ಸೋಮವಾರಪೇಟೆ ಡಿ.17: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ 60 ಅಂಗಡಿ ಮಳಿಗೆ ಹರಾಜು ವಿಚಾರ ಭಾರೀ ಚರ್ಚೆಗೆ ಒಳಪಟ್ಟಿರುವ ಬೆನ್ನಲ್ಲೇ ಶಾಸಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲೂ ತೀರ್ಮಾನ ಅಂತಿಮಗೊಂಡಿಲ್ಲ. ಸಭೆಯಲ್ಲಿ ಚರ್ಚೆಗಳು ನಡೆದರೂ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಅಂತಿಮವಾಗಿ ಜಿಲ್ಲಾಧಿಕಾರಿಗಳ ಅಂಗಳಕ್ಕೆ ಟೆಂಡರ್ ಪ್ರಕ್ರಿಯೆಯ ಚೆಂಡನ್ನು ಎಸೆಯಲಷ್ಟೇ ಸಭೆ ಸೀಮಿತವಾಯಿತು.
ಮಳಿಗೆಗಳ ಹರಾಜು ವಿಚಾರ ಮುನ್ನೆಲೆಗೆ ಬಂದಾಗಿನಿಂದಲೂ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳ ನಡುವೆ ತಿಕ್ಕಾಟ ಆರಂಭಗೊಂಡಿದ್ದು, ಶಾಸಕರ ಮಧ್ಯೆ ಪ್ರವೇಶದ ನಂತರವೂ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ತಾ.14ರಂದು ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಆಡಳಿತಾಧಿಕಾರಿಗಳ ನಡುವೆ ಪಂಚಾಯಿತಿ ಮುಂಭಾಗವೇ ಸಾರ್ವಜನಿಕರೆದುರು ಜಟಾಪಟಿ ನಡೆದಿದ್ದು, ಈ ಸಂದರ್ಭ ತಾ.16ರಂದು ಸಭೆ ಕರೆಯುವ ಬಗ್ಗೆ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಯೂ ಆಗಿರುವ ತಹಶೀಲ್ದಾರ್ ನರಗುಂದ್ ಅವರು ಭರವಸೆ ನೀಡಿದ್ದರು.
ಅದರಂತೆ ನಿನ್ನೆ (ಡಿ.16)ಸಂಜೆ 5 ಗಂಟೆಗೆ ಪಟ್ಟಣ ಪಂಚಾಯಿತಿಯಲ್ಲಿ ಸಭೆ ನಿಗದಿಯಾಗಿದ್ದರೂ, ಸಭೆಯನ್ನು ನಿಗದಿ ಮಾಡಿದ್ದ ಆಡಳಿತಾಧಿಕಾರಿ ನಿಗದಿತ ಸಮಯಕ್ಕೆ ಸಭೆಗೆ ಆಗಮಿಸಲಿಲ್ಲ. ಸದಸ್ಯರುಗಳು ಪಂಚಾಯಿತಿಗೆ ಆಗಮಿಸಿ ಸಭೆಗಾಗಿ ಕಾಯುತ್ತಿದ್ದರೂ ಅಧಿಕಾರಿಗಳ ಸುಳಿವು ಇರಲಿಲ್ಲ. ಇಲ್ಲಿಂದ ಆರಂಭವಾದ ಅಪಸ್ವರಗಳು ಎರಡೂವರೆ ಗಂಟೆಗಳ ಕಾಲ ತಡವಾಗಿ ಆರಂಭವಾದ ಸಭೆಯಲ್ಲೂ ಮುಂದುವರೆಯಿತು.
5 ಗಂಟೆಯ ಬದಲಾಗಿ 6.30ರ ಸುಮಾರಿಗೆ ಆಗಮಿಸಿದ ಆಡಳಿತಾಧಿಕಾರಿಗಳು ಸಭೆಯನ್ನು ನಡೆಸಲು ಮುಂದಾಗುತ್ತಿದ್ದಂತೆ, ಸದಸ್ಯರುಗಳು ಅಪಸ್ವರ ಎತ್ತಿದರು. ಶಾಸಕರ ಉಪಸ್ಥಿತಿಯಲ್ಲಿಯೇ ಈ ಹಿಂದಿನ ಸಭೆ ನಡೆಸಲಾಗಿದೆ. ಈಗಿನ ಸಭೆಗೂ ಶಾಸಕರು ಬರಲಿ. ನಂತರ ಸಭೆ ಆರಂಭಿಸುವ ಬಗ್ಗೆ ಒತ್ತಾಯಿಸಿದರು. ಪರಿಣಾಮ ಅಂತಿಮವಾಗಿ 7.30ರ ಸುಮಾರಿಗೆ ಸಭೆ ಆರಂಭವಾಯಿತು.
