ಮಡಿಕೇರಿ ಡಿ.16 : ಸುಸಂಸ್ಕೃತ ಕೊಡವ ಜನಾಂಗಕ್ಕೆ ಜೀವನಾದರ್ಶ ಮತ್ತು ಸಂಸ್ಕೃತಿಯ ಪ್ರತೀಕವಾಗಿರುವ ಐನ್‍ಮನೆಯೇ ಆಧಾರ ಸ್ತಂಭವಾಗಿದೆ. ಕೊಡಗಿನ ಐನ್‍ಮನೆಗಳು ಚೇತರಿಸಿಕೊಳ್ಳುವ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಅವರು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟ ಪ್ರಕಟಿಸಿದ 77ನೇ ಪುಸ್ತಕ ಹಾಗೂ ಲೇಖಕಿ ಐಚಂಡ ರಶ್ಮಿ ಮೇದಪ್ಪ ಅವರು ಬರೆದಿರುವ 2ನೇ ಪುಸ್ತಕ “ಸಾಂಸ್ಕೃತಿಕ ಪಿಂಞ ಧಾರ್ಮಿಕ ಹಿನ್ನಲೆಲ್ ಕೊಡವಡ ಐನ್‍ಮನೆ” ಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಐನ್‍ಮನೆಗಳು ಕೊಡವರ ಜೀವನಾದರ್ಶ, ಸಂಸ್ಕೃತಿ, ಸಭ್ಯತೆಗಳ ಪ್ರತೀಕವಾಗಿದ್ದು, ವಂಶದ ಮೂಲ ಕಾರಣ ಪುರುಷರನ್ನು ಇಲ್ಲಿ ನೆಲೆಗೊಳಿಸಿ ಪೂಜಿಸುವುದರಿಂದ ಈ ಮನೆಗೆ ಪೂಜನೀಯ ಸ್ಥಾನಮಾನವಿದೆ. ಕೊಡವ ಜನಾಂಗದ ಸಂಸ್ಕೃತಿಗೆ ಜೀವ ತುಂಬಿರುವ ಐನ್‍ಮನೆಯ ಕುರಿತು ಪುಸ್ತಕ ರಚಿಸಿರುವುದು ಶ್ಲಾಘನೀಯವೆಂದರು.
ಐನ್‍ಮನೆಯಲ್ಲಿ ಕಲಾತ್ಮಕತೆ ಇದೆ, ಕೊಡವ ಸಂಸ್ಕೃತಿಯ ಜೀವವಿದೆ, ಕೊಡವ ಜನಾಂಗದ ಜೀವಮಾನ ಅಡಗಿದೆ. ಈ ಪೂಜನೀಯ ಮತ್ತು ಭಾವನೀಯ ಐನ್‍ಮನೆಯನ್ನು ಉಳಿಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ಎಲ್ಲರ ಮೇಲಿದೆ. ರಶ್ಮಿ ಮೇದಪ್ಪ ಅವರು ಐನ್‍ಮನೆ ಕುರಿತು ಬರೆದಿರುವ ಪುಸ್ತಕ ಅಧ್ಯಯನಶೀಲವಾಗಿದ್ದು, ಪ್ರತಿಯೊಬ್ಬ ಕೊಡವರ ಮನೆಯಲ್ಲಿ ಸಂಗ್ರಹಕ್ಕೆ ಯೋಗ್ಯವಾಗಿದೆ. ಕೊಡವ ಸಂಸ್ಕೃತಿ ಹೇಗೆ ಲೋಕ ಪ್ರಸಿದ್ಧವಾಯಿತು ಎಂಬುವುದನ್ನು ಲೇಖಕಿ ಆಳವಾಗಿ ಅಧ್ಯಯನ ಮಾಡಿದ್ದಾರೆ. ಬಹಳ ಉತ್ತಮವಾದ ಬರವಣಿಗೆ, ಭಾಷಾ ಕೌಶಲ್ಯ ಮತ್ತು ಕುಟುಂಬಗಳ ಪೂರ್ವ ಇತಿಹಾಸ, ಸಂಸ್ಕೃತಿ ಇದರಲ್ಲಿ ಅಡಕವಾಗಿದ್ದು, ಯುಗ ಯುಗಾಂತರ ಕೊಂಡೊಯ್ಯುವ ಪುಸ್ತಕ ಇದಾಗಿದೆ ಎಂದು ವಿವರಿಸಿದರು.
ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ಮೂಲಕ ಅಲ್ಪಾವಧಿಯಲ್ಲಿ ದಾಖಲೆಯ 77 ಪುಸ್ತಕಗಳನ್ನು ಓದುಗರಿಗೆ ನೀಡಿರುವ ಕೊಡವ ಮಕ್ಕಡ ಕೂಟದ ಸ್ಥಾಪಕಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಕಾರ್ಯ ಮಾದರಿಯಾಗಿದೆ ಎಂದು ಬಾಚರಣಿಯಂಡ ಪಿ.ಅಪ್ಪಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಮಾತನಾಡಿ, ಇಂದಿನ ಮಹಿಳೆಯರು ಸಂಸಾರವನ್ನು ಸರಿದೂಗಿಸಿಕೊಂಡು ಹೋಗುವುದರೊಂದಿಗೆ ಸಾಹಿತ್ಯ ಕ್ಷೇತ್ರದ ಬಗ್ಗೆಯೂ ಆಸಕ್ತಿ ತೋರಿ ಪುಸ್ತಕಗಳನ್ನು ರಚಿಸುತ್ತಿರುವುದು ಹೆಮ್ಮೆಯ ವಿಚಾರವೆಂದರು.
ಕೊಡವ ಜನಾಂಗಕ್ಕೆ ಉತ್ತಮ ಸ್ಥಾನಮಾನವನ್ನು ದೊರೆಕಿಸಿಕೊಟ್ಟಿರುವುದು ಐನ್‍ಮನೆಗಳು. ಬಹಳ ಹಿಂದಿನಿಂದಲೂ ಕೊಡವ ಜನಾಂಗದ ಯಾವುದೇ ಶುಭ ಸಮಾಂಭಗಳನ್ನು ಐನ್‍ಮನೆಯಲ್ಲಿ ಆಚರಿಸುವ ಪದ್ಧತಿ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಐನ್‍ಮನೆಯಲ್ಲಿ ಯಾರೂ ವಾಸವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಡವ ಸಂಸ್ಕೃತಿ, ಆಚಾರ ವಿಚಾರವನ್ನು ಜನಾಂಗ ಬಾಂಧವರು ಉಳಿಸಿ, ಬೆಳೆಸಿಕೊಂಡು ಹೋಗುವುದರ ಜೊತೆಗೆ ಮುಂದಿನ ಪೀಳಿಗೆಗೂ ಪರಿಚಯಯಿಸುವ ಕಾರ್ಯ ಆಗಬೇಕು ಎಂದರು.
ಮಡಿಕೇರಿ ಕೊಡವ ಸಮಾಜದಲ್ಲಿ ಗ್ರಂಥಾಲಯವನ್ನು ರೂಪಿಸಿ ಪುಸ್ತಕವನ್ನು ಇಡುವ ಗುರಿ ಹೊಂದಲಾಗಿದೆ. ಜನಾಂಗ ಬಾಂಧವರು ಬರೆದು ಬಿಡುಗಡೆಗೊಳಿಸಿದ 128 ಪುಸ್ತಕಗಳನ್ನು ಈಗಾಗಲೇ ಸಂಗ್ರಹಿಸಿಡಲಾಗಿದ್ದು, ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಮುತ್ತಪ್ಪ ಹೇಳಿದರು.
ಸುಬ್ರಹ್ಮಣ್ಯ ಕೇರಿ ಅಧ್ಯಕ್ಷ ನಾಳೆಯಂಡ ನಾಣಯ್ಯ ಮಾತನಾಡಿ, ಐನ್‍ಮನೆ ಕೊಡವ ಕುಟುಂಬದ ದೈವ ನೆಲೆಯಾಗಿದ್ದು, ಅದನ್ನು ದೇವಾಲಯದಂತೆ ಪೂಜಿಸಲಾಗುತ್ತದೆ. ಜನಾಂಗ ಬಾಂಧವರು ಕೊಡವಾಮೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.
ಓದುಗರು ಹೆಚ್ಚು ಹೆಚ್ಚು ಪುಸ್ತಕಗಳನ್ನು ಕೊಂಡುಕೊಳ್ಳುವ ಮೂಲಕ ಬರಹಗಾರರನ್ನು ಪ್ರೋತ್ಸಾಹಿಸಬೇಕು ಎಂದ ಅವರು, ಕೊಡವರ ಆಚಾರ, ವಿಚಾರ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಕೊಡವ ಮಕ್ಕಡ ಕೂಟದ ಕಾರ್ಯ ಪ್ರಶಂಸನೀಯ ಎಂದರು.
