಡಿಕೇರಿ ಡಿ.15 : ಕನ್ನಡ ಚಿತ್ರರಂಗದ ಖ್ಯಾತ ನಟ ದಿ.ಡಾ.ವಿಷ್ಣುವರ್ಧನ್ ಅವರ ಸಮಾಧಿ ಇರುವ ಸ್ಥಳ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಿಸಬೇಕೆಂದು ಒತ್ತಾಯಿಸಿ ಡಿ.17 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಕೊಡಗು ಜಿಲ್ಲೆಯ ವಿಷ್ಣು ಅಭಿಮಾನಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೊಡಗು ಜಿಲ್ಲಾ ವಿಷ್ಣು ಸೇನಾ ಸಮಿತಿಯ ಜಿಲ್ಲಾಧ್ಯಕ್ಷ ರಫೀಕ್ (ದಾದಾ) ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ಡಾ.ವಿಷ್ಣುವರ್ಧನ್ ಅವರು ನಿಧನ ಹೊಂದಿ ಇಷ್ಟು ವರ್ಷಗಳೇ ಕಳೆದರೂ ಸ್ಮಾರಕವನ್ನು ನಿರ್ಮಿಸದೆ ಇರುವುದು ವಿಷಾದನೀಯ. ಈ ನಿರ್ಲಕ್ಷ್ಯ ಧೋರಣೆ ಅಭಿಮಾನಿಗಳಿಗೆ ಅತೀವ ದು:ಖ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ನಿರ್ಮಿಸಬೇಕೆಂದು ಆಗ್ರಹಿಸಿ ವಿಷ್ಣು ಅಭಿಮಾನಿಗಳಿಂದ ಭಾನುವಾರ ಬೃಹತ್ ಪ್ರತಿಭಟನೆ ನಡೆಯಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳ ಸಾವಿರಾರು ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ಕೊಡಗು ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಬೆಂಗಳೂರಿಗೆ ತೆರಳಿ ಸ್ಮಾರಕಕ್ಕಾಗಿ ಒತ್ತಾಯಿಸಲಿದ್ದಾರೆ ಎಂದು ರಫೀಕ್ (ದಾದಾ) ತಿಳಿಸಿದ್ದಾರೆ.