ಒಂದೇ ವಿಚಾರಕ್ಕೆ ಸಭೆ ಸೀಮಿತವಾಗಿದ್ದರಿಂದ ಆರಂಭದಲ್ಲಿಯೇ ಮಳಿಗೆಗಳ ಹರಾಜಿನ ಬಗ್ಗೆ ಚರ್ಚೆ ಕೈಗೆತ್ತಿಕೊಳ್ಳಲಾಯಿತು. ಈ ಹಿಂದೆ ನಿಮ್ಮ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಟೆಂಡರ್ ಮಾಡುವ ಮುನ್ನ ಈಗಿರುವ ವರ್ತಕರಿಗೆ ಅಂಗಡಿಗಳನ್ನು ಮುಂದುವರೆಸುವ ಬಗ್ಗೆ ಸರ್ಕಾರದ ಅಭಿಪ್ರಾಯ ಕೇಳಲು ನಿರ್ಧರಿಸಲಾಗಿತ್ತು. ಆದರೆ ಆಡಳಿತಾಧಿಕಾರಿಗಳು ಏಕಾಏಕಿ ಟೆಂಡರ್‌ನ್ನು ತಾ. 21ಕ್ಕೆ ನಿಗದಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ ಹಾಗೂ ನಿಮ್ಮ ಅಭಿಪ್ರಾಯಕ್ಕೂ ಬೆಲೆ ನೀಡಿಲ್ಲ ಎಂದು ಸದಸ್ಯರುಗಳು, ಶಾಸಕರು ಗಮನಕ್ಕೆ ತಂದರು.
ಈ ಸಂದರ್ಭ ಮಾತನಾಡಿದ ಶಾಸಕ ಡಾ. ಮಂಥರ್ ಗೌಡ ಅವರು, ಅಂದಿನ ಸಭೆಯಲ್ಲಿ ಟೆಂಡರ್ ವಿಚಾರ ಪ್ರಸ್ತಾಪಗೊಂಡು ಸರ್ಕಾರದ ಅಭಿಪ್ರಾಯ ಸಂಗ್ರಹಿಸಲು ನಿರ್ಧರಿಸಲಾಗಿತ್ತು. ನಂತರದ ದಿನಗಳಲ್ಲಿ ಟೆಂಡರ್‌ಗೆ ದಿನಾಂಕ ಮಾಡಿರುವ ಬಗ್ಗೆ ಮಾಹಿತಿಯಿಲ್ಲ. ಇಂತಹ ಕ್ರಮ ಏಕಾಯಿತು? ಎಂದು ಪ್ರಶ್ನಿಸಿದರು.
ಈ ಸಂದರ್ಭ ಮಾತನಾಡಿದ ಆಡಳಿತಾಧಿಕಾರಿ ನರಗುಂದ್ ಅವರು, ಸರ್ಕಾರದ ಮಾರ್ಗಸೂಚಿಯಂತೆ ಟೆಂಡರ್‌ಗೆ ದಿನಾಂಕ ನಿಗದಿ ವiಡುವ ಅನಿವಾರ್ಯತೆಯಿತ್ತು. ಹಾಗಾಗಿ ದಿನಾಂಕ ನಿಗದಿ ಮಾಡಲಾಗಿದೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರುಗಳು, ಹಿಂದಿನ ಸಭೆಯಲ್ಲಿ ಶಾಸಕರ ಉಪಸ್ಥಿತಿಯಲ್ಲಿಯೇ ಚರ್ಚೆ ನಡೆದು, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪತ್ರ ಬರೆದು ಈಗಿರುವವರಿಗೆ ಬಾಡಿಗೆ ಹಾಗೂ ಮುಂಗಡ ಹಣವನ್ನು ಹೆಚ್ಚಿಸಿ ಮಳಿಗೆ ನೀಡಲು ಅವಕಾಶ ಇದೆಯೇ ಎಂಬ ಬಗ್ಗೆ ಸ್ಪಷ್ಟನೆ ಕೇಳಲು ತೀರ್ಮಾನಿಸಲಾಗಿತ್ತು. ಅದನ್ನು ಮುಚ್ಚಿಟ್ಟು ಸಭಾ ನಿರ್ಣಯವನ್ನೂ ತಿದ್ದಿ ತಾ. 21ಕ್ಕೆ ಟೆಂಡರ್ ನಿಗದಿಪಡಿಸಿ ಪ್ರಕಟಣೆ ಹೊರಡಿಸಿರುವುದು ಸರಿಯಲ್ಲ ಎಂದು ನರಗುಂದ್ ಅವರ ವಿರುದ್ಧ ಮುಗಿಬಿದ್ದರು.
ಈ ಸಂದರ್ಭ ಸಭೆಯಲ್ಲಿ ಭಾರೀ ವಾಗ್ವಾದಗಳು ನಡೆಯಿತು. ಇದೀಗ ನಿಗದಿ ಪಡಿಸಿರುವ ಟೆಂಡರ್ ದಿನಾಂಕವನ್ನು ಮುಂದೂಡಬೇಕು. ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಕರೆದು ಟೆಂಡರ್ ಬಗ್ಗೆ ತೀರ್ಮಾನಿಸಬೇಕೆಂದು ಸದಸ್ಯರುಗಳು ಪಟ್ಟು ಹಿಡಿದರು.