“ಸಾಂಸ್ಕೃತಿಕ ಪಿಂಞ ಧಾರ್ಮಿಕ ಹಿನ್ನಲೆಲ್ ಕೊಡವಡ ಐನ್‍ಮನೆ” ಪುಸ್ತಕ ಬರಹಗಾರ್ತಿ ಐಚಂಡ ರಶ್ಮಿ ಮೇದಪ್ಪ ಮಾತನಾಡಿ, ಈ ಪುಸ್ತಕ ತಾನು ಬರೆದಿರುವ ಎರಡನೇಯ ಪುಸ್ತಕವಾಗಿದ್ದು, ಇದು ಎಂ.ಎ ಕೊಡವ ಪದವಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಅಧ್ಯಯನದ ಪ್ರಬಂಧ ಪುಸ್ತಕವಾಗಿದೆ. ಮಾರ್ಗದರ್ಶಕರಾದ ಬಾಚರಣಿಯಂಡ ಅಪ್ಪಣ್ಣ ಅವರ ಅಭಿಪ್ರಾಯದಂತೆ, ನನ್ನ ಪತಿ ಐಚಂಡ ಪಿ.ಮೇದಪ್ಪ ಅವರ ಸಹಕಾರ ಮತ್ತು ಕೊಡವ ಮಕ್ಕಡ ಕೂಟದ ಸಹಯೋಗದೊಂದಿಗೆ ಪುಸ್ತಕ ರೂಪದಲ್ಲಿ ಹೊರತರಲಾಗಿದೆ ಎಂದು ತಿಳಿಸಿದರು.
ಐನ್‍ಮನೆಯಲ್ಲಿ ವಾಸವಿದ್ದ ಕೊಡವ ಕೂಡು ಕುಟುಂಬದ ಇತಿಹಾಸ, ಐನ್‍ಮನೆಯ ಪರಿಕಲ್ಪನೆ, ಅರ್ಥ, ವ್ಯಾಖ್ಯಾನ, ಐನ್‍ಮನೆಯೊಂದಿಗಿನ ಕೊಡವರ ಸಂಬಂಧ, ಹಬ್ಬ ಹರಿದಿನಗಳಲ್ಲಿ ಐನ್‍ಮನೆಯ ಪಾತ್ರ ಮತ್ತು ವಿದ್ಯಾಭ್ಯಾಸದ ಮೊದಲು ಐನ್‍ಮನೆಗಳು ಹೇಗೆ ಕಲಿಕೆಯ ಕೇಂದ್ರವಾಗಿದ್ದವು ಹಾಗೂ ಅದರ ಒಂದು ಭಾಗವಾದ ಕೈಮಾಡದ ಬಗ್ಗೆಯೂ ವಿವರಣೆ ನೀಡಲಾಗಿದೆ. ಕೆಲವು ಕುಟುಂಬದ ಕಾರೋಣ ಕಥೆಗಳು, ಕುಟುಂಬಗಳಿಗೆ ಹೆಸರು ಬಂದ ವಿವರಣೆ ಸೇರಿದಂತೆ ಹಲವು ವಿಚಾರಗಳನ್ನು ಚಿತ್ರಗಳ ಸಹಿತ ವಿವರಿಸಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಕೊಡವ ಮಕ್ಕಡ ಕೂಟ ಪ್ರಕಟಿಸಿರುವ 76 ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ಅಗ್ನಿಯಾತ್ರೆ ಪುಸ್ತಕಕ್ಕೆ “ಗೌರಮ್ಮ ದತ್ತಿ ನಿಧಿ” ಪ್ರಶಸ್ತಿ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ. 1965ರ ಯುದ್ಧ ಹಾಗೂ ಕೊಡಗಿನ ಮಹಾವೀರ ಸ್ಕ್ವಾ.ಲೀ ಅಜ್ಜಮಾಡ ದೇವಯ್ಯ ಅವರ ಜೀವನಾಧಾರಿತ ಪುಸ್ತಕ ಬಾಲಿವುಡ್ ಸಿನಿಮಾವಾಗಿ ತೆರೆ ಮೇಲೆ ಬರಲು ಸಿದ್ಧತೆ ನಡೆಸಿದೆ.
ಅಲ್ಲದೆ ಕೊಡವರು ಹಾಗೂ ಕಾವೇರಿ, ಮಹಾವೀರ ಅಚ್ಚುನಾಯಕ, ಕೊಡಗಿನ ಗಾಂಧಿ ಪಂದ್ಯಂಡ ಐ.ಬೆಳ್ಯಪ್ಪ, 1965ರ ಯುದ್ಧ ಹಾಗೂ ಕೊಡಗಿನ ಮಹಾವೀರ, ಆಟ್‍ಪಾಟ್ ಪಡಿಪು (ನಾಲ್ಕು ಸಾವಿರ ಪುಸ್ತಕವನ್ನು ಮಕ್ಕಳಿಗೆ ಉಚಿತವಾಗಿ ನೀಡಲಾಗಿದೆ.), ಕೊಡವ ಕ್ರೀಡಾ ಕಲಿಗಲು, Kodagu Principality V/s British Emipire, The Major who kept his cool, ಪುಣ್ಯಕ್ಷೇತ್ರ ಪರಿಚಯ ಸೇರಿದಂತೆ ಹಲವು ದಾಖಲೀಕರಣ ಪುಸ್ತಕ, ಸಾಧಕರ ವಿವರದ ಪುಸ್ತಕ ಕೊಡಗಿನ ಹಾಗೂ ಕೊಡವ ಆಚಾರ, ವಿಚಾರ ಸಂಬಂಧಪಟ್ಟಂತ ಪುಸ್ತಕ, ಕೊಡಗಿನ ಎರಡು ಮಹಾವೀರ ಚಕ್ರ ಪುರಸ್ಕೃತ ವೀರ ಯೋಧರ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಅಲ್ಲದೆ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವ ಮೂಲಕ ಪ್ರಥಮ ಪುಸ್ತಕವನ್ನು ಕೊಡವ ಮಕ್ಕಡ ಕೂಟದ ಮೂಲಕ ಹೊರ ತರಲಾಗಿದೆ.
