ಮಡಿಕೇರಿ ಡಿ.16 : ವನ್ಯಜೀವಿಗಳ ಸ್ವಚ್ಛಂದ ಬದುಕಿಗೆ ತೊಡಕಾಗಬಲ್ಲ ಅರಣ್ಯ ಪ್ರವಾಸೋದ್ಯಮಕ್ಕೆ ಅವಕಾಶ ನೀಡಬಾರದೆಂದು ರೈತ ಸಂಘದ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.
ತಿತಿಮತಿಯ ಅರಣ್ಯ ಇಲಾಖೆಯ ಅತಿಥಿಗೃಹದಲ್ಲಿ ನಾಗರಹೊಳೆ ವನ್ಯಜೀವಿ ವಿಭಾಗ, ಕೊಡಗು ಮತ್ತು ಹುಣಸೂರು ವನ್ಯಜೀವಿ ವಿಭಾಗದ ಅಧಿಕಾರಿಗಳೊಂದಿಗೆ ರೈತ ಸಂಘದ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಮತ್ತಿಗೋಡು ಸಾಕಾನೆ ಶಿಬಿರದ ಪ್ರವಾಸೋದ್ಯಮ ಚಟುವಟಿಕೆಯನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿದರು.
ತಿತಿಮತಿ- ಹುಣಸೂರು ಹೆದ್ದಾರಿಯಲ್ಲಿ ವಾಹನದಟ್ಟಣೆ ಹೆಚ್ಚಾಗಿ ತೊಂದರೆಯಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಹೊಸ ಪ್ರವಾಸೋದ್ಯಮ ಚಟುವಟಿಕೆಗೆ ಅವಕಾಶ ನೀಡಬಾರದು. ಅರಣ್ಯ ಪ್ರವಾಸೋದ್ಯಮದಿಂದ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾಡಾನೆ, ಹುಲಿ ಮತ್ತು ಚಿರತೆಗಳಿಂದ ಗ್ರಾಮೀಣ ಪ್ರದೇಶದಲ್ಲಿ ಆಗುತ್ತಿರುವ ದಾಳಿ ಹಾಗೂ ಕೃಷಿಕರು ಅನುಭವಿಸುತ್ತಿರುವ ನಷ್ಟದ ಕುರಿತು ವಿವರಿಸಿದ ರೈತ ಸಂಘದ ಪದಾಧಿಕಾರಿಗಳು ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸುವಂತೆ ಒತ್ತಾಯಿಸಿದರು.
ಹಿರಿಯ ಅರಣ್ಯ ಅಧಿಕಾರಿಗಳು ಹಾಗೂ ರೈತ ಸಂಘದ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.