ಅಂತಿಮವಾಗಿ ಮಾತನಾಡಿದ ಶಾಸಕ ಮಂಥರ್ ಗೌಡ ಅವರು, ಪಟ್ಟಣ ಪಂಚಾಯಿತಿ ಮಳಿಗೆಗಳಲ್ಲಿ ಯಾರು ವ್ಯಾಪಾರ ವಹಿವಾಟು ನಡೆಸುತ್ತಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಆದರೆ ಇಲ್ಲಿ ವ್ಯಾಪಾರ ವಹಿವಾಟು ಎಷ್ಟರ ಮಟ್ಟಿಗೆ ನಡೆಯುತ್ತಿದೆ ಎಂಬ ಬಗ್ಗೆ ಅರಿವಿದೆ. ಈಗಿರುವ ವರ್ತಕರು ಕಷ್ಟದ ನಡುವೆಯೂ ವಹಿವಾಟು ನಡೆಸಿಕೊಂಡು ಬರುತ್ತಿದ್ದಾರೆ. ಅವರುಗಳ ಜೊತೆಯಲ್ಲಿ ತಾನು ನಿಲ್ಲುತ್ತೇನೆ ಎಂದರಲ್ಲದೆ, ಅಂತಿಮವಾಗಿ ಟೆಂಡರ್ ವಿಚಾರಕ್ಕೆ ಸಂಬಂಧಿಸಿದಂತೆ ಸದಸ್ಯರುಗಳು ಪತ್ರ ನೀಡಲಿ. ಅವರುಗಳ ಅಭಿಪ್ರಾಯದಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಈಗಿರುವವರಿಗೇ ಮಳಿಗೆಗಳನ್ನು ನೀಡಲು ಮನವಿ ಮಾಡಲಾಗುವುದು. ಅಂತಿಮವಾಗಿ ಸರ್ಕಾರದ ನಿಯಮಕ್ಕೆ ಎಲ್ಲರೂ ಒಳಪಡಬೇಕಿದೆ ಎಂದರು.
ಅಧಿಕೃತವಾಗಿ ಸುತ್ತೋಲೆ ಹೊರಡಿಸಿ ಕರೆಯಲಾಗಿದ್ದ ಸಭೆ ಮುಕ್ತಾಯಗೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಇಂದಿನ ಸಭೆ ಅಧಿಕೃತ ಸಭೆಯಲ್ಲ. ತಾ. 14ರಂದು ಸದಸ್ಯರುಗಳು ಟೆಂಡರ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದ ಹಿನ್ನೆಲೆ ಇಂದು ಮಾತುಕತೆ ನಡೆಸಲಾಗಿದೆ. ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದು, ತಾ. 18ರಂದು ಜಿಲ್ಲಾಧಿಕಾರಿಗಳೊಂದಿಗೆ ವಿಸ್ತೃತ ಚರ್ಚೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು. ಸರ್ಕಾರದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಬೇಕಿದೆ. ಕಾನೂನಿನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಸದಸ್ಯರುಗಳಾದ ಸಂಜೀವ, ಶೀಲಾ ಡಿಸೋಜ, ಮೃತ್ಯುಂಜಯ, ಬಿ.ಆರ್. ಮಹೇಶ್, ಪಿ.ಕೆ. ಚಂದ್ರು, ಜಯಂತಿ ಶಿವಕುಮಾರ್, ಜೀವನ್, ಮೋಹಿನಿ, ಶುಭಕರ್, ಮುಖ್ಯಾಧಿಕಾರಿ ನಾಚಪ್ಪ, ಆಡಳಿತಾಧಿಕಾರಿ ನರಗುಂದ್, ಪಂಚಾಯಿತಿ ಸಿಬ್ಬಂದಿಗಳು ಇದ್ದರು.
ಒಟ್ಟಾರೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ 60 ಮಳಿಗೆಗಳ ಹರಾಜು ಪ್ರಕ್ರಿಯೆ ಇದೇ ಮೊದಲ ಬಾರಿಗೆ ಭಾರೀ ಪೈಪೋಟಿಗೆ ಕಾರಣವಾಗಿದ್ದು, ಇಂದಿನ ಸಭೆಯಲ್ಲಿಯೂ ಅಂತಿಮ ತೀರ್ಮಾನವಾಗದೇ ಗೊಂದಲ ಮುಂದುವರೆದಿದೆ. ಇದೀಗ ಟೆಂಡರ್ ಪ್ರಕ್ರಿಯೆಯ ಚೆಂಡು ಜಿಲ್ಲಾಧಿಕಾರಿಗಳ ಅಂಗಳ ತಲುಪಿದೆ.
Breaking News
- *ಜಯ ಹೇ ಕರ್ನಾಟಕ ಮಾತೆ ಗೀತೆಗೆ 100 ವರ್ಷ : ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು*
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*