“ಸಾಂಸ್ಕೃತಿಕ ಪಿಂಞ ಧಾರ್ಮಿಕ ಹಿನ್ನಲೆಲ್ ಕೊಡವಡ ಐನ್‍ಮನೆ ಪುಸ್ತಕವನ್ನು ಸಂಶೋಧನಾತ್ಮಕವಾಗಿ ಬರೆಯಲಾಗಿದ್ದು, ಪ್ರತಿಯೊಬ್ಬ ಕೊಡವರ ಮನೆಗಳಲ್ಲಿ ಇರಬೇಕಾದ ವಿಶೇಷ ದಾಖಲೆಯ ಪುಸ್ತಕವಾಗಿದೆ ಎಂದು ಅಯ್ಯಪ್ಪ ತಿಳಿಸಿದರು.
ಸಮಾಜ ಸೇವಕಿ ಐಚಂಡ ಶಾಂತಿ ಪೂಣಚ್ಚ ಉಪಸ್ಥಿತರಿದ್ದರು.
Breaking News
- *ಕೊಡಗು : ಡಿ.1 ರಿಂದ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಪ್ರಕ್ರಿಯೆ ಆರಂಭ : ಜಿಲ್ಲಾಧಿಕಾರಿ ವೆಂಕಟ್ ರಾಜಾ*
- *ಪಡಿತರ ಚೀಟಿ ಪರಿಷ್ಕರಣೆ : ಅರ್ಹ ಬಿಪಿಎಲ್ ಕಾರ್ಡ್ ರದ್ದುಗೊಳಿಸುವುದಿಲ್ಲ : ಸಚಿವ ಮುನಿಯಪ್ಪ*
- *ಕೊಡಗು ಬ್ಲಡ್ ಡೋನಸ್೯ ಸಂಸ್ಥೆಯ 7ನೇ ವಾಷಿ೯ಕೋತ್ಸವ : ಜೀವ ಉಳಿಸುವ ರಕ್ತದಾನಿಗಳೇ ನಿಜವಾದ ಹೀರೋಗಳು : ಅನಿಲ್ ಹೆಚ್.ಟಿ.*
- *ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಚುನಾವಣೆ : ಜಾನ್ಸನ್ ಪಿಂಟೋ ಸೇರಿ ಹಲವರು ಕಣದಲ್ಲಿ*
- *ಕಲ್ಲು ಬಾಯ್ಸ್ ಲೈಕ್ಸ್ ಫ್ಯಾಶನ್ ಫುಟ್ಬಾಲ್ ಕಪ್ : ನಿಯೋನ್ ಎಫ್.ಸಿ ಅಮ್ಮತ್ತಿ ಚಾಂಪಿಯನ್*
- *ಗ್ರಾ.ಪಂ ಉಪಚುನಾವಣೆ : ಕೊಡಗಿನ ವಿವಿಧೆಡೆ ಮದ್ಯ ಮಾರಾಟ ನಿಷೇಧ*
- *ನಂದಿನಿ ವಿವಿಧ ಶ್ರೇಣಿಯ ಹಾಲು ಬಿಡುಗಡೆ : ದೇಶದ ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ*
- *ಕಟ್ಟೆಹಾಡಿ ಅರಣ್ಯ ಹಕ್ಕು ಸಮಿತಿ ರಚನೆ : ಆದಿವಾಸಿಗಳನ್ನು ಒಕ್ಕಲೆಬ್ಬಿಸದಂತೆ ಆಗ್ರಹ*
- *ನ.29 ರಂದು ವಾಲ್ನೂರು-ತ್ಯಾಗತ್ತೂರು ಗ್ರಾಮ ಸಭೆ*
- *ಕೊಡಗು : ಗ್ರಾ.ಪಂ.ಉಪಚುನಾವಣೆ : ವಿವಿಧ ಸಂತೆ, ಜಾತ್ರೆಗಳ ನಿಷೇಧ*