ಮಡಿಕೇರಿ ಡಿ.16 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಡಿ.18 ರಂದು ನಾಪೋಕ್ಲು ಕೊಳಕೇರಿಯ ನೂರಂಬದ ನಾಡ್ ನಲ್ಲಿ ನಡೆಯುವ 14ನೇ ವರ್ಷದ “ಗನ್ ಕಾರ್ನಿವಲ್ ತೋಕ್ ನಮ್ಮೆ”ಯಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯಸಭಾ ಮಾಜಿ ಸದಸ್ಯ, ಕರ್ನಾಟಕ ವಿಧಾನ ಪರಿಷತ್ ಸದಸ್ಯ, ವಿರೋಧ ಪಕ್ಷದ ಮಾಜಿ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಳಕೇರಿಯ ನೂರಂಬದ ನಾಡ್ ನಲ್ಲಿರುವ ರಮ್ಮಿ ನಾಣಯ್ಯ ಹಾಗೂ ರೀನಾ ನಾಣಯ್ಯ ಅವರ ಕಾವೇರಿ ಎಸ್ಟೇಟ್ ನ ಕಾವೇರಿ ನದಿ ದಂಡೆಯಲ್ಲಿ ನಮ್ಮೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಿ.ಕೆ.ಹರಿಪ್ರಸಾದ್ ಅವರು ಪಾಲ್ಗೊಳ್ಳುತ್ತಿರುವುದರಿಂದ ನಮ್ಮ ನೈತಿಕತೆ ಹೆಚ್ಚಿದೆ ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ಕೊಡವ ಗನ್ ವಿನಾಯಿತಿ ಹಕ್ಕುಗಳ ಮುಂದುವರಿಕೆಯನ್ನು ಅವರು ಸಮರ್ಥಿಸಿದ್ದರು. ಅಧಿಕಾರದಲ್ಲಿರುವ ಸರ್ಕಾರ ಶಸ್ತ್ರಾಸ್ತ್ರ ಮತ್ತು ಯುದ್ಧಸಾಮಾಗ್ರಿ ತಿದ್ದುಪಡಿ ಮಸೂದೆಯನ್ನು ತಂದಾಗ ಸಂಸತ್ತಿನಲ್ಲಿ ಚರ್ಚೆ ನಡೆಯಿತು. ಸರ್ಕಾರ ಕೊಡವರ ಜೀವಿತಾವಧಿಯ ಗನ್ ವಿನಾಯಿತಿ ಹಕ್ಕುಗಳನ್ನು 10 ವರ್ಷಗಳವರೆಗೆ ಸೀಮಿತಗೊಳಿಸಿತು. ಅಂದರೆ 2019 ರಿಂದ 2029 ರವರೆಗೆ ಎಂದು. ಈ ವಿಚಾರದಲ್ಲಿ ನಮ್ಮದೇ ಪ್ರತಿನಿಧಿ ಹಗೆತನದ ನಿಲುವು ತಳೆದಾಗ ಹರಿಪ್ರಸಾದ್ ಅವರು ಕೊಡವರ ಪರವಾಗಿ ನಿಂತರು. ನಮ್ಮ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಮಂಡಿಸಿ ಕೊಡವರ ಸ್ವಾಭಿಮಾನವನ್ನು ಎತ್ತಿ ಹಿಡಿದರು ಮತ್ತು ಕೋವಿ ಕೊಡವರ ಧಾರ್ಮಿಕ ಸಂಸ್ಕಾರ ಎಂಬುವುದನ್ನು ಇಡೀ ರಾಷ್ಟ್ರಕ್ಕೆ ತೋರಿಸಿಕೊಟ್ಟರು. ಆದ್ದರಿಂದ ಸಿಎನ್‍ಸಿ ಭಕ್ತಿಯಿಂದ ಆಚರಿಸುತ್ತಿರುವ ತೋಕ್ ನಮ್ಮೆಯಲ್ಲಿ ಹರಿಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವುದಕ್ಕೆ ಯೋಗ್ಯ ವ್ಯಕ್ತಿಯಾಗಿದ್ದಾರೆ ಎಂದು ನಾಚಪ್ಪ ತಿಳಿಸಿದ್ದಾರೆ.







