ಸುಂಟಿಕೊಪ್ಪ,ಡಿ.16: ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಸ್ಕೌಟ್ಸ್-ಗೈಡ್ಸ್, ಕಬ್ಸ್ ಹಾಗೂ ಬುಲ್ ಬುಲ್ ದಳಗಳ ವಿದ್ಯಾರ್ಥಿಗಳಿಗೆ ಪರಿಸರ ವೀಕ್ಷಣೆ ಮತ್ತು ಮಾಹಿತಿ ಕಾರ್ಯಾಗಾರ ನಡೆಯಿತು.
ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ಪರಿಸರ ವೀಕ್ಷಣೆ ಮತ್ತು ಮಾಹಿತಿ ಕಾರ್ಯಾಗಾರ ಕಾರ್ಯಕ್ರಮವನ್ನು ಭಾರತ್ ಸ್ಕೌಟ್ಸ್ ಗೈಡ್ಸ್‍ನ ಸಂಘಟಕರಾದ ದಮಯಂತಿ ಧ್ವಜಾರೋಹಣ ನೇರವೇರಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸ್ಕೌಟ್ಸ್ ಮತ್ತು ಗೈಡ್ಸ್‍ನ ಧ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ನೀಡಿದರು.
ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಅದೇ ರೀತಿಯಲ್ಲಿ ಸಮಾಜದಲ್ಲಿ ಸಂಕಷ್ಟದಲ್ಲಿರುವ ಜನತೆಗೆ ಸೇವೆಯನ್ನು ಸಲ್ಲಿಸುವ ಮೂಲಕ ಸೇವಾ ಮನೋಭಾವನೆಯನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಕಾವೇರಿ ನಿಸರ್ಗಧಾಮದ ವನರಕ್ಷಕರು ಅರಣ್ಯ ಹಾಗೂ ಪರಿಸರದ ಬಗ್ಗೆ ಮಾಹಿತಿ ನೀಡಿದರು.
ನಂತರ 4 ದಳಗಳ ಸದಸ್ಯರು ವಿವಿಧ ಚಟುವಟಿಕೆಗಳಾದ ಪರಿಸರ ವೀಕ್ಷಣೆ, ಸಾಹಸ ಕ್ರೀಡೆ ಮೂಲಕ ಮನರಂಜಿಸಿ ಉತ್ತಮ ಮೌಲ್ಯಗಳ ವಿಚಾರದ ಕುರಿತು ಮಾಹಿತಿಯನ್ನು ನೀಡಿದರು.
ಈ ಸಂದರ್ಭ ಶಾಲಾ ಮುಖ್ಯೋಪಾದ್ಯಯಿನಿ ವೀರಾ ಡಿಸೋಜ, ಗೈಡ್ಸ್‍ನ ಶಿಕ್ಷಕಿ ಪ್ರೀತಿ ಜಾಯ್ಸ್ ಡಿಕುನ್ನಾ, ಸ್ಕೌಟ್ಸ್ ಮಹೇಶ್, ಕಬ್ಸ್, ಬುಲ್ ಬುಲ್ ದಳದ ಶಿಕ್ಷಕಿ ಯೀವಾ ಬೆನ್ನಿಸ್, ದಳಗಳ ನಾಯಕರು ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.