ಗೋಣಿಕೊಪ್ಪ ಡಿ.15 : ಉತ್ತಮ ಪುಸ್ತಕಗಳನ್ನು ಓದುವುದರಿಂದ ಖಿನ್ನತೆಯಿಂದ ಹೊರಬರಲು ಸಾಧ್ಯ ಎಂದು ಪತ್ರಕರ್ತ ಜಗದೀಶ್ ಜೋಡುಬೀಟಿ ತಿಳಿಸಿದರು.
ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂಕಗಳಿಗಾಗಿ ಶಿಕ್ಷಣದ ಉದ್ದೇಶವನ್ನು ಈಡೇರಿಸಿಕೊಳ್ಳದೆ, ಉತ್ತಮ ಜೀವನ ಸಾಗಿಸಲು ಮೌಲ್ಯಾಧಾರಿತ ಶಿಕ್ಷಣವನ್ನು ಪಡೆಯಬೇಕು ಎಂದು ಹೇಳಿದರು.
ವಿವೇಕಾನಂದ, ಗಾಂಧಿ, ಅಂಬೇಡ್ಕರ್ ಅಂತ ಜೀವನ ಮಾದರಿ ಪುಸ್ತಕಗಳ ಓದಿನಿಂದ ಪ್ರೇರಣೆ ಹೊಂದುವ ಮೂಲಕ ಬದುಕನ್ನ ಉತ್ಕೃಷ್ಟಗೊಳಿಸಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಶಿಕ್ಷಣಕಷ್ಟೇ ಸೀಮಿತವಾಗದೆ ಸಮಾಜದ ಹೊರಗಿನ ನಡೆಯ ಬಗ್ಗೆ ತಿಳಿದುಕೊಳ್ಳುತ್ತಾ ಬದುಕನ್ನು ಅನುಭವಿಸಬೇಕು ಎಂದು ಹೇಳಿದರು.
ಒಬ್ಬ ವ್ಯಕ್ತಿಯ ಬದುಕಿನಲ್ಲಿ ಬದಲಾವಣೆಯನ್ನು ಕಂಡುಕೊಳ್ಳಲು ಪುಸ್ತಕಗಳ ಓದಿನಿಂದ ಸಾಧ್ಯವಾಗಬಲ್ಲದು. ಉತ್ತಮ ಪುಸ್ತಕಗಳಿಗಿಂತ ಬೇರೆ ಸ್ನೇಹಿತರಿರಲು ಸಾಧ್ಯವಿಲ್ಲ. ಒಮ್ಮೆ ಓದಿನ ರುಚಿ ಹೆಚ್ಚಿಸಿಕೊಂಡಾಗ ಖಿನ್ನತೆಗೆ ಒಳಗಾಗುವುದನ್ನು ತಪ್ಪಿಸುವುದರ ಜತೆಗೆ ಇದರ ಪರಿಣಾಮದಿಂದ ಮಾದಕ ವ್ಯಸನಿಗಳಾಗುವುದನ್ನು ತಡೆಗಟ್ಟಬಹುದಾಗಿದೆ ಎಂದು ಸಲಹೆ ನೀಡಿದರು.
ಗೋಣಿಕೊಪ್ಪ ಪೊಲೀಸ್ ಠಾಣಾ ಹೆಡ್‍ಕಾನ್ಸ್ಟೇಬಲ್ ಮಾದಪಂಡ ಕೆ.ಪೂವಣ್ಣ ಮಾತನಾಡಿ, ವಿದ್ಯಾರ್ಥಿಗಳು ಓದಿನ ಕಡೆಗಣನೆಗಷ್ಟೇ ಗಮನ ಹರಿಸಬೇಕು. ಮಾದಕ ಪದಾರ್ಥಗಳ ಸೇವನೆಯಿಂದ ತಮ್ಮ ವ್ಯಕ್ತಿತ್ವ ಮತ್ತು ಸಮಾಜವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು.
ಹೀಗಾಗಿ, ಅಲ್ಪ ಸಂತೋಷಕ್ಕಾಗಿ ಮಾದಕ ವ್ಯಸನಿಗಳಾಗದೆ ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಮಾದಕ ವಸ್ತುಗಳ ದುಷ್ಪರಿಣಾಮಗಳು ಮತ್ತು ಸೈಬರ್ ಕ್ರೈಮ್ ಗಳ ಬಗ್ಗೆ ಮಾಹಿತಿ ನೀಡಿದರು.
ಕಾವೇರಿ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲ ಎನ್.ಎಂ. ನಾಣಯ್ಯ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಎ.ಎಂ.ಡಯಾನ ಸೋಮಯ್ಯ, ರಾ.ಸೇ.ಯೋ. ಕಾರ್ಯಕ್ರಮಾಧಿಕಾರಿ ಗಾಯತ್ರಿ ಮತ್ತು ಸ್ವಯಂಸೇವಕರು ಇದ್ದರು.









